ಬೆಂಗಳೂರು
ಬೆಳಗಾವಿಯಲ್ಲಿ ಇದೇ 10 ರಿಂದ ನಡೆಯಲಿರುವ ವಿಧಾನಮಂಡಲದ ಚಳಿಗಾಲದ ಅಧಿವೇಶನಕ್ಕಿಂತ ಮುಂಚೆ ಸಚಿವ ಸಂಪುಟ ವಿಸ್ತರಣೆ ಮಾಡುವ ಚಿಂತನೆ ಇದೆ ಎಂದು ಜೆಡಿಎಸ್ – ಕಾಂಗ್ರೆಸ್ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದ್ದಾರೆ.
ಸಚಿವ ಸಂಪುಟ ವಿಸ್ತರಣೆಗೆ ಶಾಸಕರ ಗುಂಪು ಒತ್ತಡ ಹೇರುತ್ತಿರುವ ಹಿನ್ನೆಲೆಯಲ್ಲಿ ಪ್ರತಿಕ್ರಯಿಸಿದ ಸಿದ್ದರಾಮಯ್ಯ, ಇದೇ 5 ರಂದು ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಸಭೆ ನಡೆಯಲಿದ್ದು, ಅಲ್ಲಿ ಈ ಕುರಿತು ಚರ್ಚಿಸಿ, ಅಧಿವೇಶನ ಆರಂಭಕ್ಕೂ ಮುನ್ನ ಈ ಪ್ರಕ್ರಿಯೆ ಪೂರ್ಣಗೊಳಿಸುವ ಉದ್ದೇಶ ಹೊಂದಿರುವುದಾಗಿ ತಿಳಿಸಿದರು.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಅವರೇ ತೀರ್ಮಾನ ಕೈಗೊಳ್ಳಲಿದ್ದಾರೆ. ಆದರೆ ಸಂಪುಟ ವಿಸ್ತರಣೆಯಾದ ತಕ್ಷಣವೇ ಸರ್ಕಾರ ಪತನವಾಗಲಿದೆ ಎಂದು ಬಿಜೆಪಿ ಮುಖಂಡ ಕೆ.ಎಸ್. ಈಶ್ವರಪ್ಪ ಕನಸು ಕಾಣುತ್ತಿದ್ದಾರೆ. ಬಿಜೆಪಿಗೆ ಬಹುಮತ ದೊರೆತಿಲ್ಲ. ಹೀಗಿದ್ದರೂ ಅಧಿಕಾರ ಹಿಡಿಯುವ ಕನಸು ಕಾಣುವುದನ್ನು ಇನ್ನೂಬಿಟ್ಟಿಲ್ಲ. ಅವರ ಕನಸು ನನಸಾಗದು. ಸರ್ಕಾರ ಉರುಳುವುದಿಲ್ಲ. ಐದು ವರ್ಷಗಳ ಕಾಲ ಸುಭದ್ರ ಆಡಳಿತ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಶಾಸಕರ ಹಿತ ರಕ್ಷಣೆ ಮಾಡುತ್ತಿಲ್ಲ ಎಂದು ತಮ್ಮ ವಿರುದ್ಧ ಕೆಲ ಶಾಸಕರ ಗುಂಪು ವರಿಷ್ಠರಿಗೆ ದೂರು ನೀಡಲು ಮುಂದಾಗಿರುವ ಕುರಿತ ಪ್ರಶ್ನೆಗೆ, ಇವೆಲ್ಲಾ ಊಹಾಪೋಹದಿಂದ ಕೂಡಿದ ಆಧಾರರಹಿತ ವರದಿಗಳು. ಸಚಿವ ಸಂಪುಟ ವಿಸ್ತರಣೆಗೆ ಒತ್ತಡ ಹೇರಲು ಶಾಸಕರ ಗುಂಪು ಯಾವುದೇ ಸಭೆಗಳನ್ನು ನಡೆಸಿಲ್ಲ. ಮಾಜಿ ಸಚಿವರಾದ ರಾಮಲಿಂಗಾರೆಡ್ಡಿ, ಆರ್.ಬಿ. ತಿಮ್ಮಾಪುರ, ಶಾಸಕ ಬಿ.ಸಿ. ಪಾಟೀಲ್ ಸೇರಿದಂತೆ ಯಾರೊಬ್ಬರೂ ಒತ್ತಡ ಹೇರುವ ಸಭೆಗಳನ್ನು ನಡೆಸಿಲ್ಲ. ಸಭೆಗಳಲ್ಲಿ ಪಾಲ್ಗೊಂಡಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಮೈತ್ರಿ ಸರ್ಕಾರ ಉತ್ತಮವಾಗಿ ಆಡಳಿತ ನಡೆಸುತ್ತಿದೆ. ಇಂದಿರಾ ಕ್ಯಾಂಟಿನ್ ಗೆ ಹಣದ ಕೊರತೆ ಎದುರಾಗಿಲ್ಲ. ಇದು ಬಡವರ ಕಾರ್ಯಕ್ರಮವಾಗಿರುವ ಕಾರಣ ಬಿಜೆಪಿಯವರು ಯೋಜನೆ ಬಗ್ಗೆ ಅಪ ಪ್ರಚಾರ ನಡೆಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಆಪಾದಿಸಿದರು.
ಲೋಕ್ ಪಾಲ್ ವ್ಯವಸ್ಥೆ ಅಸ್ತಿತ್ವಕ್ಕೆ ತರದೇ ಇರುವ ಹಿನ್ನೆಲೆಯಲ್ಲಿ ಅಣ್ಣಾ ಹಜಾûರೆ ಅವರು ಉಪವಾಸ ಸತ್ಯಾಗ್ರಹ ಕೈಗೊಳ್ಳುತ್ತಿರುವ ಬಗ್ಗೆ ಪ್ರತಿಕ್ರಯಿಸಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣೆಗೂ ಮುನ್ನ ನೀಡಿದ ವಾಗ್ದಾನ ಈಡೇರಿಸಿಲ್ಲ. ರೈತರ ಸಮಸ್ಯೆಗಳನ್ನು ಸಹ ಕೇಂದ್ರ ಸರ್ಕಾರ ಬಗೆಹರಿಸಿಲ್ಲ. ಹೀಗಾಗಿ ರೈತರು ಸಹ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ