ಬೆಂಗಳೂರು:
ಸಕಲೇಶಪುರ ಶಾಸಕ ಎಚ್.ಕೆ.ಕುಮಾರಸ್ವಾಮಿ ಅವರು ಜೆಡಿಎಸ್‌ನ ರಾಜ್ಯಾಧ್ಯಕ್ಷರಾಗಿ ಹಾಗೂ ರಾಜ್ಯ ಕಾರ್ಯಾಧ್ಯಕ್ಷರಾಗಿ ಮಾಜಿ ಶಾಸಕ ಮಧು ಬಂಗಾರಪ್ಪ ಹಾಗೂ ಜೆಡಿಎಸ್ ಯುವ ಜನತಾದಳದ ಅಧ್ಯಕ್ಷರನ್ನಾಗಿ ನಿಖಿಲ್ ಕುಮಾರಸ್ವಾಮಿ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಜೆಡಿಎಸ್ ವರಿಷ್ಟ ಹೆಚ್.ಡಿ. ದೇವೇಗೌಡ, ಪಕ್ಷದ ಕಛೇರಿಯಲ್ಲಿ ಇಂದು ಈ ಕುರಿತು ಅಧಿಕೃತವಾಗಿ ಘೋಷಣೆ ಮಾಡಿದ್ದು, ಇದೇ ವೇಳೆ ಇವರೊಂದಿಗೆ, ಮಾಜಿ ಸಚಿವರಾದ ಎನ್ ಎಂ ನಬಿ, ಶಾಸಕರಾದ ಕೆ ಗೋಪಾಲಯ್ಯ ಅವರನ್ನು ಹಿರಿಯ ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಇವರಲ್ಲದೇ ಹನೂರು ಆರ್ ಮಂಜುನಾಥ್ ಅವರನ್ನು ಉಪಾಧ್ಯಕ್ಷರನ್ನಾಗಿಯೂ ಸಹ ನೇಮಕಾತಿ ಮಾಡಿ ದೇವೇಗೌಡರು ಆದೇಶ ಹೊರಡಿಸಿದ್ದಾರೆ.
ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ, ಮಧು ಬಂಗಾರಪ್ಪ, ವೈ.ಎಸ್.ವಿ.ದತ್ತ, ನಿಖಿಲ್ ಕುಮಾರಸ್ವಾಮಿ, ಶರವಣ ಇವರುಗಳ ಹೆಸರು ಕೇಳಿಬಂದಿತ್ತು, ಆದರೆ ಅಚ್ಚರಿಯ ರೀತಿಯಲ್ಲಿ ಎಚ್.ಕೆ.ಕುಮಾರಸ್ವಾಮಿ ಅವರನ್ನು ದೇವೇಗೌಡ ಅವರು ಈ ಜವಾಬ್ದಾರಿಯುತ ಸ್ಥಾನಕ್ಕೆ ಆಯ್ಕೆ ಮಾಡಿದ್ದಾರೆ.
ರಾಜ್ಯಾಧ್ಯಕ್ಷ ಸ್ಥಾನಕ್ಕೆ ಎಚ್.ವಿಶ್ವನಾಥ್ ಅವರು ಈಗಾಗಲೇ ರಾಜೀನಾಮೆ ಸಲ್ಲಿಸಿದ್ದಾರೆ. ಅವರ ಮನವೊಲಿಸುವ ಯತ್ನವನ್ನು ದೇವೇಗೌಡ ಅವರು ಮಾಡಿದರಾದರೂ ಅದು ಸಾಧ್ಯವಾಗಿಲ್ಲ, ಹಾಗಾಗಿ ಅಂತಿಮವಾಗಿ ಎಚ್.ಕೆ.ಕುಮಾರಸ್ವಾಮಿ ಅವರನ್ನು ಆಯ್ಕೆ ಮಾಡಲಾಗಿದೆ.
ಸಿಎಂ ಕುಮಾರಸ್ವಾಮಿ ಅವರು ಸಹ ಎಚ್.ಕೆ.ಕುಮಾರಸ್ವಾಮಿ ಅವರ ಆಯ್ಕೆಗೆ ಸಮ್ಮತಿ ನೀಡಿದ್ದಾರೆ ಎನ್ನಲಾಗಿದೆ. ಆದರೆ ಕುಮಾರಸ್ವಾಮಿ ಅವರು ರಾಜ್ಯದಲ್ಲಿ ಇಲ್ಲದಿರುವ ಸಮಯದಲ್ಲಿ ಜೆಡಿಎಸ್ ಅಧ್ಯಕ್ಷರ ಘೋಷಣೆ ಆಗಲಿದೆ. ನೂತನ ಅಧ್ಯಕ್ಷ , ರಾಜ್ಯಾಧ್ಯಕ್ಷರ ಅಧಿಕಾರ ಸ್ವೀಕರಿಸುವ ದಿನಾಂಕದ ಬಗ್ಗೆ ಇನ್ನು ನಿರ್ಧಾರವಾಗಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ