ರಾಮನಗರ :
ಪಾದರಾಯನಪುರದಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದ 116 ಮಂದಿ ಆರೋಪಿಗಳನ್ನು ಬೆಂಗಳೂರಿನ ಹಜ್ ಭವನಕ್ಕೆ ಶಿಫ್ಟ್ ಮಾಡಲಾಗಿದೆ.
ಜಿಲ್ಲೆಯ ಜೈಲಿನಲ್ಲಿ ಇಟ್ಟ ರಾಜ್ಯ ಸರ್ಕಾರದ ಕ್ರಮವನ್ನು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಖಂಡಿಸಿದ್ದಲ್ಲದೇ, ರಾಮನಗರಕ್ಕೂ ಕೊರೋನಾ ಸೋಂಕು ತಂದಿಡುತ್ತಿರುವ ವಿರುದ್ಧ ಎಚ್ಚರಿಕೆ ನೀಡಿದ್ದರು. ಇದರ ಬೆನ್ನಲ್ಲೇ, ಪಾದರಾಯನಪುರದ 116 ಆರೋಪಿಗಳನ್ನು ಬೆಂಗಳೂರಿನ ಹಜ್ ಭವನಕ್ಕೆ ಶಿಫ್ಟ್ ಮಾಡಲಾಗಿದೆ.
ರಾಮನಗರದಿಂದ 7 ಬಸ್ ಗಳಲ್ಲಿ ಆರೋಪಿಗಳನ್ನು ಕರೆ ತರಲಾಗಿದ್ದು, ಇನ್ನುಳಿದ 7 ಬಸ್ ಗಳಲ್ಲಿ ಪೊಲೀಸರು ಹಾಗೂ ಆರೋಗ್ಯ ಇಲಾಖೆಗಳು ಅಧಿಕಾರಿಗಳು ಬಂದಿದ್ದಾರೆ. ಅಲ್ಲದೇ ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಆರೋಪಿಗಳನ್ನು ಸ್ಕ್ರೀನಿಂಗ್ ಪರೀಕ್ಷೆಗೆ ಒಳಪಡಿಸಲಾಗಿದೆ. ಕೊರೋನಾ ಸೋಂಕಿನ ಮುಂಜಾಗ್ರತ ಕ್ರಮವಾಗಿ ಈ ದುಷ್ಕರ್ಮಿಗಳು ಇಲ್ಲಿ ಕ್ವಾರಂಟೈನ್ ಅವಧಿಯನ್ನು ಕಳೆಯಲಿದ್ದಾರೆ.
ಇನ್ನು ವೀಸಾ ಅವಧಿ ಮುಗಿದ ನಂತರವೂ ಬೆಂಗಳೂರಿನ ಮಸೀದಿಯೊಂದರಲ್ಲಿ ಅಡಗಿ ಬಳಿಕ ಪೊಲೀಸರ ಕೈಗೆ ಸಿಕ್ಕಿ ಬಿದ್ದು ಹಜ್ ಭವನದಲ್ಲಿ ಕ್ವಾರಂಟೈನ್ ನಲ್ಲಿದ್ದ ವಿದೇಶಿ ಮೌಲ್ವಿಗಳನ್ನು ಹೊಟೇಲ್ ಗೆ ಶಿಫ್ಟ್ ಮಾಡಲಾಗಿದೆ. ಪ್ರವಾಸಿ ವೀಸಾದಡಿಯಲ್ಲಿ ಬಂದ ಇವರು ವೀಸಾ ನಿಯಮಕ್ಕೆ ವಿರುದ್ಧವಾಗಿ ಧರ್ಮ ಪ್ರಚಾರದಲ್ಲಿ ತೊಡಗಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
