ಮೈಸೂರು :
ನೆದರ್‌ಲ್ಯಾಂಡ್ ಹುಡುಗ ಹಾಗೂ ಮೈಸೂರು ಹುಡುಗಿ ಇಂದು ಮೈಸೂರಿನಲ್ಲಿ ಹಿಂದೂ ಸಂಪ್ರದಾಯದಂತೆ ಸಪ್ತಪದಿ ತುಳಿದು ಸತಿ-ಪತಿಗಳಾಗಿದ್ದಾರೆ.
ಮೈಸೂರಿನ ವಕೀಲರಾದ ಸುಮನಾ ಮತ್ತು ರಾಮರವೀಂದ್ರ ಅವರ ಪುತ್ರಿ ಅನು, ನೆದರ್‌ಲ್ಯಾಂಡ್ ನ ರೆನೆ ವ್ಯಾನ್ ಬೋರ್ಗೆಟ್ ಅವರನ್ನು ಮದುವೆಯಾದ ಯುವತಿ. ನೆದರ್‌ಲ್ಯಾಂಡ್‌ಗೆ ಎಲ್‌ಎಲ್‌ಎಂ(ಲ್ಯಾಟಿನ್ ಲೆಗಮ್ ಮ್ಯಾಜಿಸ್ಟರ್) ವ್ಯಾಸಂಗಕ್ಕೆ ತೆರಳಿದ್ದ ಅನು ಅಲ್ಲಿ ಪರಿಚಯವಾದ ರೆನೆ ಅವರನ್ನು ಪ್ರೀತಿಸಿ ಇಂದು ತಮ್ಮ ಪೋಷಕರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಅನು ತಮ್ಮ ಪ್ರೀತಿ ಶುರುವಾದ ಮೇಲೆ ಪ್ರಿಯಕರ ರೆನೆ ವ್ಯಾನ್ ಗೆ ಕನ್ನಡ ಮಾತಾಡುವುದನ್ನು ಕಲಿಸಿದ್ದಾರೆ. ರೆನೆ ಒಂದೆರಡು ಕನ್ನಡ ವ್ಯಾಕ್ಯಗಳನ್ನು ಮಾತಾಡುತ್ತಾರೆ. ರೆನೆ ಅವರ ಪೋಷಕರು ಕೂಡ ಒಂದೆರಡು ಪದ ಕನ್ನಡ ಕಲಿತಿದ್ದಾರೆ. ಹೀಗಾಗಿ ವಿದೇಶಿ ನೆಂಟರು ಕನ್ನಡ ಕಲಿತು ಕನ್ನಡದಲ್ಲೆ ಮಾತಾಡುತ್ತಿದ್ದ ದೃಶ್ಯಗಳು ಮದುವೆ ಮನೆಯಲ್ಲಿ ಕಂಡು ಬಂದಿತು.
ಈ ಮದುವೆಯಲ್ಲಿ ಲಿಂಗ ತಾರತಮ್ಯ ಸಾರುವ ಸಂಪ್ರದಾಯ ದೂರವಿಟ್ಟು ಪೂಜೆಗಳ ನಡೆಸಲಾಯಿತು. ಭತ್ತ ಕುಟ್ಟುವುದು, ಮೆಹೆಂದಿ ಶಾಸ್ತ್ರ, ಹೋಳಿ, ಅರಿಶಿನ ಹಚ್ಚುವ ಶಾಸ್ತ್ರ, ಗೌರಿ ಪೂಜೆ ಹೀಗೆ ಹಲವು ಸಂಪ್ರದಾಯದೊಂದಿಗೆ ಮದುವೆ ನಡೆಯಿತು. ಪೋಲ್ಯಾಂಡ್, ಅಮೆರಿಕಾ, ಸ್ಪೇನ್, ಜರ್ಮನಿ, ನೆದರ್‌ಲ್ಯಾಂಡ್ ಮುಂತಾದ ದೇಶಗಳಿಂದ ಬಂದಿದ್ದ 40 ಜನರು ಈ ಆಚರಣೆಗಳನ್ನು ಬೆರಗು ಗಣ್ಣಿನಿಂದ ನೋಡುತ್ತಿದ್ದರು.
ವಿದೇಶದಲ್ಲಿ ಈ ಜೋಡಿಗಳ ನಡುವೆ ಪ್ರೀತಿ ಹುಟ್ಟಿದ್ದು, ಈ ಪ್ರೀತಿಗೆ ದೇಶ, ಭಾಷೆ, ಸಂಸ್ಕೃತಿ, ಜಾತಿ ಯಾವುದು ಅಡ್ಡಿಯಾಗಿಲ್ಲ ಎಂಬುದೇ ವಿಶೇಷ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ