ನಾಪತ್ತೆಯಾಗಿದ್ದ ಸುವರ್ಣ ತ್ರಿಭುಜ ಬೋಟ್ ಅವಶೇಷ ಪತ್ತೆ!

 ಕಾರವಾರ:

      ಮಲ್ಪೆಯಿಂದ ನಾಪತ್ತೆಯಾಗಿದ್ದ ಮೀನುಗಾರಿಕಾ ದೋಣಿಯ ಅವಶೇಷಗಳು, ಮಹಾರಾಷ್ಟ್ರದ ಮಾಲ್ವಾನ್ ಬಳಿಯ ಸಮುದ್ರ ತೀರದ 60 ಮೀಟರ್ ಆಳದಲ್ಲಿ ಪತ್ತೆಯಾಗಿವೆ.

      ಮಲ್ಪೆಯಿಂದ ಮೀನುಗಾರಿಕೆಗೆ ಇಳಿದಿದ್ದ, 7 ಜನರಿದ್ದ ಬೋಡ್ ಕಳೆದ ಡಿಸೆಂಬರ್ 15, 2018ರಂದು ಕಾಣೆಯಾಗಿತ್ತು. ಈ ಮೀನುಗಾರಿಕಾ ದೋಣಿ ಮತ್ತು ಮೀನುಗಾರರನ್ನು ಹುಡುಕಿಕೊಡುವಂತೆ ಉಡುಪಿಯಲ್ಲಿನ ಮೀನುಗಾರರು ಪ್ರತಿಭಟನೆ ಕೂಡ ನಡೆಸಿದ್ದರು.

      ಕಳೆದ ಐದು ತಿಂಗಳಿಂದ ನಾಪತ್ತೆಯಾದ ಮೀನುಗಾರರ ಸುಳಿವು ಸಿಗದೇ ಇರುವುದರಿಂದ ಉಡುಪಿಯ ಶಾಸಕ ಕೆ.ರಘುಪತಿ ಭಟ್ ನೇತೃತ್ವದಲ್ಲಿ ಮೀನುಗಾರರ ಕುಟುಂಬದ ಜೊತೆಗೆ ಪರಿಶೀಲನೆ ನಡೆಸಲು ಸಮುದ್ರಕ್ಕೆ ತೆರಳಿದ್ದರು. ಮಾಲ್ವಾಣ್ ಕಡಲ ತೀರದಿಂದ 33 ಕಿಮೀ ದೂರ ಕಡಲಿನಲ್ಲಿ ಸುವರ್ಣ ತ್ರಿಭುಜ ಬೋಟ್​ನ ಅವಶೇಷಗಳು ಪತ್ತೆಯಾಗಿವೆ. ಆದರೆ, ದೋಣಿಯಲ್ಲಿದ್ದ ಏಳು ಮೀನುಗಾರರ‌ ಕುರಿತಾಗಿ ಯಾವುದೇ ಮಾಹಿತಿ ಇಲ್ಲ ಎಂದು ಭಾರತೀಯ ನೌಕಾಸೇನೆ ಮೂಲಗಳು ತಿಳಿಸಿವೆ.

      ಇತ್ತೀಚೆಗೆ ಮಲ್ಪೆ ಮೀನುಗಾರರ ಮನೆಗೆ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮ್ ಅವರು ಭೇಟಿ ನೀಡಿದ್ದಾಗ, ನಮ್ಮನ್ನೂ ಹುಡುಕಾಟ ಕಾರ್ಯಾಚರಣೆಯಲ್ಲಿ ಸೇರಿಸಿಕೊಳ್ಳಬೇಕು ಎಂದು ಮನೆಯವರು ಪಟ್ಟು ಹಿಡಿದಿದ್ದರು. ಮೀನುಗಾರರು ನಾಪತ್ತೆಯಾದ ಸ್ಥಳವನ್ನು ನಾವು ಕಾಣಬೇಕು ಎಂದು ಮನವಿ ಮಾಡಿದ್ದರು. ಅದರಂತೆ ಭಾರತೀಯ ನೌಕಾಪಡೆ ಅಧಿಕಾರಿಗಳು ಕರೆದೊಯ್ದಿದ್ದರು ಎನ್ನಲಾಗಿದೆ. ಮತದಾನ ಮುಗಿದ ಕೂಡಲೇ ಕಾಣೆಯಾದ ಮಲ್ಪೆಯ ಮೀನುಗಾರರ ಕುಟುಂಬದವರ ಉಪಸ್ಥಿತಿಯಲ್ಲಿ ಶೋಧನಾ ಕಾರ್ಯ ನಡೆಸಲಾಗುವುದು ಎಂದು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮ್ ಈ ಹಿಂದೆ ಭರವಸೆ ನೀಡಿದ್ದರು.

      ಐಎನ್‌ಎಸ್‌ ನಿರೀಕ್ಷಕ್ ಎಂಬ ಯುದ್ಧನೌಕೆಯ ಸಹಾಯದಿಂದ ಸೋನಾರ್‌ ತಂತ್ರಜ್ಞಾನ ಬಳಸಿ ಸಿಂಧುದುರ್ಗಾ ತೀರದಲ್ಲಿ ಡಿಸೆಂಬರ್ ತಿಂಗಳಿನಿಂದ ಸಾಗರತಳದಲ್ಲಿ ಶೋಧನೆ ನಡೆಸಲಾಗುತ್ತಿತ್ತು. ಸೋನಾರ್ ತಂತ್ರಜ್ಞಾನದ ಮೂಲಕ ಬೋಟ್ ಇರುವುದನ್ನು ಗುರುತಿಸಿದ ಮುಳುಗು ತಜ್ಞರು ಸಮುದ್ರದಲ್ಲಿ ಇಳಿದು 60 ಮೀಟರ್ ಆಳದಲ್ಲಿ ಬೋಟ್ ಇರುವುದನ್ನು ಪತ್ತೆ ಹಚ್ಚಿದ್ದಾರೆ ಎಂದು ಭಾರತೀಯ ನೌಕಾಸೇನೆ ಗುರುವಾರ ಟ್ವೀಟ್ ಮಾಡಿದೆ.

      ಮಲ್ಪೆ ಬಂದರಿನಿಂದ ಡಿ. 13 ರಂದು ಬೋಟ್ ಆಳ ಸಮುದ್ರ ಮೀನುಗಾರಿಕೆಗೆ ತೆರಳಿತ್ತು. 15ರ ರಾತ್ರಿ ಇತರ ಬೋಟ್​ಗಳ ಜೊತೆ ಸಂಪರ್ಕ ಕಳೆದುಕೊಂಡಿತ್ತು. ನಾಲ್ಕೂವರೆ ತಿಂಗಳ ಬಳಿಕ ಸುವರ್ಣ ತ್ರಿಭುಜ ಮೀನುಗಾರಿಕೆ ಬೋಟ್ ನಿಗೂಢ ನಾಪತ್ತೆ ಪ್ರಕರಣ ಬಹಿರಂಗವಾಗಿದೆ. ಈ ಮೂಲಕ 7 ಮೀನುಗಾರರು ಸಮುದ್ರಪಾಲಾಗಿರುವುದು ಖಚಿತವಾಗಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap