ಮೈಸೂರು :
ಜಿಲ್ಲೆಯ ಟಿ. ನರಸೀಪುರದ ಬೆನಕನಹಳ್ಳಿ ಸ್ವಾಮೀಜಿಗಳು ನಿಧನರಾಗಿದ್ದು, ಈ ಸಾವು ಹಲವು ಅನುಮಾನಕ್ಕೆ ಕಾರಣವಾಗಿದೆ.
ಬೆನಕನಹಳ್ಳಿ ಮಠದ ಪೀಠಾಧ್ಯಕ್ಷ ಮಹದೇವಸ್ವಾಮಿ (47) ಸ್ವಾಮೀಜಿ ನಿನ್ನೆ ಆರಾಮವಾಗಿಯೇ ಓಡಾಡಿಕೊಂಡಿದ್ದರು. ರಾತ್ರಿ ಮಲಗಲು ಕೋಣೆಗೆ ಹೋದವರು ಬೆಳಗ್ಗೆ ಎಷ್ಟು ಹೊತ್ತಾದರೂ ಎಚ್ಚರಗೊಂಡಿರಲಿಲ್ಲ. ಸ್ವಾಮೀಜಿ ಬಾರದ ಹಿನ್ನೆಲೆ ಬಾಗಿಲು ಮುರಿದು ಒಳ ಹೋಗಿ ನೋಡಿದಾಗ ಅವರು ಸಾವನ್ನಪ್ಪಿರುವ ಸಂಗತಿ ಬೆಳಕಿಗೆ ಬಂದಿದೆ. ಅವರು ಮಲಗಿದ್ದಾಗಲೇ ಹೃದಯಾಘಾತಕ್ಕೆ ಒಳಗಾಗಿದ್ದು ಸಾವನ್ನಪ್ಪಿದ್ದಾರೆ ಎಂದು ಮಠದಲ್ಲಿರುವವರು ತಿಳಿಸಿದ್ದಾರೆ.
ಮಠದ ಆಸ್ತಿ ವಿಷಯಕ್ಕೆ ಸಂಬಂಧಿಸಿದಂತೆ ಆಡಳಿತ ಮಂಡಳಿಯಲ್ಲಿ ಮುಸುಕಿನ ಗುದ್ದಾಟ ನಡೆದಿತ್ತು. ಈ ಹಿನ್ನೆಲೆ ಈ ಸಾವು ಸಾಕಷ್ಟು ಅನುಮಾನ ಮೂಡಿಸಿದೆ ಎಂದು ಕೂಡ ಕೆಲವರು ಆರೋಪಿಸಿದ್ದಾರೆ. ಆದರೆ, ಸ್ವಾಮೀಜಿಗಳ ಸಾವಿನ ಬಗ್ಗೆ ಹಲವು ರೀತಿಯ ಅನುಮಾನಗಳು ವ್ಯಕ್ತವಾಗುತ್ತಿದ್ದು, ಇದು ಹೃದಯಾಘಾತವಲ್ಲ ಆತ್ಮಹತ್ಯೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಅಲ್ಲದೇ ಸ್ವಾಮೀಜಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಯಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಈ ಹಿನ್ನೆಲೆಯಲ್ಲಿ ಟಿ.ನರಸೀಪುರ ಪೊಲೀಸರು ಪರಿಶೀಲನೆ ಮಾಡಿದ್ದಾರೆ. ಇನ್ನು ಮಠದ ಆವರಣದಲ್ಲೇ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ ನಡೆಯುತ್ತಿದೆ ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ