ಮಂಗಳೂರು :
ಮಂಗಳೂರು ಜಿಲ್ಲೆಯ ಕೋವಿಡ್ ಪರಿಸ್ಥಿತಿಯನ್ನು ಅರಿಯುವ ನಿಟ್ಟಿನಲ್ಲಿ ಜಿಲ್ಲಾ ಪ್ರವಾಸದಲ್ಲಿದ್ದ ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್ ಗುರುವಾರ ನಗರದಲ್ಲಿನ ಖಾಸಗಿ ಮೆಡಿಕಲ್ ಕಾಲೇಜುಗಳಿಗೆ ಭೇಟಿ ನೀಡಿ ಆಡಳಿತ ಮಂಡಳಿ ಪ್ರತಿನಿಧಿಗಳ ಜೊತೆ ಸಮಾಲೋಚನೆ ನಡೆಸಿದರು .
ಸರ್ಕಾರ ಹಾಗೂ ಐಸಿಎಂಆರ್ ಸೂಚನೆ ಮೇರೆಗೆ ಆರ್‌ಟಿಪಿಸಿಆರ್ ಪ್ರಯೋಗಾಲಯ ಸ್ಥಾಪನೆ ಸಹಿತ ಇತರೆ ಸೌಲಭ್ಯಗಳ ಅಳವಡಿಕೆ ಮುಂತಾದ ವಿಚಾರಗಳ ಬಗ್ಗೆ ಭೇಟಿ ಸಂದರ್ಭದಲ್ಲಿ ಪರಿಶೀಲನೆ ನಡೆಸಿದರು.
ಮಂಗಳೂರಿನ ಪ್ರಮುಖ ವೈದ್ಯಕೀಯ ಸಂಸ್ಥೆಗಳಾದ ಎಜೆ ಶೆಟ್ಟಿ ಮೆಡಿಕಲ್ ಕಾಲೇಜು, ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು, ಯೇನೆಪೋಯ ಮೆಡಿಕಲ್ ಕಾಲೇಜು ಹಾಗೂ ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜುಗಳ ಕ್ಯಾಂಪಸ್ ಗೆ ಭೇಟಿ ನೀಡಿ ಕಾರ್ಯವೈಖರಿ ವೀಕ್ಷಿಸಿದರು.
ಪ್ರಯೋಗಾಲಯಗಳಲ್ಲಿ ಕರೋನಾ ಪರೀಕ್ಷೆಗಳನ್ನು ನಡೆಸುತ್ತಿರುವುದು ಸರ್ಕಾರದ ಸೂಚನೆಗಳಂತೆ ಕೈಗೊಂಡಿರುವ ಇತರೆ ಕಾರ್ಯಕ್ರಮಗಳ ಬಗ್ಗೆ ಸಮಾಲೋಚನೆ ನಡೆಸಿದರು.
ಕಳೆದ 3 ದಿನಗಳಿಂದ ಹಾಸನ, ಉಡುಪಿ ಮತ್ತು ಮಂಗಳೂರು ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿರುವ ಸಚಿವರು, ಮೂರು ಜಿಲ್ಲೆಗಳಲ್ಲಿ ಕೋವಿಡ್ ಕುರಿತು ಪರಿಶೀಲನಾ ಸಭೆಗಳನ್ನು ನಡೆಸಿದ್ದಾರೆ. ಜತೆಗೆ ಸರ್ಕಾರಿ ಮತ್ತು ಖಾಸಗಿ ಮೆಡಿಕಲ್ ಕಾಲೇಜುಗಳಿಗೆ ಭೇಟಿ ನೀಡಿದ್ದಾರೆ.
ರಾಜ್ಯದ ಎಲ್ಲ ಜಿಲ್ಲೆಗಳಿಗೆ ಭೇಟಿ ನೀಡಿ ಕೋವಿಡ್ ಗೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಿ ಅಗತ್ಯ ಸೂಚನೆ ನೀಡುವ ಕೆಲಸವನ್ನು ಮುಂದುವರೆಸುವುದಾಗಿ ಸಚಿವ ಡಾಕ್ಟರ್ ಕೆ ಸುಧಾಕರ್ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ