ಮೈಸೂರು :
ಮೇಯರ್ ಸ್ಥಾನದ ಹಂಚಿಕೆ ಕುರಿತು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರೊಂದಿಗೆ ಮಾಜಿ ಸಿಎಂ ಸಿದ್ದರಾಮಯ್ಯ ನಡೆಸಿದ ಮಾತುಕತೆ ಯಶಸ್ವಿಯಾಗಿದ್ದು, ಅಂತಿಮವಾಗಿ ಮೈಸೂರು ಮಹಾನಗರ ಪಾಲಿಕೆ ಮೊದಲ ಅವಧಿಯನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡಲಾಗಿದ್ದು, ಇದರೊಂದಿಗೆ 5 ವರ್ಷಗಳ ನಂತರ ಕಾಂಗ್ರೆಸ್ ಮೇಯರ್ ಸ್ಥಾನ ಅಲಂಕರಿಸಲಿದೆ.
ಮಹಾನಗರ ಪಾಲಿಕೆ ಮೇಯರ್ ಸ್ಥಾನ ಪಡೆಯಲು ಕಾಂಗ್ರೆಸ್-ಜೆಡಿಎಸ್ ದೋಸ್ತಿಗಳ ನಡುವೆ ನಡೆದ ಕುಸ್ತಿ ಅಂತೂ ಇಂತು ಸುಖಾಂತ್ಯ ಕಂಡಿದ್ದು, ತೀವ್ರ ಕುತೂಹಲ ಕೆರಳಿಸಿದ್ದ ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ಕೈ ಮೇಲಾಗಿದೆ.
11ನೆ ವಾರ್ಡ್‍ನ ಕಾಂಗ್ರೆಸ್ ಸದಸ್ಯೆ ಪುಷ್ಪಲತಾ ಜಗನ್ನಾಥ್ ಮೇಯರ್ ಆಗಿ, 31ನೆ ವಾರ್ಡ್‍ನ ಜೆಡಿಎಸ್‍ನ ಶಫಿ ಅಹಮ್ಮದ್ ಉಪಮೇಯರ್ ಆಗಿ ಆಯ್ಕೆಯಾಗಿದ್ದಾರೆ.
ಈ ಬಾರಿಯ ನಗರ ಪಾಲಿಕೆ ಮೇಯರ್ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪ ಮೇಯರ್ ಸ್ಥಾನ ಬಿಸಿಎಗೆ ಮೀಸಲಾಗಿದೆ. ಹೀಗಾಗಿ ಎರಡು ಪಕ್ಷಗಳೂ ಮೇಯರ್ ಸ್ಥಾನ ಪಡೆಯಲು ತಂತ್ರ-ಪ್ರತಿತಂತ್ರ ರೂಪಿಸಿದ್ದವು, ರಾಜ್ಯದಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿರುವ ಉಭಯ ಪಕ್ಷಗಳು ಪಾಲಿಕೆ ಅಧಿಕಾರ ಹಿಡಿಯಲು ಹೊಂದಾಣಿಕೆ ರಾಜಕಾರಣ ಮಾಡಿಕೊಂಡಿವೆ.
ಆದರೆ ಮೇಯರ್ ಪಟ್ಟಕ್ಕಾಗಿ ಎರಡೂ ಪಕ್ಷಗಳಲ್ಲೂ ಪೈಪೋಟಿ ಜೋರಾಗಿತ್ತು. ಅಂತಿಮವಾಗಿ ಮೈಸೂರು ಮಹಾನಗರ ಪಾಲಿಕೆ ಮೊದಲ ಅವಧಿಯನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡಲಾಗಿದ್ದು, ಇದರೊಂದಿಗೆ 5 ವರ್ಷಗಳ ನಂತರ ಕಾಂಗ್ರೆಸ್ ಮೇಯರ್ ಸ್ಥಾನ ಅಲಂಕರಿಸಲಿದೆ.
ರೆಸಾರ್ಟ್ ರಾಜಕಾರಣ:
ಕಳೆದ ಒಂದು ವಾರದಿಂದ ಮೇಯರ್ ಸ್ಥಾನಕ್ಕಾಗಿ ಎರಡೂ ಪಕ್ಷಗಳ ನಡುವೆ ಹಗ್ಗ-ಜಗ್ಗಾಟ ನಡೆದಿತ್ತು. ಜೆಡಿಎಸ್-ಕಾಂಗ್ರೆಸ್ ನಾಯಕರ ನಡುವೆ ಪೈಪೋಟಿ ಏರ್ಪಟ್ಟಿತ್ತು. ಒಂದು ಹಂತದಲ್ಲಿ ಜೆಡಿಎಸ್ ಸದಸ್ಯರು ರೆಸಾರ್ಟ್ ಯಾತ್ರೆಯನ್ನೂ ನಡೆಸಿದ್ದರು. ಆದರೆ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ನಿರ್ಧಾರದಂತೆ ಕಾಂಗ್ರೆಸ್‍ಗೆ ಮೇಯರ್ ಸ್ಥಾನ ಬಿಟ್ಟುಕೊಡಲು ತೀರ್ಮಾನವಾದ ಹಿನ್ನೆಲೆಯಲ್ಲಿ ಇಂದು ಎಲ್ಲರೂ ಹಿಂದಿರುಗಿ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಮತ ಚಲಾಯಿಸಿದರು.
