ಬೆಂಗಳೂರು:
ರಾಜ್ಯದ ಮಹತ್ವಾಕಾಂಕ್ಷಿ ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರದಿಂದ ಪ್ರಾಥಮಿಕ ಹಂತದ ಅನುಮತಿ ದೊರಕಿದ್ದು, ಈ ಮೂಲಕ ಕೇಂದ್ರ ಸರ್ಕಾರವು ರಾಜ್ಯಕ್ಕೆ ಸಿಹಿಸುದ್ದಿಯನ್ನು ನೀಡಿದೆ.
ಕೇಂದ್ರ ಜಲ ಸಂಪನ್ನೂಲ ಇಲಾಖೆ ಮೇಕದಾಟು ಯೋಜನೆ ಕುರಿತ ರಾಜ್ಯದ ಪ್ರಿ ಫ್ರೀಸಿಬಿಲಿಟಿ ವರದಿಗೆ ಒಪ್ಪಿಗೆ ನೀಡಿದೆ. ಸಮಗ್ರ ಯೋಜನಾ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಕೇಂದ್ರ ನಿರ್ದೇಶನ ನೀಡಿದೆ.
ಮೇಕೆದಾಟು ಯೋಜನೆ : ಕರ್ನಾಟಕಕ್ಕೆ ಅನುಮತಿ ನೀಡದಂತೆ ತಮಿಳುನಾಡಿನಿಂದ ಪ್ರಧಾನಿಗೆ ಮನವಿ
ಮೇಕೆದಾಟು ಯೋಜನೆಗೆ ಒಪ್ಪಿಗೆ ಕೊಡಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಮಿಳುನಾಡು ಸಿಎಂ ಪಳನಿಸ್ವಾಮಿ ಅವರು ಪತ್ರ ಬರೆದು ಒತ್ತಡ ಹೇರಿದ್ದರು. ಇದೀಗ ರಾಜ್ಯ ಸರ್ಕಾರಕ್ಕೆ ಕೇಂದ್ರ ಸ್ಪಂದಿಸಿರುವುದು ತಮಿಳುನಾಡಿಗೆ ಹಿನ್ನಡೆಯಾಗಿದೆ.
ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರದಿಂದ ಸ್ಪಂದನೆ : ಸಿಎಂ ಕುಮಾರಸ್ವಾಮಿ
ಈ ಹಿಂದೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಕೇಂದ್ರ ಜಲಸಂಪನ್ಮೂಲ ಹಾಗೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಭೇಟಿ ಬಳಿಕ ಮಾತನಾಡಿದ್ದ ಅವರು, ಮೇಕೆದಾಟು ಯೋಜನೆಗೆ ಸಕಾರಾತ್ಮಕ ಸ್ಪಂಧನೆ ಸಿಕ್ಕಿದೆ ಎಂದು ತಿಳಿಸಿದ್ದರು. ಈ ಸುದ್ಧಿ ಈಗ ಕರ್ನಾಟಕದ ಪಾಲಿಗೆ ಹೆಚ್ಚು ಸಂತಸವನ್ನು ತಂದಿದೆ.
ಡಿಕೆಶಿ ಸಂತಸದ ಹೇಳಿಕೆ:
ಮೇಕೆದಾಟು ಯೋಜನೆಗೆ ಕೇಂದ್ರ ಜಲ ಆಯೋಗದ ಒಪ್ಪಿಗೆ ಸಿಕ್ಕಿದೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.ಮೇಕೆದಾಟು ಸರಕಾರದ ಮಹತ್ವಾಕಾಂಕ್ಷೆಯ ಯೋಜನೆ. ಇದಕ್ಕೆ ತಮಿಳುನಾಡು ಆಕ್ಷೇಪ ವ್ಯಕ್ತಪಡಿಸುವುದು ಸರಿಯಲ್ಲ. ತಮಿಳುನಾಡಿಗೆ ಸಮಸ್ಯೆಯಾಗದ ರೀತಿ ಯೋಜನೆ ಜಾರಿಗೊಳಿಸುತ್ತೇವೆ. ಗಡಿ ಭಾಗದಲ್ಲಿ ಯೋಜನೆ ಅನುಷ್ಠಾನಕ್ಕೆ ಬರುವುದರಿಂದ ಕೃಷಿಗೆ ನೀರು ಬಳಕೆ ಮಾಡುವುದಿಲ್ಲ. ಅದೇ ಕಾಲಕ್ಕೆ ನ್ಯಾಯಾಲಯದ ಆದೇಶದಂತೆ ತಮಿಳುನಾಡಿಗೆ ಬಿಡುವ ನೀರಿನಲ್ಲಿಯೂ ಯಾವುದೇ ವ್ಯತ್ಯಾಸ ಆಗುವುದಿಲ್ಲ ಎಂದು ವಿಧಾನಸೌಧದಲ್ಲಿ ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.
ತಮಿಳುನಾಡು ಬಯಸಿದರೆ ಮಾತುಕತೆಗೆ ನಾವು ಸದಾ ಸಿದ್ಧ. ಮುಂದಿನ ತಿಂಗಳು 6 ರಂದು ನಡೆಯುವ ಸಭೆಯಲ್ಲಿ ಮುಖ್ಯಮಂತ್ರಿಗಳ ಜತೆ ಸಮಾಲೋಚನೆ ನಡೆಸಿದ ನಂತರ ಮುಂದಿನ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದರು.
ಜಲ ಆಯೋಗ ಒಪ್ಪಿಗೆ: ಬಹುನಿರೀಕ್ಷಿತ ಮೇಕೆದಾಟು ಯೋಜನೆಗೆ ಕೇಂದ್ರ ಜಲ ಆಯೋಗವು ಯೋಜನೆಯ ಸಾಧ್ಯತಾ ವರದಿ ಬಗ್ಗೆ ಸಹಮತ ವ್ಯಕ್ತಪಡಿಸಿದ್ದು, ಸಂಪೂರ್ಣ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಿ ಕಳುಹಿಸುವಂತೆ ರಾಜ್ಯ ಸರಕಾರಕ್ಕೆ ಸೂಚಿಸಿದೆ.
ಇದರಿಂದ ಯೋಜನೆ ಅನುಷ್ಠಾನ ಕುರಿತ ರಾಜ್ಯ ಸರ್ಕಾರದ ಯತ್ನಕ್ಕೆ ಮೊದಲ ಜಯ ಸಿಕ್ಕಂತಾಗಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರವು 2013 ರಲ್ಲಿ ಕಾವೇರಿ ನದಿಗೆ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಮೇಕೆದಾಟು ಬಳಿ ಅಣೆಕಟ್ಟು ನಿರ್ಮಿಸಲು ತೀರ್ಮಾನಿಸಿತ್ತು. ಯೋಜನೆಗೆ ಒಪ್ಪಿಗೆ ನೀಡುವಂತೆ ಕೇಂದ್ರ ಜಲ ಆಯೋಗಕ್ಕೆ ಮನವಿ ಸಲ್ಲಿಸಿತ್ತು. ಆದರೆ, ಅಂದಿನ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ಈ ಯೋಜನೆಗೆ ಅನುಮತಿ ನೀಡದಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಿದ್ದರು. ಹೀಗಾಗಿ ಕೇಂದ್ರ ಯಾವುದೇ ನಿರ್ಧಾರ ತೆಗೆದುಕೊಂಡಿರಲಿಲ್ಲ.
ಆರು ತಿಂಗಳ ಹಿಂದೆ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದ ನಂತರ ಸಿಎಂ ಕುಮಾರಸ್ವಾಮಿ ಕೇಂದ್ರದ ಅನುಮತಿ ಸಿಕ್ಕರೆ ಯೋಜನೆ ಆರಂಭಿಸುವುದಾಗಿ ಬಜೆಟ್ ನಲ್ಲಿ ಘೋಷಣೆ ಮಾಡಿದ್ದರು. ಅಲ್ಲದೇ ಯೋಜನೆಯು ಸಾಧ್ಯತೆಯ ಕುರಿತು ರಾಜ್ಯ ಸರಕಾರ ಜುಲೈನಲ್ಲಿ ಕೇಂದ್ರ ಜಲ ಆಯೋಗಕ್ಕೆ ವರದಿ ಸಲ್ಲಿಸಿತ್ತು. ಅಲ್ಲದೇ ಕಳೆದ ಸೆಪ್ಟೆಂಬರ್‍ನಲ್ಲಿ ಕುಮಾರಸ್ವಾಮಿ ಅವರು ಪ್ರಧಾನಿ ನರೇಂದ ಮೋದಿ ಹಾಗೂ ಕೇಂದ್ರ ಜಲ ಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ, ಬೆಂಗಳೂರು ಮತ್ತು ಸುತ್ತ ಮುತ್ತಲಿನ ಜಿಲ್ಲೆಗಳ ಕುಡಿಯುವ ನೀರಿಗಾಗಿ ಮೇಕೆದಾಟು ಯೋಜನೆಯ ಅಗತ್ಯತೆ ಕುರಿತು ಮನವರಿಕೆ ಮಾಡಿಕೊಟ್ಟಿದ್ದರು. ಆದಷ್ಟು ಶೀಘ್ರ ಯೋಜನೆಗೆ ಅನುಮತಿ ನೀಡುವಂತೆ ಮನವಿ ಮಾಡಿದ್ದರು.
ರಾಜ್ಯ ಸರ್ಕಾರದ ಮನವಿಯ ಹಿನ್ನೆಲೆಯಲ್ಲಿ ಇತ್ತೀಚೆಗೆ ಕೇಂದ್ರ ಜಲ ಆಯೋಗ ಸಭೆ ನಡೆಸಿ ಯೋಜನೆ ಸಾಧ್ಯತೆಯ ಬಗ್ಗೆ ರಾಜ್ಯ ಸರ್ಕಾರ ಕಳುಹಿಸಿದ ಪ್ರಾಥಮಿಕ ಮಾಹಿತಿಗೆ ಒಪ್ಪಿಗೆ ನೀಡಿದ್ದು, ಯೋಜನೆಯ ಬಗ್ಗೆ ಸಂಪೂರ್ಣ ವರದಿ ಸಿದ್ಧಪಡಿಸಿ ಕಳುಹಿಸುವಂತೆ ಸೂಚಿಸಿದೆ. ಅಲ್ಲದೇ ಈ ಯೋಜನೆಯಿಂದ ತಮಿಳುನಾಡಿಗೆ ಕಾವೇರಿಯಿಂದ ಪ್ರತಿ ವರ್ಷ ಬಿಡುವ ನೀರಿನ ಪ್ರಮಾಣದಲ್ಲಿ ಯಾವುದೇ ವ್ಯತಾಸವಾಗದಂತೆ ಯೋಜನಾ ವರದಿ ಸಿದ್ಧಪಡಿಸುವಂತೆ ಸೂಚಿಸಿದೆ ಎನ್ನಲಾಗಿದೆ.
ಯೋಜನೆ ಉದ್ದೇಶ: ಬೆಂಗಳೂರಿನಿಂದ 100 ಕಿಲೋ ಮೀಟರ್ ದೂರದಲ್ಲಿರುವ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಮೇಕೆದಾಟು ಪ್ರದೇಶದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಸುಮಾರು 5912 ಕೋಟಿ ರೂಪಾಯಿ ವೆಚ್ಚದಲ್ಲಿ 66 ಟಿಎಂಸಿ ನೀರು ಸಂಗ್ರಹ ಸಾಮಥ್ರ್ಯದ ಅಣೆಕಟ್ಟೆ ಕಟ್ಟಿ, ಅಲ್ಲಿಂದ ಬೆಂಗಳೂರು, ರಾಮನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಕುಡಿಯುವ ನೀರು ಸರಬರಾಜು ಮಾಡುವುದು ಮತ್ತು 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವುದು ಯೋಜನೆಯ ಉದ್ದೇಶವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ