ಗದ್ದುಗೆಯಲ್ಲಿ ಐಕ್ಯರಾದ ನಡೆದಾಡುವ ದೇವರು

ತುಮಕೂರು:

      ಸಿದ್ದಗಂಗೆಯ ಸಿರಿಯಾಗಿ ನಡೆದಾಡುವ ದೇವರೆಂದೇ ಖ್ಯಾತರಾಗಿದ್ದ ಡಾ.ಶ್ರೀ ಶಿವಕುಮಾರ ಮಹಾಸ್ವಾಮಿಗಳು ಮಠದ ಆವರಣದಲ್ಲೇ ಇರುವ ಗದ್ದಗೆ ಸಮಾಧಿಯಲ್ಲಿಐಕ್ಯರಾದರು.

      ಸೋಮವಾರ ಬೆಳಿಗ್ಗೆ 11.44 ರ ಸಮಯಕ್ಕೆ ಲಿಂಗೈಕ್ಯರಾಗಿದ್ದ ಶ್ರೀಗಳ ದರ್ಶನಕ್ಕೆ ಮಂಗಳವಾರ 4 ಗಂಟೆಯವರೆಗೆ ಭಕ್ತರಿಗೆ ಅವಕಾಶ ಮಾಡಿಕೊಡಲಾಗಿತ್ತು. ಗೋಸಲ ಸಿದ್ದೇಶ್ವರ ವೇದಿಕೆ ಬಳಿ ಸೋಮವಾರದಿಂದ ಮಂಗಳವಾರ ಸಂಜೆಯವರೆಗೂ ಸರಿಸುಮಾರು 15 ಲಕ್ಷಕ್ಕೂ ಹೆಚ್ಚು ಭಕ್ತಾದಿಗಳು ದರ್ಶನ ಪಡೆದರು. 5 ಗಂಟೆಯ ಸಮಯಕ್ಕೆ ಶ್ರೀಗಳ ಲಿಂಗಶರೀರವನ್ನು ರುದ್ರಾಕ್ಷಿ ಮಂಟಪದ ಮೂಲಕ ಮೆರವಣಿಗೆಯಲ್ಲಿ ಹಳೆಮಠದ ಬಳಿ ಇರುವ ಗದ್ದುಗೆ ಸಮಾಧಿಯವರೆಗೆ ಕರೆತರಲಾಯಿತು. ಈ ಸಮಯಕ್ಕೆ ಶ್ರೀಗಳ ದರ್ಶನಭಾಗ್ಯ ಸಿಗದ ಅದೆಷ್ಟೊ ಮಂದಿ ಮಠದ ಇಕ್ಕೆಲ ರಸ್ತೆಗಳಲ್ಲಿ ನಿಂತು ಶ್ರೀಗಳ ದರ್ಶನಭಾಗ್ಯ ಪಡೆದರು.

      ಸಮಾಧಿ ಮಂಟಪದ ಬಳಿ ಶ್ರೀಗಳ ಲಿಂಗಶರೀರವನ್ನು ತಂದಾಗ ಅಲ್ಲಿ ಸಕಲ ಸರ್ಕಾರಿ ಗೌರವಗಳನ್ನು ಸಲ್ಲಿಸಲಾಯಿತು. ಸರ್ಕಾರದ ವತಿಯಿಂದ ರಾಷ್ಟ್ರಧ್ವಜ ಹೊದಿಕೆ ಮಾಡಲಾಯಿತು. ಗಣ್ಯಾತಿಗಣ್ಯರು ಶ್ರೀಗಳಿಗೆ ಗೌರವ ಸಲ್ಲಿಸಿದರು. ಮೂರು ಬಾರಿ ಕುಶಾಲತೋಪು ಹಾರಿಸಿ ಸರ್ಕಾರದ ವತಿಯಿಂದ ಗೌರವ ಸೂಚಿಸಲಾಯಿತು. ರಾಷ್ಟ್ರಧ್ವಜವನ್ನು ಮುಖ್ಯಮಂತ್ರಿಗಳು ಶ್ರೀ ಸಿದ್ದಲಿಂಗಸ್ವಾಮಿಗಳಿಗೆ ಹಸ್ತಾಂತರಿಸಿದರು.

      ಗೌರವ ನಮನ ಹಾಗೂ ಶ್ರೀಗಳ ಅಂತಿಮ ದರ್ಶನದ ಈ ವೇಳೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಸಿದ್ದರಾಮಯ್ಯ, ಡಿ.ವಿ.ಸದಾನಂದಗೌಡ, ವೀರಪ್ಪ ಮೊಯ್ಲಿ, ಗೃಹಸಚಿವ ಎಂ.ಬಿ.ಪಾಟೀಲ್, ಸಚಿವರಾದ ಈಶ್ವರಖಂಡ್ರೆ, ಎಸ್.ಆರ್.ಶ್ರೀನಿವಾಸ್, ಆರ್.ವಿ.ದೇಶಪಾಂಡೆ, ಡಿ.ಕೆ.ಶಿವಕುಮಾರ್, ಸಂಸದರಾದ ಎಸ್.ಪಿ.ಮುದ್ದಹನುಮೇಗೌಡ, ಶೋಭಾಕರಂದ್ಲಾಜೆ, ವಿ.ಎಸ್.ಉಗ್ರಪ್ಪ, ವಿವಿಧ ಮುಖಂಡರುಗಳಾದ ಬಸವರಾಜಹೊರಟ್ಟಿ, ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್ ಮೊದಲಾದವರು ಭಾಗವಹಿಸಿದ್ದರು. ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್ ಮತ್ತಿತರರು ಆಗಮಿಸಿ ಶ್ರೀಗಳ ಅಂತಿಮ ದರ್ಶನ ಪಡೆದು ವಾಪಸ್ಸಾದರು.

      ಬಾಬಾ ರಾಮ್‍ದೇವ್, ಸುತ್ತೂರು ಶ್ರೀಗಳು, ಸಿರಿಗೆರೆ ಪಂಡಿತಾರಾಧ್ಯ ಶ್ರೀಗಳು, ಆದಿಚುಂಚನಗಿರಿ ಶ್ರೀ ನಿರ್ಮಲಾನಂದನಾಥ ಶ್ರೀಗಳು, ಹಿರೇಮಠದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮಿಗಳು, ರಾಮಕೃಷ್ಣ ವಿವೇಕಾನಂದ ಆಶ್ರಮದ ವೀರೇಶಾನಂದ ಸರಸ್ವತಿ ಸ್ವಾಮಿಗಳು, ಸಿದ್ದರಬೆಟ್ಟದ ಶ್ರೀಗಳು, ಅಟವೀ ಶ್ರೀ ಶಿವಲಿಂಗಸ್ವಾಮಿಗಳು, ಕಾಗಿನೆಲೆಯ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ನಿರಂಜನಾನಂದ ಪುರಿ ಶ್ರೀಗಳು, ಹೊಸದುರ್ಗ ಶಾಖಾ ಮಠದ ಶ್ರೀ ಈಶ್ವರಾನಂದಪುರಿ ಸ್ವಾಮಿಗಳು, ಪಟ್ಟನಾಯಕನಹಳ್ಳಿಯ ಶ್ರೀ ನಂಜಾವಧೂತ ಸ್ವಾಮಿಗಳಯ ಸೇರಿದಂತೆ ಜಿಲ್ಲೆಯ ಮತ್ತು ನಾಡಿನ ವಿವಿಧ ಮಠಾಧೀಶರುಗಳು ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.

ಕ್ರಿಯಾವಿಧಿ:

      ಸಂಜೆ ಸುಮಾರು 6 ಗಂಟೆಯ ವೇಳೆಗೆ ಗದ್ದುಗೆ ಸಮಾಧಿ ಬಳಿ ಕ್ರಿಯಾವಿಧಿಗಳು ಆರಂಭವಾದವು. ಸಮಾಧಿಯ ಮೆಟ್ಟಿಲುಗಳಿಗೆ ಇಳಿಸಿದ ನಂತರ ಹಂತ ಹಂತದ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಹಾಲಿನ ಅಭಿಷೇಕ, ಜಲಾಭಿಷೇಕ, ಪಂಚಾಮೃತ ಅಭಿಷೇಕ ಇತ್ಯಾದಿಗಳು ನಡೆದವು. ಪುಣ್ಯನದಿಗಳ ಪವಿತ್ರ ತೀರ್ಥಾಭಿಷೇಕವನ್ನು ನಡೆಸಲಾಯಿತು.ನಂತರ ಶ್ರೀಗಳನ್ನು ಸಮಾಧಿಯ ಒಳಗೆ ತ್ರಿಕೋನಾರದಲ್ಲಿ ಸಿದ್ದಪಡಿಸಲಾಗಿದ್ದ ಗದ್ದುಗೆಗೆ ಪದ್ಮಾಸನ ರೀತಿಯಲ್ಲಿ ಕುಳ್ಳಿರಿಸಿ ಸಮಾಧಿ ಕ್ರಿಯೆ ನಡೆಸಲಾಯಿತು. ಉಪ್ಪು, ವಿಭೂತಿ, ಭಿಲ್ವಪತ್ರೆಯನ್ನು ಬಳಸಿ ಕ್ರಿಯಾವಿಧಿಗಳನ್ನು ಪೂರ್ಣಗೊಳಿಸಲಾಯಿತು. ಶ್ರೀಗಳ ಇಚ್ಛೆಯಂತೆಯೇ ಎಲ್ಲಾ ಕ್ರಿಯೆಗಳು ನಡೆದವು. ಸಮಾಧಿಯ ಗದ್ದುಗೆ ಸ್ಥಳವನ್ನು 37 ವರ್ಷಗಳ ಸಮಯದಲ್ಲೇ ಶ್ರೀಗಳು ಗುರುತಿಸಿದ್ದರು. ಅದೇ ಸ್ಥಳದಲ್ಲಿ ಎಲ್ಲಾ ಕ್ರಿಯೆಗಳು ನಡೆದವು.

ಲಕ್ಷೋಪಲಕ್ಷ ಭಕ್ತಗಣ :

      ಸಿದ್ದಗಂಗೆಯ ಪವಾಡ ಪುರುಷ, ಕಾಯಕ ಯೋಗಿ ಶ್ರೀಗಳು ಲಿಂಗೈಕ್ಯರಾದ ಸುದ್ದಿ ತಿಳಿಯುತ್ತಿದ್ದಂತೆ ಸೋಮವಾರದಿಂದಲೇ ಶ್ರೀ ಕ್ಷೇತ್ರದತ್ತ ಲಕ್ಷೋಪಲಕ್ಷ ಭಕ್ತಗಣ ಹರಿದು ಬರಲಾರಂಬಿಸಿತು. ತುಮಕೂರು ಜನತೆ ಸೇರಿದಂತೆ ಇಡೀ ರಾಜ್ಯದ ಜನತೆ ಸಿದ್ದಗಂಗಾ ಮಠದತ್ತ ಮುಖಮಾಡಿದ್ದರು. ಸುಮಾರು 15 ಲಕ್ಷಕ್ಕೂ ಹೆಚ್ಚು ಮಂದಿ ಭಕ್ತಾದಿಗಳು ಮಠಕ್ಕೆ ಬಂದುಹೋಗಿದ್ದು, ಕ್ಷಣ ಕ್ಷಣಕ್ಕೂ ಮಠಕ್ಕೆ ಆಗಮಿಸುತ್ತಿರುವ ಸಂಖ್ಯ ಏರುತ್ತಲೇ ಇತ್ತು.

      ಮಠಕ್ಕೆ ಆಗಮಿಸಲು ಮೂರ್ನಾಲ್ಕು ಕಡೆಗಳಲ್ಲಿ ಮಾರ್ಗಗಳನ್ನು ಬದಲಿಸಿ ಭಕ್ತಾದಿಗಳನ್ನು ಒಳಗಡೆ ಬಿಡಲಾಯಿತು. ಕ್ಯಾತ್ಸಂದ್ರದ ಮೂಲಕ ಬರುವ ಭಕ್ತಾದಿಗಳಿಗೆ ಕ್ಯಾತ್ಸಂದ್ರ ರೈಲ್ವೇ ನಿಲ್ದಾಣದ ಬಳಿಯಿಂದಲೇ ಬ್ಯಾರಿಕೇಡ್ ಮೂಲಕ ಸಾಲಾಗಿ ಹೋಗಲು ಅನುಕೂಲ ಮಾಡಲಾಗಿತ್ತು. ಬಂಡೆಪಾಳ್ಯದ ಕಡೆಯಿಂದ ಆಗಮಿಸುತ್ತಿದ್ದ ಭಕ್ತಾದಿಗಳಿಗೆ ಮಠದ ಪ್ರೌಢಶಾಲೆಯ ಹಿಂಬದಿ ಗೇಟ್ ಮೂಲಕ ಭಕ್ತರನ್ನು ಬಿಡಲಾಗುತ್ತಿತ್ತು.

      ಕ್ಯಾತ್ಸಂದ್ರದ ಮೂಲಕ ಸುಮಾರು 2 ಕಿಮೀ ಉದ್ದ ಸಾಲು ನಿಂತಿದ್ದರೆ, ಬಂಡೆಪಾಳ್ಯದ ಕಡೆಯಿಂದ ಬರುತ್ತಿರುವ ಭಕ್ತಾದಿಗಳ ಸಾಲು ಸುಮಾರು 1.5 ಕಿಮೀನಷ್ಟಿತ್ತು. ಸಾಲುಗಳಲ್ಲಿ ನಿಂತ ಭಕ್ತಾದಿಗಳಿಗೆ ಮಠದ ಕಡೆಯಿಂದ ನೀರಿನ ವ್ಯವಸ್ಥೆ ಮಾಡಲಾಗಿದ್ದು, ವಿದ್ಯಾರ್ಥಿಗಳು ನೀರು ವಿತರಿಸುತ್ತಿದ್ದರು. ಇನ್ನು ಶ್ರೀಗಳ ಕುರಿತಾಗಿ ಪ್ರಾರ್ಥನೆ ಮಾಡುತ್ತಿದ್ದ ಅದೆಷ್ಟೊ ಮಂದಿ ವಿದ್ಯಾರ್ಥಿಗಳು ತಂದೆಯನ್ನು ಕಳೆದುಕೊಂಡ ಅನಾಥರಂತೆ ಕಣ್ಣೀರಿಡುತ್ತಾ, ತಮ್ಮ ಪ್ರೀತಿ ವಾತ್ಸಲ್ಯ ತೋರುತ್ತಿದ್ದುದು ಕಂಡು ಬಂದಿತು. ಇನ್ನೊಂದು ಕಡೆ ಭಕ್ತಾದಿಗಳು ಶಿವನಾಮವ ಜಪ ಮಾಡುವುದರೊಂದಿಗೆ ಶ್ರೀಗಳಿಗೆ ಜೈಕಾರ ಹಾಕುತ್ತಾ ಭಕ್ತಿ ಸಮರ್ಪಿಸಿದರು.

      ಒಂದು ಕಡೆ ಭಕ್ತಜನಾಂಗದ ಘೋಷಣೆಗಳು ಮೊಳಗುತ್ತಿದ್ದರೆ, ಇನ್ನೊಂದೆಡೆ ಭಕ್ತರ ಕಣ್ಣಲ್ಲಿ ಕಂಬನಿ ಮಿಡಿಯುತ್ತಿತ್ತು. ಮನಸ್ಸಿನಲ್ಲಿ ಶಿವಕುಮಾರಸ್ವಾಮೀಜಿಯವರನ್ನು ನೆನೆಯುತ್ತಾ, ಹೆಜ್ಜೆ ಮೇಲೆ ಹೆಜ್ಜೆ ಹಾಕುತ್ತ, ಮುಂದೆ ಸಾಗುತ್ತಿದ್ದರು.

      ಕೆಲ ಸಂಘಟನೆಕಾರರು ಶ್ರೀಗಳ ಚಿತ್ರವಿರುವ ಧ್ವಜವನ್ನು ಹಿಡಿದು ಶ್ರೀಗಳಿಗೆ ಜೈಕಾರ ಕೂಗುತ್ತಾ ಸಾಲಿನಲ್ಲಿ ಸಾಗಿದರು. ರಕ್ಷಣಾ ಸಿಬ್ಬಂದಿಗೆ ಮಠದ ವಿದ್ಯಾರ್ಥಿಗಳೇ ಆಹಾರದ ಪೊಟ್ಟಣಗಳನ್ನು ತಂದು ಕೊಡುತ್ತಿದ್ದರು. ಗೋಸಲ ಸಿದ್ದೇಶ್ವರ ವೇದಿಕೆಯ ಮುಂಭಾಗದಲ್ಲಿ ಹಾಕಲಾಗಿದ್ದ ಆಸನಗಳಲ್ಲಿ ಕೆಲವರು ಅಂಧರು ಸೇರಿದಂತೆ ವಿಶೇಷ ಚೇತನರು ಕುಳಿತು ಮನಸ್ಸಿನಿಂದಲೇ ಶ್ರೀಗಳ ದರ್ಶನ ಪಡೆದರು.

ನಾಲ್ಕು ಚಕ್ರದ ವಾಹನಗಳ ಪಾರ್ಕಿಂಗ್ ವ್ಯವಸ್ಥೆ:

      ರಾಷ್ಟ್ರೀಯ ಹೆದ್ದಾರಿಯ ಮೂಲಕ ಮಠಕ್ಕೆ ಆಗಮಿಸುವ ವಾಹನಗಳನ್ನು ಅಲ್ಲಿಯೇ ಪಾರ್ಕಿಂಗ್ ಮಾಡಲು ಅನುಕೂಲ ಮಾಡಲಾಗಿದ್ದು, ಸಿದ್ದಗಂಗಾ ಮಠಕ್ಕೆ ಪ್ರವೇಶಿಸುವ ರಸ್ತೆಯ ಪ್ರಾರಂಭದಲ್ಲೇ ವಾಹನಗಳ ಪಾರ್ಕಿಂಗ್‍ಗೆ ವ್ಯವಸ್ಥೆ ಮಾಡಲಾಗಿದ್ದು, ಕೇವಲ ಗಣ್ಯರ ವಾಹನಗಳನ್ನು ಮಾತ್ರ ಕ್ಯಾತ್ಸಂದ್ರದ ಮೂಲಕ ಒಳಗಡೆ ಬಿಡಲಾಗಿ, ಮುಖ್ಯಗೇಟ್‍ನ ಬಳಿ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿತ್ತು. ಪ್ರಮುಖ ಮಠಾಧೀಶರು ಹಾಗೂ ಜನಪ್ರತಿನಿಧಿಗಳ ವಾಹನಗಳನ್ನು ಮಾತ್ರ ಗೋಸಲಸಿದ್ದೇಶ್ವರ ವೇದಿಕೆಯವರೆಗೆ ಬಿಡಲಾಗಿತ್ತು. ಅಲ್ಲದೆ ಮಠದ ಸುತ್ತಲೂ ಬ್ಯಾರಿಕೇಡ್ ಹಾಕಿದ್ದು, ಮೂರ್ನಾಲ್ಕು ಕಡೆಗಳಲ್ಲಿ ನಾಲ್ಕು ಚಕ್ರ ವಾಹನಗಳ ನಿಲುಗಡೆ ವ್ಯವಸ್ಥೆ ಮಾಡಲಾಗಿತ್ತು.

ಅನ್ನದಾಸೋಹ ವ್ಯವಸ್ಥೆ:

      ಮಠಕ್ಕೆ ಅಗಮಿಸುತ್ತಿದ್ದ ಭಕ್ತಾದಿಗಳಿಗೆ ಮಠದ ಸುತ್ತಲೂ ಅನ್ನದಾನದ ವ್ಯವಸ್ಥೆ ಮಾಡಲಾಗಿತ್ತು. ಪ್ರತಿ ನಿತ್ಯದಂತೆ ಯಾವುದೇ ಕಾರಣಕ್ಕೂ ದಾಸೋಹ ವ್ಯವಸ್ಥೆ ನಿಲ್ಲಿಸದಂತೆ ನೀಡಲಾಗಿದ್ದ ಸೂಚನೆಯ ಮೇರೆಗೆ ಮಠದಲ್ಲಿಯೂ ಅನ್ನದಾಸೋಹ ನಡೆಯುತ್ತಿದೆ. ಜತೆಗೆ ವಿವಿಧ ಸಂಘ ಸಂಸ್ಥೆಗಳು ಸ್ವಯಂ ಆಗಿ ಅನ್ನದಾಸೋಹ ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೆ ಕೃಷಿ, ಮತ್ತು ವಸ್ತು ಪ್ರದರ್ಶನ ಕಟ್ಟಡದ ಒಳಭಾಗದಲ್ಲಿ ಮಠದಿಂದ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

 ಬಸ್‍ಗಳಲ್ಲಿ ಟಿಕೆಟ್ :

     ಶ್ರೀಗಳ ಲಿಂಗೈಕ್ಯದಿಂದ ಸೋಮವಾರ ಸಂಜೆಯಿಂದಲೇ ಮಠಕ್ಕೆ ಆಗಮಿಸುವ ಭಕ್ತಾದಿಗಳಿಗೆ ಟಿಕೆಟ್ ಪಡೆಯದಂತೆ ಉಚಿತವಾಗಿ ಪ್ರಯಾಣಿಸಲು ಬಸ್‍ಗಳ ಅನುಕೂಲ ಮಾಡಲಾಗಿತ್ತು. ಈ ಬಗ್ಗೆ ಸ್ವತಃ ಮುಖ್ಯಮಂತ್ರಿಗಳೇ ಸೂಚನೆ ನೀಡಿದ್ದರು. ಈ ಸಂಬಂಧ ಜಿಲ್ಲಾಡಳಿತದ ವತಿಯಿಂದ ಆದೇಶ ಪ್ರತಿಯೂ ನೀಡಲಾಗಿದ್ದು, ಮಾಧ್ಯಮಗಳಲ್ಲಿ ಹಾಗೂ ಪತ್ರಿಕೆಗಳಲ್ಲಿ ಪ್ರಕಟಮಾಡಲಾಗಿತ್ತು. ಆದರೂ ನಗರ ಸಾರಿಗೆಯ ಕೆಲ ಬಸ್‍ಗಳಲ್ಲಿ ಟಿಕೆಟ್ ಪಡೆದಿದ್ದು, ಕೆಲ ಪ್ರಯಾಣಿಕರು ಸಾರಿಗೆ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು.
ಪೊಲೀಸ್ ಬಂದೋಬಸ್ತ್

     ನಗರದಲ್ಲಿ ಎರಡು ದಿನಗಳಿಂದ ಅತಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಮಠದಲ್ಲಿ ಸಾವಿರಾರು ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು. ಸೋಮವಾರ ರಾತ್ರಿಯಿಂದಲೂ ಮಠಕ್ಕೆ ಆಗಮಿಸುತ್ತಿದ್ದ ಭಕ್ತರ ಸಂಖ್ಯೆ ಏರುತ್ತಿದ್ದ ಪರಿಣಾಮ ಮಂಗಳವಾರ ಬೆಳಗ್ಗೆ ಒಂದು ಸಾವಿರಕ್ಕೂ ಹೆಚ್ಚು ಪೊಲೀಸ್‍ರನ್ನು ಕರೆಸಲಾಗಿತ್ತು.

4.30ರ ವರೆಗೆ ಅಂತಿಮ ದರ್ಶನ:

      ಸಂಜೆ 4.30ರ ವರೆಗೆ ಶ್ರೀಗಳ ದರ್ಶನ ಮಾಡಲು ಅನುಕೂಲ ಮಾಡಲಾಗಿತ್ತು. ಮಧ್ಯಾಹ್ನ 3 ಗಂಟೆಯ ನಂತರ ಹೊರಗಡೆಯಿಂದ ಬರುತ್ತಿದ್ದ ಭಕ್ತರಿಗೆ ದರ್ಶನದ ಭಾಗ್ಯ ದೊರೆಯಲಿಲ್ಲ. ಮಠದ ಆವರಣದಲ್ಲಿಯೇ ಇದ್ದ ಸಾಕಷ್ಟು ಮಂದಿಗೆ ನೇರ ದರ್ಶನ ಭಾಗ್ಯ ದೊರೆಯಲಿಲ್ಲ. ಕೇವಲ ಮಠದ ಆವರಣದಲ್ಲಿ ಇಒದ್ದ ಎಲ್‍ಇಡಿಗಳ ಮೂಲಕ ದರ್ಶನ ಪಡೆದು ಸಂತೃಪ್ತರಾದರು.

ರುದ್ರಾಕ್ಷಿ ತೇರಿನಲ್ಲಿ ಶ್ರೀಗಳ ಲಿಂಗಶರೀರದ ಮೆರವಣಿಗೆ:

      ಸಂಜೆ 4.30ರ ನಂತರ ವಿವಿಧ ಕಲಾತಂಡಗಳೊಂದಿಗೆ ಶ್ರೀಗಳ ಲಿಂಗ ಶರೀರವನ್ನು ರುದ್ರಾಕ್ಷಿ ತೇರಿನಲ್ಲಿ ಕೂರಿಸಿ ಭಕ್ತಾದಿಗಳ ಸಮ್ಮುಖದಲ್ಲಿ ಪೊಲೀಸ್ ಬಂದೋಬಸ್ತ್‍ನೊಂದಿಗೆ ಮೆರವಣಿಗೆ ಮಾಡಲಾಯಿತು,. ಗೋಸಲ ಸಿದ್ದೇಶ್ವರ ವೇದಕೆಯಿಂದ ಕ್ರಿಯಾಸಮಾಧಿ ಸ್ಥಳದವರೆಗೆ ಮಠದ ವಿದ್ಯಾರ್ಥಿಗಳಿಂದ ಸಕಲ ಗೌರವ ಕವಾಯತುದೊಂದಿಗೆ, ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಹಾಗೂ ಎನ್‍ಸಿಸಿ ವಿದ್ಯಾರ್ಥಿಗಳೊಂದಿಗೆ ಮೆರವಣಿಗೆ ನಡೆಸಲಾಯಿತು.

ಕಿರಿಯ ಶ್ರೀಗಳಿಂದ ಕಣ್ಣೀರು:

      ಶ್ರೀಗಳ ಲಿಂಗೈಕ್ಯರಾದ ಸುದ್ದಿ ಕೇಳುತ್ತಲೇ ಭಕ್ತರಲ್ಲಿ ಕಣ್ಣೀರು ಹರಿಯುತ್ತಿತ್ತು. ಅದರಲ್ಲಿ ಸಿದ್ದಲಿಂಗ ಸ್ವಾಮಿಗಳು ಲಿಂಗೈಕ್ಯ ಶ್ರೀ ಶಿವಕುಮಾರ ಮಹಾಸ್ವಾಮಿಗಳ ಪಾದಪೂಜೆ ಮಾಡುವಾಗ ಮನಸ್ಸಿನಲ್ಲಿನ ನೋವನ್ನು ಕಣ್ಣೀರಿನ ಮೂಲಕ ವ್ಯಕ್ತ ಪಡಿಸಿದರು. ಸಂಜೆ ಕ್ರಿಯಾವಿಧಾನ ಮಾಡುವ ವೇಳೆ ಸರ್ಕಾರಿ ಗೌರವ ಸಲ್ಲಿಸುವ ವೇಳೆಯಲ್ಲಿಯೂ ಕಂಬನಿ ಜಾರುತ್ತಿತ್ತು.

      ಬೆಳಗ್ಗೆಯಿಂದಲೂ ಚಿತ್ರರಂಗದಿಂದ ದರ್ಶನ್, ನೀನಾಸಂ ಸತೀಶ್, ಜಗ್ಗೇಶ್ ಮತ್ತಿತರರು ಆಗಮಿಸಿ ಶ್ರೀಗಳ ಅಂತಿಮ ದರ್ಶನ ಪಡೆದರು. ಜನಪ್ರತಿನಿಧಿಗಳಾದ ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸೇರಿದಂತೆ ವಿವಿಧ ಜಿಲ್ಲೆಗಳ ಸಂಸದರು, ಶಾಸಕರು ಹಾಗೂ ಸಚಿವರುಗಳು ಆಗಮಿಸಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link