ಬೆಂಗಳೂರು:
ರಸ್ತೆ ಸುರಕ್ಷತಾ ತೆರಿಗೆ ಸಂಗ್ರಹಿಸಲು ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿರುವುದರಿಂದ ಹೊಸ ವಾಹನ ಖರೀದಿಸುವವರು ಇನ್ನು ಮುಂದೆ ಹೆಚ್ಚಿನ ತೆರಿಗೆ ಪಾವತಿಸಬೇಕಾದ ಅಗತ್ಯವಿದೆ. ಅಧಿಸೂಚನೆಯಲ್ಲಿ ಹೊರಡಿಸಿದ ಪ್ರಕಾರ, ದ್ವಿಚಕ್ರ ಮತ್ತು ತ್ರಿಚಕ್ರ ವಾಹನ ಖರೀದಿಸುವವರಿಂದ ರಸ್ತೆ ಸುರಕ್ಷತೆ ಸುಂಕವಾಗಿ 500ರೂಪಾಯಿ ಮತ್ತು ಬೇರೆ ವಾಹನಗಳಿಗೆ 1000 ರೂಪಾಯಿ ತೆರಿಗೆ ವಿಧಿಸಲಾಗುತ್ತದೆ.
ತೆರಿಗೆಯಿಂದ ಸಂಗ್ರಹವಾದ ಹಣವನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಪ್ರಾಧಿಕಾರದ ಆಡಳಿತಾತ್ಮಕ ವೆಚ್ಚಕ್ಕಾಗಿ ಬಳಸಲಾಗುತ್ತದೆ. ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ ಕಾಯ್ದೆ 2017ರ ಪ್ರಕಾರ, ರಸ್ತೆ ಸುರಕ್ಷತೆ ಕಾರ್ಯಕ್ರಮವನ್ನು ನಡೆಸಲಾಗುತ್ತದೆ. ರಸ್ತೆ ಸುರಕ್ಷತೆ ಪ್ರಾಧಿಕಾರ ಮತ್ತು ರಸ್ತೆ ಸುರಕ್ಷತೆ ನಿಧಿ ವಸಾಹತುಗಳನ್ನು ರಚಿಸಲು ಈ ಕಾಯ್ದೆಯನ್ನು ಬಳಸಲಾಗುತ್ತದೆ.
ರಾಜ್ಯದಲ್ಲಿ ಪ್ರತಿನಿತ್ಯ ಸರಿಸುಮಾರು ಮೂರೂವರೆ ಸಾವಿರ ಹೊಸ ವಾಹನಗಳು ರಸ್ತೆಗಿಳಿಯುತ್ತವೆ, ಅವುಗಳಲ್ಲಿ ಸುಮಾರು 2 ಸಾವಿರ ವಾಹನಗಳು ಬೆಂಗಳೂರಿನಲ್ಲೇ ಇವೆ. ಹೊಸದಾಗಿ ನಮೂದನೆಯಾಗಿರುವ ವಾಹನಗಳಿಂದ ಸಂಗ್ರಹವಾಗುವ ತೆರಿಗೆ ಪ್ರತಿನಿತ್ಯ ಸುಮಾರು 15 ಲಕ್ಷವಿರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
