ದಾವಣಗೆರೆ
ಮಾಧ್ಯಮ ಕ್ಷೇತ್ರ ಇಂದು ಕವಲು ಹಾದಿಯಲ್ಲಿ ಸಾಗುತ್ತಿದೆ. ಯಾವುದೇ ಸ್ವರೂಪದ ಮಾಧ್ಯಮ ಈ ಕ್ಷೇತ್ರದಲ್ಲಿ ಬಂದರೂ ಪತ್ರಿಕಾ ಕ್ಷೇತ್ರ ಮಾತ್ರ ಯಾವತ್ತೂ ತನ್ನ ಜೀವಂತಿಕೆಯನ್ನು ಕಾಪಾಡಿಕೊಳ್ಳುತ್ತಿವೆ ಎಂದು ಪ್ರಜಾಪ್ರಗತಿ ಸಂಪಾದಕ ಎಸ್.ನಾಗಣ್ಣ ವಿಶ್ಲೇಷಿಸಿದರು.
ದಾವಣಗೆರೆಯ ರೋಟರಿ ಬಾಲಭವನದಲ್ಲಿ ಆಯೋಜಿಸಿದ್ದ ಪ್ರಜಾಪ್ರಗತಿ ಪ್ರಾದೇಶಿಕ ದಿನಪತ್ರಿಕೆಯ ದಾವಣಗೆರೆ ಆವೃತ್ತಿಯ 15ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಯುವಜನತೆ ಭ್ರಮಾ ಲೋಕದಲ್ಲಿದ್ದಾರೆ. ಓದುವ ಗೀಳು ಕಡಿಮೆಯಾಗುತ್ತಿದೆ ಎಂದು ವಿಷಾದಿಸಿದರು.
ನೋಡುವ ಮತ್ತು ಓದುವ ಪತ್ರಿಕೆಗಳು ನಮ್ಮಲ್ಲಿ ಇವೆ. ಓದುವವರಿಗೆ ಹಸಿವು ನೀಗಿಸುವ ಅವ್ಯಕ್ತ ಆಹಾರವಾಗಿ ಇಂದು ಮಾಧ್ಯಮ ಉಳಿದಿದೆ. ಇಷ್ಟೆಲ್ಲ ಮಾಧ್ಯಮ ಕ್ಷೇತ್ರದಲ್ಲಿನ ಕವಲು ಹಾದಿಗಳ ನಡುವೆಯೂ ಪತ್ರಿಕೆ ಓದದೇ ಇದ್ದರೆ ನಿರಾಸೆಯಾಗುವ ಜನರೂ ಇದ್ದಾರೆ. ತನ್ನ ಬಳಿ ಪತ್ರಿಕೆ ಇಲ್ಲವೆಂದಾದರೆ ಮತ್ತೆಲ್ಲಿಯೋ ನೋಡುವ ಪ್ರವೃತ್ತಿಯೂ ಓದುಗರಲ್ಲಿದೆ ಎಂದು ವಿಶ್ಲೇಷಿಸಿದರು.
ಸಿದ್ದಗಂಗಾ ಶ್ರೀಗಳ ಆಶೀರ್ವಾದ ನನ್ನ ಮೇಲೆ ನಿರಂತರವಾಗಿತ್ತು. ಅವರೊಂದಿಗಿನ ನನ್ನ ಅವಿನಾಭಾವ ಸಂಬಂಧವನ್ನು ಎಷ್ಟು ಹೇಳಿದರೂ ಸಾಕಾಗುವುದಿಲ್ಲ. ಮಠಕ್ಕೆ ಹೋಗುವುದನ್ನು ಕಡಿಮೆ ಮಾಡಿದರೆ ಯಾಕೆ ಬರಲಿಲ್ಲ ಎಂದು ಪ್ರಶ್ನಿಸುತ್ತಿದ್ದರು ಎಂದು ಶ್ರೀಗಳೊಂದಿಗಿನ ಸಂಬಂಧವನ್ನು ಓದುಗರ ಎದುರು ಸಂಪಾದಕರು ತೆರೆದಿಟ್ಟರು.
ನಾನು ಯಾವತ್ತು ಜಾತಿಯನ್ನು ಮುಂದಿಟ್ಟುಕೊಂಡು ಕೆಲಸ ಮಾಡಲಿಲ್ಲ. ಜಾತಿಯನ್ನೇ ಮುಂದಿಟ್ಟುಕೊಂಡರೆ ಪತ್ರಿಕೆ ವಿಸ್ತರವಾಗಿ ಬೆಳೆಯಲು ಸಾಧ್ಯವಾಗುವುದಿಲ್ಲ. ಪತ್ರಿಕೋದ್ಯಮ ನನಗೆ ಒಂದು ಆಕಸ್ಮಿಕ ವೃತ್ತಿಯಾಗಿ ಬಂದು ಅದನ್ನೇ ಸಮರ್ಪಕವಾಗಿ ಮುಂದುವರೆಸಿಕೊಂಡು ಬಂದಿದ್ದೇನೆ. ಈ ಕ್ಷೇತ್ರದಲ್ಲಿ ಸಾಧಿಸಬೇಕೆಂಬ ಛಲ ಇತ್ತು. ಅದನ್ನು ಸಾಧಿಸಿದ್ದೇನೆ. ಇಷ್ಟು ವರ್ಷಗಳ ಅವಧಿಯಲ್ಲಿ ನನ್ನ ಬರವಣಿಗೆಗಳು ನನ್ನನ್ನು ಕೋರ್ಟ್ ಮೆಟ್ಟಿಲು ಹತ್ತುವಂತೆ ಮಾಡಿದ್ದರೂ ನಾನು ಅದಕ್ಕೆ ಅಂಜಲಿಲ್ಲ. ಬದಲಾಗಿ ಇವೆಲ್ಲವನ್ನೂ ಒಂದು ಅನುಭವ ಎಂದೇ ಸ್ವೀಕರಿಸುತ್ತಾ ಬಂದಿದ್ದೇನೆ ಎಂದರು.
ಪತ್ರಿಕೆಗಳು ಅಲಕ್ಷ್ಯಕ್ಕೊಳಗಾದವರಿಗೆ ಧ್ವನಿಯಾಗಿ ನಿಲ್ಲಬೇಕು. ಅಂತಹ ಕೆಲಸವನ್ನು ನಾನು ಪ್ರಾಮಾಣಿಕವಾಗಿ ಮಾಡಿದ್ದೇನೆ. ಓದುಗರು ಮತ್ತು ಪತ್ರಿಕೆಯ ನಡುವೆ ನಿಂತಿರುವ ನಿರಂತರ ಸಂಬಂಧವೇ ನನಗೆ ಶ್ರೀರಕ್ಷೆಯಾಗಿದೆ. ಈ ಸಂಬಂಧವೇ ಪತ್ರಿಕೆಯನ್ನು ಮುನ್ನಡೆಸಿಕೊಂಡು ಬಂದಿದೆ. ಸಾಚಾತನ ಇಲ್ಲದಿದ್ದರೆ ಮಾಧ್ಯಮ ಅಳಿವಿನತ್ತ ಸಾಗುತ್ತದೆ. ಬಹುಸಂಸ್ಕೃತಿ ಮತ್ತು ಬಹುಭಾಷೆ ಇರುವ ಈ ನಾಡಿನಲ್ಲಿ ಸೌಹಾರ್ಧತೆಯನ್ನು ಕಾಪಾಡುವುದು ಒಬ್ಬ ಪತ್ರಕರ್ತನ ಹಾಗೂ ಪತ್ರಿಕೆಯ ಕರ್ತವ್ಯ ಎಂದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕøತ ಎಚ್.ಬಿ.ಮಂಜುನಾಥ್ ಮಾತನಾಡಿ, ಪ್ರಜಾಪ್ರಗತಿ ಒಂದು ಓದುಗ ಪತ್ರಿಕೆಯಾಗಿದೆ. ಪತ್ರಿಕಾಕ್ಷೇತ್ರ ಇಂದು ಅನೇಕ ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ. ಬಾಹ್ಯ ಬಿಕ್ಕಟ್ಟುಗಳು ಒಂದು ರೀತಿಯಾದರೆ ಆಂತರಿಕ ಬಿಕ್ಕಟ್ಟುಗಳು ಮತ್ತೊಂದು ರೀತಿಯದ್ದಾಗಿದೆ. ರಾಜ್ಯಮಟ್ಟದ ಪತ್ರಿಕೆಗಳು ಸ್ಥಳೀಯ ಪತ್ರಿಕೆಗಳಾಗುತ್ತಿವೆ. ಇದು ಸಹ ಒಂದು ಸವಾಲು ಎಂದರು.
ಎಸ್.ನಾಗಣ್ಣ ಅವರು ಪತ್ರಿಕಾ ಬದ್ಧತೆಯನ್ನು ನಿಷ್ಠೆಯಿಂದ ನಡೆಸಿಕೊಂಡು ಬಂದಿದ್ದಾರೆ. ಅದರಲ್ಲಿ ಸಂತೃಪ್ತಿಯನ್ನು ಕಂಡುಕೊಂಡಿದ್ದಾರೆ. ಮುದ್ರಣಾ ಮಾಧ್ಯಮ ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡಿದೆ ಎಂಬುದಕ್ಕೆ ಪ್ರಜಾಪ್ರಗತಿಯೇ ಸಾಕ್ಷಿ. ಮುದ್ರಣಾ ಮಾಧ್ಯಮಕ್ಕೆ ಯಾವತ್ತೂ ಅಂತ್ಯವಿಲ್ಲ ಎಂಬುದನ್ನು ನಾನು ಸ್ಪಷ್ಟವಾಗಿ ಹೇಳುತ್ತೇನೆ. ಸಾಮಾಜಿಕ ಕಳಕಳಿಯ ಪತ್ರಿಕೆಗಳು ನಿರಂತರವಾಗಿ ಜನರ ನಡುವೆ ಉಳಿಯುತ್ತವೆ ಎಂದರು.
ಕಾರ್ಯಕ್ರಮದ ಕೊನೆಯಲ್ಲಿ ಪತ್ರಿಕಾ ಸಂಪಾದಕ ಎಸ್.ನಾಗಣ್ಣ, ಶಾರದಾನಾಗಣ್ಣ, ಸಹ ಸಂಪಾದಕ ಟಿ.ಎನ್.ಮಧುಕರ್ ಅವರನ್ನು ಸನ್ಮಾನಿಸಲಾಯಿತು. ಪತ್ರಿಕಾ ವ್ಯವಸ್ಥಾಪಕ ಎಲ್.ಚಿಕ್ಕೀರಪ್ಪ, ರೇಣುಕಾ ಪ್ರಸಾದ್, ಹಿರಿಯ ವರದಿಗಾರ ಸಾ.ಚಿ.ರಾಜಕುಮಾರ, ವಿನಾಯಕ ಪೂಜಾರ್, ಚೆನ್ನವೀರಯ್ಯ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.