ಚಿಕ್ಕಬಳ್ಳಾಪುರ:
ವಿಶ್ವವಿಖ್ಯಾತ ನಂದಿಗಿರಿಧಾಮ ಬೆಟ್ಟದ ಅನ್ ಲಾಕ್ ಆಗಲಿದ್ದು, ಇದೇ ಸೆಪ್ಟೆಂಬರ್ 7 ರಿಂದ ಪ್ರವಾಸಿಗರ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ.
ಕೊರೊನಾ ಭೀತಿ ಹಿನ್ನೆಲೆಯಲ್ಲಿ ನಂದಿಬೆಟ್ಟಕ್ಕೆ ಪ್ರವಾಸಿಗರ ಪ್ರವೇಶವನ್ನು ಚಿಕ್ಕಬಳ್ಳಾಪುರ ಜಿಲ್ಲಾಡಳಿತ ನಿರ್ಬಂಧಿಸಿತ್ತು. ಕೇಂದ್ರ ಹಾಗೂ ರಾಜ್ಯ ಸರ್ಕಾರ ಅನ್ ಲಾಕ್ 4.0 ಮಾರ್ಗಸೂಚಿ ಬಿಡುಗಡೆ ಮಾಡಿದ ನಂತರ ನಂದಿಬೆಟ್ಟಕ್ಕೆ ಹೇರಲಾಗಿದ್ದ ನಿರ್ಬಂಧವನ್ನು ತೆರವುಗೊಳಿಸಲಾಗಿದೆ.
ಇದೇ ಸೆ. 7ರಿಂದ ಪ್ರತಿದಿನ ಬೆಳಗ್ಗೆ 8ರಿಂದ ಸಂಜೆ 5 ಗಂಟೆಯವರೆಗೆ ಮಾತ್ರ ಪ್ರವಾಸಿಗರ ಪ್ರವೇಶಕ್ಕೆ ಅನುಮತಿ ನೀಡಿ ಸಮಯ ನಿಗದಿ ಮಾಡಿದೆ. ಸನ್ ರೈಸ್, ಜಾಲಿ ರೈಡ್, ಸನ್ ಸೆಟ್ ನೋಡಲು ಅವಕಾಶ ಇಲ್ಲದಿದ್ರೂ, ಪ್ರಕೃತಿ ಸೌಂದರ್ಯ ಸವಿಯಲು ಅವಕಾಶ ನೀಡಿದೆ.
ಮಾಸ್ಕ್ ಧರಿಸದಿದ್ದರೆ ದಂಡ :
ನಂದಿಬೆಟ್ಟಕ್ಕೆ ಬರುವ ಪ್ರವಾಸಿಗರಿಗೆ ಮಾಸ್ಕ್ ಕಡ್ಡಾಯ ಮಾಡಲಾಗಿದೆ. ಮಾಸ್ಕ್ ಧರಿಸಿದವರಿಗೆ ಮಾತ್ರ ನಂದಿಬೆಟ್ಟಕ್ಕೆ ಪ್ರವೇಶ ನೀಡಲಾಗುವುದು. ನಂದಿಬೆಟ್ಟದ ತಪ್ಪಲು ಚೆಕ್‍ಪೋಸ್ಟ್ ಬಳಿಯೇ ಮಾಸ್ಕ್ ಧರಿಸಿರುವ ಬಗ್ಗೆ ಸಂಪೂರ್ಣ ಪರಿಶೀಲನೆ ನಡೆಸಿ ನಂತರ ಪ್ರವಾಸಿಗರಿಗೆ ನಂದಿಗಿರಿಧಾಮಕ್ಕೆ ಪ್ರವೇಶ ನೀಡಲಾಗುವುದು. ಒಂದು ವೇಳೆ ಪ್ರವೇಶದ ವೇಳೆ ಮಾಸ್ಕ್ ಧರಿಸಿ ತದ ನಂತರ ಬೆಟ್ಟದ ಮೇಲೆ ಬಂದು ಮಾಸ್ಕ್ ಧರಿಸದೆ ಓಡಾಡಿ ನಿರ್ಲಕ್ಷ್ಯ ವಹಿಸಿದರೆ ದಂಡ ಖಚಿತ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
