ಬೆಂಗಳೂರು :
ಖ್ಯಾತ ಸಂಗೀತ ನಿರ್ದೇಶಕ ರಾಜನ್ (87) ಅವರು ಭಾನುವಾರ (ಅ.11) ರಾತ್ರಿ 10.30ಕ್ಕೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು ಮನೆಯಲ್ಲಿಯೇ ಹೃದಯಾಘಾತದಿಂದ ನಿಧನರಾದರು. ಪುತ್ರ ಮತ್ತು ಪುತ್ರಿಯನ್ನು ಅವರು ಅಗಲಿದ್ದು.
ಹೆಬ್ಬಾಳದ ಚಿತಾಗಾರದಲ್ಲಿ ಸೋಮವಾರ (ಅ.12) ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಮೂಲತಃ ಮೈಸೂರಿನವರಾದ ರಾಜನ್, ತಮ್ಮ ಸಹೋದರ ನಾಗೇಂದ್ರಪ್ಪ ಅವರೊಂದಿಗೆ ಸೇರಿಕೊಂಡು ‘ರಾಜನ್-ನಾಗೇಂದ್ರ’ ಹೆಸರಿನಲ್ಲಿ ಜಂಟಿಯಾಗಿ ಸಂಗೀತ ನಿರ್ದೇಶನ ಮಾಡುತ್ತಿದ್ದರು.
1952ರಲ್ಲಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಈ ಜೋಡಿ, ಸುಮಾರು 5 ದಶಕಗಳ ಕಾಲ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿತ್ತು. 1952ರಿಂದ 1999ರವರೆಗೆ 375ಕ್ಕೂ ಅಧಿಕ ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ. ಇದರಲ್ಲಿ ಕನ್ನಡದ 200ಕ್ಕೂ ಅಧಿಕ ಸಿನಿಮಾಗಳಿವೆ. ಕನ್ನಡದ ಜೊತೆ ತೆಲುಗಿನಲ್ಲಿಯೂ ಈ ಜೋಡಿ ದೊಡ್ಡ ಯಶಸ್ಸು ಕಂಡಿತ್ತು.
ತಮಿಳು, ಹಿಂದಿ, ಮಲಯಾಳಂ, ಶ್ರೀಲಂಕಾದ ಸಿಂಹಳ ಭಾಷೆಯ ಸಿನಿಮಾಗಳಿಗೂ ಸಂಗೀತ ಸಂಯೋಜಿಸಿದ್ದಾರೆ. ರಾಜನ್ ಅವರ ಸಹೋದರ ನಾಗೇಂದ್ರ ಅವರು 2000ರಲ್ಲಿ ಅನಾರೋಗ್ಯದಿಂದ ನಿಧನರಾಗಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ