1 ಸಾವಿರ MBBS ಸೀಟು ಹೆಚ್ಚಳ!!

ಬೆಂಗಳೂರು:

      ವೈದ್ಯಕೀಯ ಕೋರ್ಸುಗಳಿಗೆ ಪ್ರವೇಶ ಪಡೆಯಲು ನೀಟ್‌ ಪದ್ಧತಿ ಜಾರಿಗೆ ಬಂದ ಮೇಲೆ ಕಂಗಾಲಾಗಿದ್ದ ರಾಜ್ಯಕ್ಕೀಗ ನೆಮ್ಮದಿಯ ಸುದ್ದಿ ತಲುಪಿದೆ.

      ಹೌದು, ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ 1 ಸಾವಿರ ಎಂ.ಬಿ.ಬಿ.ಎಸ್‌ ಸೀಟುಗಳನ್ನು ಕೇಂದ್ರ ಮಂಜೂರು ಮಾಡಿದೆ.ರಾಜ್ಯದ ಮೆಡಿಕಲ್‌ ಕಾಲೇಜುಗಳಲ್ಲಿ ಈಗಿದ್ದ ಸೀಟುಗಳ ಸಂಖ್ಯೆ ಸುಮಾರು 4 ಸಾವಿರದಷ್ಟಿತ್ತು. ಕೇಂದ್ರದ ಮೆಡಿಕಲ್‌ ಕೌನ್ಸಿಲ್‌ ಆಫ್‌ ಇಂಡಿಯಾ ನೀಡಿದ ಈ ಗಿಫ್ಟಿನಿಂದ ಅದೀಗ 5 ಸಾವಿರಕ್ಕೆ ತಲುಪಲಿದೆ. ಇದರಿಂದಾಗಿ ರಾಜ್ಯದ ಹದಿನೆಂಟು ಸರ್ಕಾರಿ ಮೆಡಿಕಲ್‌ ಕಾಲೇಜುಗಳಲ್ಲಿ ಇದ್ದ ಸೀಟುಗಳ ಸಂಖ್ಯೆ ಪ್ರಮಾಣ ಶೇಕಡಾ ಹತ್ತರಿಂದ ಹದಿನೈದರಷ್ಟು ಹೆಚ್ಚಳವಾಗಲಿದೆ ಎಂದು ಉನ್ನತ ಮೂಲಗಳು ಹೇಳಿವೆ.

      ಹೈದ್ರಾಬಾದ್‌ ಕರ್ನಾಟಕಕ್ಕೆ ನೀಡಿದ 371 (ಜೆ) ಸ್ಥಾನಮಾನದ ಹಿನ್ನೆಲೆಯಲ್ಲಿ ದಕ್ಕಿದ ಸೀಟುಗಳು ಇದರಲ್ಲಿ ಸೇರಿವೆ ಎಂದು ಇದೇ ಮೂಲಗಳು ಸ್ಪಷ್ಟ ಪಡಿಸಿವೆ.

      ರಾಜ್ಯದ ಸರ್ಕಾರಿ ಮೆಡಿಕಲ್‌ ಕಾಲೇಜುಗಳಲ್ಲಿ ಕರ್ನಾಟಕದ ವಿದ್ಯಾರ್ಥಿಗಳಿಗೆ ಶೇಕಡಾ 50%ರಷ್ಟು ಸೀಟುಗಳನ್ನು ನೀಡಲಾಗುತ್ತಿದ್ದು ಇದರಿಂದಾಗಿ ಸುಮಾರು 2 ಸಾವಿರ ಮಂದಿಗೆ ಎಂ.ಬಿ.ಬಿ.ಎಸ್.ಸೀಟುಗಳು ಸಿಗುತ್ತಿದ್ದವು. ಆದರೆ ಈಗಿನ ಬೆಳವಣಿಗೆಯಿಂದ ಇನ್ನೂ ಶೇಕಡಾ ಐವತ್ತರಷ್ಟು ಸೀಟುಗಳು ದಕ್ಕುವುದರಿಂದ ಕರ್ನಾಟಕದ ಎರಡೂವರೆ ಸಾವಿರ ಮಂದಿ ವೈದ್ಯಕೀಯ ಸೀಟು ಪಡೆಯಲಿದ್ದಾರೆ.

      ಇತ್ತೀಚೆಗೆ ಕರ್ನಾಟಕದ ವೈದ್ಯಕೀಯ ಕಾಲೇಜುಗಳಿಗೆ ಭೇಟಿ ನೀಡಿದ ಎಂ.ಸಿ.ಐ ತಂಡ ಇಲ್ಲಿನ ವ್ಯವಸ್ಥೆಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿ ವರದಿ ನೀಡಿದ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ ವೈದ್ಯಕೀಯ ಸೀಟುಗಳನ್ನು ನೀಡಲಾಗಿದೆ. ಅದರಲ್ಲೂ ಮುಖ್ಯವಾಗಿ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಇದ್ದ ಭೋಧನಾ ಸಿಬ್ಬಂದಿಯ ಕೊರತೆಯನ್ನು ವೈದ್ಯಕೀಯ ಶಿಕ್ಷಣ ಇಲಾಖೆ ತ್ವರಿತವಾಗಿ ಬಗೆಹರಿಸಿದ್ದು ಈ ರೀತಿ ಹೆಚ್ಚುವರಿ ಸೀಟುಗಳು ದಕ್ಕಲು ಮುಖ್ಯ ಕಾರಣವಾಗಿದೆ.

      ಸರ್ಕಾರಿ ಮೆಡಿಕಲ್‌ ಕಾಲೇಜುಗಳಲ್ಲಿ ಕೊರತೆ ಇದ್ದ ಭೋಧಕ ಸಿಬ್ಬಂದಿಯನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಲಾಗಿದ್ದು ವಾಕ್‌ ಇನ್‌ ಇಂಟರ್‌ ವ್ಯೂ ಮೂಲಕ ಅವರ ಸೇವೆಯನ್ನು ಖಾಯಂಗೊಳಿಸುವ ಕುರಿತು ವೈದ್ಯಕೀಯ ಶಿಕ್ಷಣ ಇಲಾಖೆ ಗಂಭೀರ ಪರಿಶೀಲನೆ ನಡೆಸಿದೆ.

      ವೈದ್ಯಕೀಯ ಕೋರ್ಸುಗಳಿಗೆ ಪ್ರವೇಶ ಪಡೆಯಲು ನೀಟ್‌ ಪದ್ಧತಿಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದ ಮೇಲೆ ಕರ್ನಾಟಕದ ವಿದ್ಯಾರ್ಥಿಗಳಿಗೆ ದಕ್ಕುವ ಸೀಟುಗಳ ಸಂಖ್ಯೆ ಕಡಿಮೆಯಾಗಿತ್ತು. ಈ ಹಿನ್ನೆಲೆಯಲ್ಲಿ ಖಾಸಗಿ ವೈದ್ಯಕೀಯ ಕಾಲೇಜುಗಳು,ಭಾಷಾಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳು,ಧಾರ್ಮಿಕ ಅಲ್ಪಸಂಖ್ಯಾತ ವೈದ್ಯಕೀಯ ಶಿಕ್ಷಣ ಸಂಸ್ಥೆಗಳು,ಸ್ವಾಯತ್ತ ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ರಾಜ್ಯದ ವಿದ್ಯಾರ್ಥಿಗಳಿಗೆ ಶೇಕಡಾ ಐವತ್ತರಷ್ಟುಸೀಟುಗಳನ್ನು ಮೀಸಲಿಡಬೇಕು ಎಂದು ಸರ್ಕಾರ ಕೋರಿತ್ತು.

      ಸರ್ಕಾರದ ಮನವಿಯನ್ನು ಈ ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ಒಪ್ಪಿದ್ದವಲ್ಲದೆ,ಶುಲ್ಕದ ಪ್ರಮಾಣವನ್ನು ಶೇಕಡಾ ಹದಿನೈದರಷ್ಟು ಹೆಚ್ಚಳ ಮಾಡಲು ಅನುಮತಿ ಪಡೆದಿದ್ದವು ಎಂಬುದನ್ನು ಸ್ಮರಿಸಬಹುದು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link