ಬೆಂಗಳೂರು :
ನವೆಂಬರ್ 1 ರಿಂದ ಬಿಸಿಯೂಟ ಹಾಗೂ ಬಿಸಿ ಹಾಲು ವಿತರಣೆ ಮಾಡುವ ಮೂಲಕ ರಾಜ್ಯದ ಶಾಲೆಗಳಲ್ಲಿ ವಿದ್ಯುಕ್ತವಾಗಿ ಸ್ಥಗಿತಗೊಂಡಿದ್ದಂತ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಆರಂಭಿಸೋದಕ್ಕೆ ರಾಜ್ಯ ಸರ್ಕಾರ ಆದೇಶಿಸಿದೆ.
ಈ ಕುರಿತಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಮಧ್ಯಾಹ್ನ ಉಪಹಾರ ಯೋಜನೆ ಜಂಟಿ ನಿರ್ದೇಶಕರಾದಂತ ಟಿ.ನಾರಾಯಣಗೌಡ ರಾಜ್ಯದ ಎಲ್ಲಾ ಶಿಕ್ಷಣಾಧಿಕಾರಿಗಳಿಗೆ ಪತ್ರ ಬರೆದಿದ್ದು, 2021-22ನೇ ಸಾಲಿನ ಮಧ್ಯಾಹ್ನ ಉಪಹಾರ ಯೋಜನೆಯಡಿ 1 ರಿಂದ 10ನೇ ತರಗತಿ ಮಕ್ಕಳಿಗೆ ಶಾಲೆಯಲ್ಲಿ ಬಿಸಿಯೂಟವನ್ನು ಪ್ರಾರಂಭಿಸುವ ಕುರಿತು ಸರ್ಕಾರದ ಹಂತದಲ್ಲಿ ನಿರ್ಧಾರ ತೆಗೆದುಕೊಳ್ಳಬೇಕಾಗಿದ್ದು, ಕೆಲವೊಂದು ಕ್ರಮಗಳನ್ನು ಅನುಸರಿಸುವ ಬಗ್ಗೆ ಕರಡು ಪ್ರಸ್ತಾವನೆಯನ್ನು ನಿಮ್ಮ ಅಭಿಪ್ರಾಯ ಅಥವಾ ಸಲಹೆಗಳೇನಾದರೂ ಇದ್ದಲ್ಲಿ ಕೂಡಲೇ ದಿನಾಂಕ 04-10-2021ರೊಳಗೆ ಸಲ್ಲಿಸಲು ತಿಳಿಸಿದ್ದಾರೆ.
ನವೆಂಬರ್ 1, 2021ರಂದು ರಾಜ್ಯದಲ್ಲಿ ಹಮ್ಮಿಕೊಂಡಿರುವ ಕನ್ನಡ ರಾಜ್ಯೋತ್ಸವದ ದಿನಾಚರಣೆಯಂದು ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ, ಪ್ರೌಢ ಶಾಲೆಗಳಲ್ಲಿ ಕೋವಿಡ್-19ರ ಹಿನ್ನಲೆಯಲ್ಲಿ 2020-21 ಮಾರ್ಚ್ 14ನೇ ತಾರೀಖಿನಿಂದ ಇದುವರೆಗೂ ಸ್ಥಗಿತಗೊಂಡಿದ್ದ ಶಾಲೆಯ ಬಿಸಿಯೂಟ ಮತ್ತು ಬಿಸಿ ಹಾಲು ವಿತರಣೆ ಕಾರ್ಯಕ್ರಮವನ್ನು ಸಿಹಿ ವಿತರಣೆಯೊಂದಿಗೆ ಸಿದ್ಧಪಡಿಸಿ, ಶಾಲಾ ಮಕ್ಕಳಿಗೆ ಸಂಭ್ರಮದಿಂದ ವಿತರಿಸುವ ಮೂಲಕ ವಿದ್ಯುಕ್ತವಾಗಿ ಮರು ಚಾಲನೆಗೊಳಿಸುವುದು.
ಶಾಲಾ ಮಕ್ಕಳಿಗೆ ಶಾಲೆಯಲ್ಲಿ ಬಿಸಿಯೂಟ ಮತ್ತು ಬಿಸಿ ಹಾಲನ್ನು ನೀಡುವಾಗ ಕೇಂದ್ರ ಸರ್ಕಾರದ ಶಿಕ್ಷಣ ಮಂತ್ರಾಲಯದಿಂದ ನೀಡಲಾದ ಕೋವಿಡ್ ವಿಶೇಷ ಸುರಕ್ಷತಾ ಬಿಸಿಯೂಟ ವಿತರಣೆಯ ಮಾರ್ಗಸೂಚಿಯಂತೆ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡು ಬಿಸಿಯೂಟವನ್ನು ಹಾಗೂ ಬಿಸಿಹಾಲನ್ನು ಸಿದ್ಧಪಡಿಸಿ ವಿತರಿಸಬಹುದು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ