ಶಿರಾ : ವಾಹನ ಆಕ್ಸಿಡೆಂಟ್ ಮಾಡಿದ ಚಾಲಕನನ್ನು ಚಿತ್ರಹಿಂಸೆ ನೀಡಿ ಕೊಂದ ಮಾಲೀಕ!!

ತುಮಕೂರು:

      ತನ್ನ ಕಂಟೈನರ್ ವಾಹನವನ್ನು ಓಡಿಸುತ್ತಿದ್ದ ಚಾಲಕ ವಾಹನವನ್ನು ಆಕ್ಸಿಡೆಂಟ್ ಮಾಡಿದ ಕಾರಣಕ್ಕಾಗಿ ಚಿತ್ರಹಿಂಸೆ ನೀಡಿ ಕೊಲೆ ಮಾಡಿರುವ ಘಟನೆ ಶಿರಾ ತಾಲ್ಲೂಕಿನಲ್ಲಿ ವರದಿಯಾಗಿದೆ.

       ಮಾಲೀಕ ಇಬ್ಬರು ಚಾಲಕರಿಗೆ ಚಿತ್ರಹಿಂಸೆ ನೀಡಿ, ಓರ್ವನನ್ನು ಕೊಲೆಗೈದಿದ್ದಾನೆ. ಬೆಳಗಾವಿ ಜಿಲ್ಲೆ ಬೈಲಹೊಂಗಲದ ಬಸಪ್ಪ(38) ಚಿತ್ರಹಿಂಸೆಗೆ ಬಲಿಯಾದ ಚಾಲಕ. ಮತ್ತೊಬ್ಬ ಚಾಲಕ ಸೋಮಪ್ಪ(35) ಅಸ್ವಸ್ಥಗೊಂಡಿದ್ದಾನೆ. ಗಂಭೀರವಾಗಿ ಗಾಯಗೊಂಡು ಅಸ್ವಸ್ಥಗೊಂಡಿರುವ ಸೋಮಪ್ಪ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಮೂರು ದಿನಗಳ ಚಿತ್ರಹಿಂಸೆ: 

      ಡಿಸೆಂಬರ್ 11ರಂದು ಶಿರಾ ತಾಲೂಕಿನಲ್ಲಿ ಲಾರಿಯೊಂದಕ್ಕೆ ಡಿಕ್ಕಿ ಹೊಡೆದು ಜಖಂಗೊಂಡಿತ್ತು. ಈ ಕುರಿತು ಮಾಹಿತಿ ಪಡೆದ ಮಾಲೀಕ ಬಾಳಪ್ಪ ಘಟನಾ ಸ್ಥಳಕ್ಕೆ ಬಂದಿದ್ದ. ಈ ವೇಳೆ ಚಾಲಕರ ಮೇಲೆ ಕೋಪಗೊಂಡು ತನ್ನ ಸಹಚರರ ಜೊತೆಗೆ ಸೇರಿ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಬಳಿಕ ರಸ್ತೆ ಪಕ್ಕದಲ್ಲಿ ನಿಂತಿದ್ದ ಕಂಟೈನರ್ ನಲ್ಲಿ ಮೂರು ದಿನಗಳ ಕಾಲ ಅನ್ನ, ನೀರು ಕೊಡದೆ ಕೂಡಿ ಹಾಕಿದ್ದ. ಇಬ್ಬರನ್ನೂ ದೊಣ್ಣೆಯಿಂದ ಮನಬಂದಂತೆ ಥಳಿಸಿದ್ದ ಬಾಳಪ್ಪ, ಬಸಪ್ಪನನ್ನು ಕಾಲಿನಿಂದ ಒದ್ದು ಚಿತ್ರಹಿಂಸೆ ನೀಡಿ ಹತ್ಯೆ ಮಾಡಿದ್ದಾನೆ.

      ಕಂಟೈನರ್ ಲಾರಿ ಮಾಲೀಕ ಬಾಳಪ್ಪ ಹಾಗೂ ಆತನ ಸಹಚರರು ಸೇರಿ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಿ ಬಸಪ್ಪನ ಪತ್ನಿ ಮತ್ತು ಹಲ್ಲೆಗೆ ಒಳಗಾದ ಸೋಮಪ್ಪ ಶಿರಾ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link