ಸದ್ಯ ಕನ್ನಡ ಮಾತ್ರವಲ್ಲದೆ ಭಾರತ ಹಾಗೂ ಹೊರ ದೇಶಗಳಲ್ಲಿರೋ ಚಿತ್ರ ರಸಿಕರು ರಾಕಿಂಗ್ ಸ್ಟಾರ್ ಯಶ್ ಅವರ ಕೆಜಿಎಫ್ ಚಿತ್ರದ ಗುಂಗಲ್ಲಿ ತೇಲುತ್ತಿದ್ದಾರೆ. ಈ ಮಧ್ಯೆ ಕಿಚ್ಚ ಸುದೀಪ್ ಅವರ ಬಹು ನಿರೀಕ್ಷಿತ ಪೈಲ್ವಾನ್ ಚಿತ್ರದ ಲುಕ್ ಬಿಡುಗಡೆ ಮಾಡಲಾಗಿದ್ದು ಅಭಿಮಾನಿಗಳಿಗೆ ಈ ವಾರಾಂತ್ಯದಲ್ಲಿ ಡಬಲ್ ಧಮಾಕ ಸಿಕ್ಕಂತಾಗಿದೆ.
‘ಹೆಬ್ಬುಲಿ’ ಬಳಿಕ ನಿರ್ದೇಶಕ ಕೃಷ್ಣ ಮತ್ತು ಸುದೀಪ್ ಜತೆಯಾಗಿ ಮಾಡುತ್ತಿರುವ ಈ ಚಿತ್ರದ ಬಗ್ಗೆ ಅಭಿಮಾನಿಗಳ ವಲಯದಲ್ಲಿ ಈಗಾಗಲೇ ದೊಡ್ಡ ಮಟ್ಟದ ನಿರೀಕ್ಷೆ ಸೃಷ್ಟಿಯಾಗಿದೆ. ಪ್ರತಿ ಹಂತದಲ್ಲೂ ಆ ನಿರೀಕ್ಷೆಯನ್ನು ದುಪ್ಪಟ್ಟು ಮಾಡುವಲ್ಲಿ ಮಗ್ನವಾಗಿದೆ ಚಿತ್ರತಂಡ.
ರಾಮೊಜೀ ಫಿಲ್ಮ್ ಸಿಟಿಯಲ್ಲಿ ಬೃಹತ್ ಸೆಟ್ಗಳನ್ನು ನಿರ್ವಿುಸಿ, ಹಾಲಿವುಡ್ನಿಂದ ತಂತ್ರಜ್ಞರನ್ನು ಕರೆಸಿ, ದೊಡ್ಡ ಕ್ಯಾನ್ವಾಸ್ನಲ್ಲೇ ಸಿನಿಮಾ ಸಿದ್ಧಗೊಳ್ಳುತ್ತಿದೆ. ಹಾಗಾಗಿ ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು, ಮರಾಠಿ, ಭೋಜ್ಪುರಿ, ಬಂಗಾಳಿ ಮುಂತಾದ ಭಾಷೆಗಳಲ್ಲಿ ತೆರೆಕಾಣಿಸಲು ನಿರ್ಧರಿಸಲಾಗಿದೆ.
ಕೆಂಪು ಮಣ್ಣಿನ ಕುಸ್ತಿ ಅಖಾಡ, ಹುರಿ ಮೀಸೆ, ಕುರುಚಲು ಗಡ್ಡ, ಹಣೆಯಲ್ಲಿ ಕೇಸರಿ ತಿಲಕ, ಕಣ್ಣಿನಲ್ಲೇ ಎದುರಾಳಿಯನ್ನು ಹಿಮ್ಮೆಟ್ಟಿಸುವ ಕೆಚ್ಚು ಪ್ರದರ್ಶಿಸುತ್ತ ಸುದೀಪ್ ತೊಡೆ ತಟ್ಟಿರುವ ಈ ಪೋಟೋ ಕಂಡರೆ ‘ಪೈಲ್ವಾನ್’ ಬಗ್ಗೆ ಕುತೂಹಲ ಹೆಚ್ಚುವುದರಲ್ಲಿ ಸಂಶಯವೇ ಇಲ್ಲ.
ಪರಭಾಷೆಯಲ್ಲಿ ಸುದೀಪ್ಗೆ ಇರುವ ಅಭಿಮಾನಿ ಬಳಗ ಹಾಗೂ ಭಾರತದ ಹಲವೆಡೆ ಕುಸ್ತಿಗೆ ಇರುವ ಭಾರಿ ಜನಮನ್ನಣೆಯೇ ಚಿತ್ರವನ್ನು ಕರ್ನಾಟಕದ ಗಡಿ ಆಚೆಗೆ ಕೊಂಡೊಯ್ಯಲು ಬಹು ಮುಖ್ಯ ಕಾರಣವಾಗಿದೆ. ಉತ್ತರ ಭಾರತದಲ್ಲಿ ಇಂಥ ಕಥಾವಸ್ತು ಇರುವ ಚಿತ್ರವನ್ನು ಪ್ರೇಕ್ಷಕರು ಇಷ್ಟಪಡುತ್ತಾರೆ. ಹೀಗಾಗಿ ಈ ಚಿತ್ರ ಕೂಡ ಕನ್ನಡ ಸಿನಿಮಾದತ್ತ ದೇಶವೇ ತಿರುಗಿ ನೋಡುವಂತೆ ಮಾಡುವ ನಿರೀಕ್ಷೆ ಹೆಚ್ಚಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
