ಚಿಕ್ಕಮಗಳೂರು:
ಅನಾರೋಗ್ಯದಿಂದ ಬಳಲುತ್ತಿದ್ದರಿಂದ ಮೂರು ತಿಂಗಳ ಗಂಡು ಮಗುವನ್ನು ಹೆತ್ತ ತಾಯಿಯೇ ಮಗುವನ್ನು ನೀರಿಗೆ ಎಸೆದು ಕೊಂದ ಅಮಾನವೀಯ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿ ನಡೆದಿದೆ.
ಕಡೂರು ತಾಲೂಕಿನ ನಿಡಘಟ್ಟ ನಿವಾಸಿ ಕಮಲ ಮಗುವನ್ನು ನಾಲೆಗೆ ಎಸೆದ ತಾಯಿ. ಮೂರು ತಿಂಗಳ ತೇಜಸ್ ಮೃತ ಕಂದಮ್ಮ ಎಂದು ಗುರುತಿಸಲಾಗಿದೆ. ತರೀಕೆರೆ ತಾಲೂಕಿನ ಹಳಿಯಾರು ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಕಮಲ ಹಾಗೂ ಆಕೆಯ ಅತ್ತೆ ಮಗುವಿಗೆ ಹುಷಾರಿರಲಿಲ್ಲ ಎಂದು ತರೀಕೆರೆಯ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದರು. ತಡರಾತ್ರಿ ಮಗು ಅಳುತ್ತಿತ್ತು ಎಷ್ಟೇ ಸಮಾಧಾನ ಮಾಡಿದರೂ ಅಳು ನಿಲ್ಲಿಸಿರಲಿಲ್ಲ. ಈ ವೇಳೆ ಕಮಲ ಸಮಾಧಾನ ಮಾಡಿಸಿಕೊಂಡ ವಾಪಾಸ್ ಬರುತ್ತೇನೆ ಎಂದು ಅತ್ತೆ ಬಳಿ ಹೇಳಿ ಮಗುವನ್ನು ಎತ್ತುಕೊಂಡು ಹೋಗಿದ್ದಳು.
ಆದರೆ ತಾಯಿ ಕಮಲ ಆ ಮಗುವನ್ನು ಆಸ್ವತ್ರೆಯಿಂದ ಹೊರ ತೆಗೆದುಕೊಂಡು ಬಂದು ಪಟ್ಟಣದಿಂದ 4 ಕಿ.ಮೀ ದೂರ ಇರುವ ಹಳಿಯೂರು ಕ್ರಾಸ್ ಬಳಿ ಇರುವ ಭದ್ರಾ ನಾಲೆಯಲ್ಲಿ ಎಸೆದಿದ್ದಾಳೆ. ನೀರು ಹರಿಯುತ್ತಿದ್ದ ರಭಸಕ್ಕೆ ಮಗು ಮೃತದೇಹ ಹರಿದುಬಂದು 5 ಕಿ.ಮೀ. ದೂರ ಇರುವ ಬೆಟ್ಟದ ತಾವರೆ ಕರೆಯ ಬಳಿಯ ಪಂಪ್ ಹೌಸ್ನಲ್ಲಿ ಈ ಮಗುವಿನ ಶವ ತೇಲುತ್ತಿರುವುದು ಕಂಡು ಬಂದಿದ್ದು, ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ತರೀಕೆರೆ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಸ್ಥಳಕ್ಕೆ ಬಂದ ಪೊಲೀಸರು ಮಗುವಿನ ಮೃತದೇಹವನ್ನು ನಾಲೆಯಿಂದ ಹೊರತಗೆದು, ಪರಿಶೀಲನೆ ನಡೆಸಿದ್ದಾರೆ. ಯಾವ ಕಾರಣಕ್ಕೆ ಈ ಕೃತ್ಯ ಎಸಗಿದ್ದಾಳೆ ಎಂಬುದು ಇನ್ನು ತಿಳಿದು ಬಂದಿಲ್ಲ. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ