ಬೆಳಗಾವಿ :
‘ಸಿದ್ದಗಂಗಾ ಮಠದ ಡಾ.ಶಿವಕುಮಾರ್ ಸ್ವಾಮೀಜಿಗಳಿಗೆ ಶಸ್ತ್ರ ಚಿಕಿತ್ಸೆ ಮಾಡಿದವರು ಮಹಮ್ಮದ್ ರೇಲಾ ಓರ್ವ ಮುಸ್ಲಿಂ ವೈದ್ಯ’ ಎಂದು ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದು ವಿವಾದಕ್ಕೀಡಾಗಿದೆ.
ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್ ಅವರು, ಮುಸ್ಲಿಮ್ ಆಡಳಿತವಿದ್ದರೂ ಶ್ರೀಗಳಿಗೆ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಪಸಂಖ್ಯಾತ ಆಡಳಿತ ಮಂಡಳಿ ಇದ್ದರೂ ಶ್ರೀಗಳನ್ನ ಚೆನ್ನಾಗಿ ನೋಡ್ಕೊಂಡಿದ್ದಾರೆ. ಡಾಕ್ಟರ್ ಮೊಹಮ್ಮದ್ ರೆಲಾ ಮಾಲೀಕತ್ವದ ರೆಲಾ ಆಸ್ಪತ್ರೆಯಲ್ಲಿ ಶ್ರೀಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವಿವಾದತ್ಮಾಕ ಹೇಳಿಕೆ ನೀಡಿದ್ದಾರೆ.
ನನಗೆ ಬಹಳ ಸಂತೋಷವಾಯ್ತು. ನಿಜವಾಗಲೂ ಕರ್ನಾಟಕ ರಾಜ್ಯದಲ್ಲಿ ಅಂತಹ ಆಸ್ಪತ್ರೆಯನ್ನು ನಾನು ನೋಡಿಲ್ಲ. ಜಾತಿ-ಧರ್ಮದ ಬಗ್ಗೆ ಮಾತನಾಡುತ್ತಿರುವ ನಾವು ಒಂದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಮೊಹಮ್ಮದ್ ರೇಲಾ ಎಂಬಂತಹ ಮುಸಲ್ಮಾನ ಅಲ್ಪಸಂಖ್ಯಾತರು. ಅವರ ಹೆಸರಿನಲ್ಲಿ ರೇಲಾ ಅನ್ನುವ ಆಸ್ಪತ್ರೆಯೊಂದನ್ನು ಮಾಡಿದ್ದಾರೆ. ಆಸ್ಪತ್ರೆ, ಸಿಬ್ಬಂದಿ ಹಾಗೂ ಸೌಲಭ್ಯಗಳು ತುಂಬಾ ಚೆನ್ನಾಗಿದೆ. 450 ಬೆಡ್ ನಲ್ಲಿ 150 ಬೆಡ್ ಐಸಿಯುನಲ್ಲಿದೆ. ಇಂತಹ ಸೌಲಭ್ಯವಿರುವ ಆಸ್ಪತ್ರೆಯನ್ನು ಎಲ್ಲೂ ನೋಡಿಲ್ಲ ಎಂದು ಹೊಗಳಿದರು.
ಕಿರಿಯ ಶ್ರೀಗಳ ಪ್ರತಿಕ್ರಿಯೆ:
ಈ ಕುರಿತು ಪ್ರತಿಕ್ರಿಯಿಸಿರುವ ಮಠದ ಕಿರಿಯ ಶ್ರೀ ಸಿದ್ದಲಿಂಗ ಸ್ವಾಮೀಜಿ, ಶಾಲೆ ಹಾಗೂ ಆಸ್ಪತ್ರೆಗಳಂತಹ ವಿಷಯದಲ್ಲಿ ಧರ್ಮ ಭೇದಭಾವ ತರುವುದು ಸೂಕ್ತವಲ್ಲ. ವಿದ್ಯೆ ಕೊಡುವ ಶಾಲೆ ಹಾಗೂ ಆರೋಗ್ಯ ನೀಡುವ ಆಸ್ಪತ್ರೆಗಳು ಎಲ್ಲರಿಗೂ ಸೇರಿರುವಂತದ್ದು. ಎಲ್ಲ ಆಸ್ಪತ್ರೆಗಳಲ್ಲಿ ಹಿಂದೂ, ಮುಸ್ಲಿಂ ಮತ್ತು ಕ್ರೈಸ್ತ ಸಮುದಾಯಕ್ಕೆ ಸೇರಿರುವ ವೈದ್ಯರು ಇರುತ್ತಾರೆ. ಶ್ರೀಗಳಿಗೆ ಶಸ್ತ್ರ ಚಿಕಿತ್ಸೆ ಮಾಡಿರುವ ಮೊಹಮ್ಮದ್ ರೇಲಾ ಓರ್ವ ವೈದ್ಯರಷ್ಟೇ, ಅವರನ್ನು ವೈದ್ಯರಾಗಿಯೇ ನೋಡಿದ್ದೇವೆ ಹೊರತು ಬೇರೇನಿಲ್ಲ ಎಂದು ಕಿರಿಯ ಶ್ರೀಗಳು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
