ಬೆಂಗಳೂರು:
ಐಟಿ ಅಧಿಕಾರಿಗಳು ಎಲ್ಲೆಡೆ ಪರಿಶೀಲನೆ ನಡೆಸಿದ್ದು, ಮಂಗಳವಾರ ವಿಚಾರಣೆಗೆ ಕರೆದಿದ್ದಾರೆ. ಅಂದು ಅವರ ಎಲ್ಲಾ ಪ್ರಶ್ನೆಗೂ ಸಮಂಜಸ ಉತ್ತರ ಹಾಗೂ ದಾಖಲೆ ಪತ್ರವನ್ನು ನೀಡಲಿದ್ದೇನೆ ಎಂದು ಮಾಜಿ ಉಪಮುಖ್ಯಮಂತ್ರಿ ಡಾllಜಿ.ಪರಮೇಶ್ವರ ಹೇಳಿದ್ದಾರೆ.
ಸದಾಶಿವನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲ ಮಾಧ್ಯಮದಲ್ಲಿ 3,500 ಕೋಟಿ ರು ಕಿಕ್ ಬ್ಯಾಕ್ ತೆಗೆದುಕೊಂಡಿದ್ದಾರೆ ಹಾಗೂ 400 ಕೋಟಿ ರು. ನಗದು ಸಿಕ್ಕಿದೆ ಎಂದು ಪ್ರಸಾರ ಮಾಡಿದ್ದಾರೆ. ಆದರೆ ಇದು ಸಂಪೂರ್ಣ ಆಧಾರ ರಹಿತವಾದದ್ದು. ಮಾಧ್ಯಮಗಳು ಸುದ್ದಿ ಒ್ರಸಾರ ಮಾಡುವ ಮೊದಲು ಸತ್ಯಾಸತ್ಯತೆಯನ್ನು ಅರಿತು ಮಾಡಲಿ ಎಂದರು.
ಐಟಿ ಅಧಿಕಾರಿಗಳು ಮನೆ ಸೇರಿದಂತೆ ಕಾಲೇಜಿನಲ್ಲಿ ಪರಿಶೀಲನೆ ನಡೆಸಿದ್ದಾರೆ. ಅದಕ್ಕೆ ಸೂಕ್ತ ದಾಖಲಾತಿಯನ್ನು ನೀಡಿದ್ದೇನೆ. ಬಳಿಕ ಕೆಲ ಪ್ರಶ್ನೆಗಳನ್ನು ಅಧಿಕಾರಿಗಳು ಕೇಳಿದ್ದಾರೆ. ಅಂತೆಯೇ ಸಮರ್ಪಕ ಉತ್ತರ ನೀಡಿದ್ದೇನೆ. ವೈದ್ಯಕೀಯ ಸೀಟು ಹಂಚಿಕೆ ನೀಟ್ ಮೂಲಕ ಆಗಲಿದೆ. ನಾನು 30 ವರ್ಷಗಳಿಂದ ಕಾಲೇಜು ಮಂಡಳಿಯಲ್ಲಿ ಸದಸ್ಯನಿದ್ದರೂ ಹೆಚ್ಚಾಗಿ ಕಾಲೇಜು ಕಾರ್ಯ ಚಟುವಟಿಕೆಯಲ್ಲಿ ಭಾಗಿಯಾಗುತ್ತಿರಲಿಲ್ಲ. ನನ್ನ ಸಹೋದರನ ನಿಧನದ ಬಳಿಕ ಜವಾಬ್ದಾರಿ ನನ್ನ ಮೇಲಿದೆ. ದಾಖಲಾತಿ ವಿಷಯದಲ್ಲಿ ನನಗೆ ಹೆಚ್ಚು ಮಾಹಿತಿ ಇರಲಿಲ್ಲ. ಸಹೋದರನ ಮಗ ಆನಂದ್ ಕೂಡ ಇರುತ್ತಿದ್ದರು. ದಾಖಲಾತಿ ವಿಷಯದಲ್ಲಿ ನೇರ ಹೊಣೆಗಾರಿಕೆ ಇರಲಿಲ್ಲ ಎಂದರು.
ಐಟಿ ಅಧಿಕಾರಿಗಳು ಸಂಪೂರ್ಣ ಪರಿಶೀಲನೆ ಪೂರ್ಣ ಪರಿಶೀಲನೆ ಮುಗಿಸಲಿ. ನಂತರ ನಮ್ಮ ಬಳಿ ಇರುವ ಎಲ್ಲಾ ದಾಖಲಾತಿ ನೀಡುತ್ತೇವೆ. ಐಟಿ ದಾಳಿ ವಿಷಯಕ್ಕೆ ರಾಜಕೀಯ ಲೇಪ ಬಳಿಯದೇ ಮೊದಲು ಅಧಿಕಾರಿಗಳಿಗೆ ಸಮಂಜಸ ಉತ್ತರ ನೀಡುತ್ತೇನೆ ಎಂದರು.
ಕೆಲ ವಿದ್ಯಾರ್ಥಿಗಳ ದೂರಿನ ಆಧಾರದ ಮೇಲೆ ಪರಿಶೀಲನೆ ನಡೆಸಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ನಾನು ಸಂಪೂರ್ಣ ರಾಜಕೀಯದಲ್ಲಿ ತೊಡಗಿದ್ದರಿಂದ ಕಾಲೇಜು ಮಂಡಳಿಗೆ ಹೆಚ್ಚು ಗಮನ ನೀಡಿರಲಿಲ್ಲ. ಮಂಗಳವಾರ ವಿಚಾರಣೆಗೆ ಕರೆದಿದ್ದಾರೆ ಅಂದು ಉತ್ತರಿಸುವೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
