ಕೆ.ಆರ್.ಮಾರ್ಕೆಟ್ ಅವ್ಯವಸ್ಥೆ : ಅಧಿಕಾರಿಗಳ ವಿರುದ್ಧ ಡಿಸಿಎಂ ಆಕ್ರೋಶ

ಬೆಂಗಳೂರು:  

      ನಗರಾಭಿವೃದ್ಧಿ ಸಚಿವ ಡಾ: ಜಿ. ಪರಮೇಶ್ವರ್, ಕೆ.ಆರ್.ಮಾರುಕಟ್ಟೆ ಕಸದ ರಾಶಿ, ಕೊಳಚೆಯನ್ನು ಕಂಡು ಕೆಂಡಾಮಂಡಲರಾಗಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. 

      ಇಂದು (ಗುರುವಾರ) ಮುಂಜಾನೆ ಮಾರುಕಟ್ಟೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು ಮಾರುಕಟ್ಟೆ ಸಂಪೂರ್ಣ ಅವ್ಯವಸ್ಥೆಯಿಂದ ಕೂಡಿದೆ. ಈ ಅವ್ಯವಸ್ಥೆಗಳಿಗೆಲ್ಲಾ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ. ನಾನೇ ಖುದ್ದು ಪರಿಶೀಲನೆ ನಡೆಸಿದ ಸಂದರ್ಭದಲ್ಲೂ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ ಎಂದು ಡಿಸಿಎಂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಮಾನತಿಗೆ ಆದೇಶ:

      ಮಾರುಕಟ್ಟೆಯ ಹೊಸ ಕಟ್ಟಡದ ಸಾಲು ಅಂಗಡಿಗಳು ಯಾವ ಇಲಾಖೆ ವ್ಯಾಪ್ತಿಗೆ ಸೇರಲಿದೆ ಎಂದು ಪರಮೇಶ್ವರ್ ಅವರು ಮಾರುಕಟ್ಟೆ ವಿಭಾಗದ ಉಪಾಯುಕ್ತರಾದ ಮುನಿಲಕ್ಷ್ಮಿ ಅವರನ್ನು ಪ್ರಶ್ನಿಸಿದರು. ಆದರೆ, ಮಾಹಿತಿ ನೀಡಲು ತಬ್ಬಿಬ್ಬಾದ ಮುನಿಲಕ್ಷ್ಮಿ ಅವರ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದ ಪರಮೇಶ್ವರ್ ಅವರು ಮಾರುಕಟ್ಟೆಯಲ್ಲಿರುವ ಅಂಗಡಿಗಳ ಬಗ್ಗೆ ನಿಮಗೆ ಮಾಹಿತಿ ಇಲ್ಲ ಅಂದರೆ ನೀವು ಈ ಸ್ಥಾನದಲ್ಲಿ ಏಕಿರಬೇಕು? ಕೂಡಲೇ ಇವರನ್ನು ಅಮಾನತುಗೊಳಿಸಿ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರಿಗೆ ಸೂಚಿಸಿದರು.

ಮೀಟರ್ ಬಡ್ಡಿಗೆ ಕಡಿವಾಣ:

      ಮಾರುಕಟ್ಟೆಯಲ್ಲಿ ಮೀಟರ್ ಬಡ್ಡಿದಂಧೆ ಅವ್ಯಾಹತವಾಗಿ ನಡೆದುಕೊಂಡು ಬರುತ್ತಿದೆ ಎಂಬ ಬಗ್ಗೆ ನನಗೆ ಸಂಪೂರ್ಣ ಮಾಹಿತಿ ಇದೆ. ಇನ್ನು ಕೆಲವೇ ದಿನಗಳಲ್ಲಿ ಮೀಟರ್ ಬಡ್ಡಿ ದಂಧೆಗೆ ಕಡಿವಾಣ ಹಾಕುವಂತೆ ಪೊಲೀಸ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದೇನೆ ಎಂದು ಡಿಸಿಎಂ ಹೇಳಿದರು. ಮಾರುಕಟ್ಟೆಯ ನೆಲಮಹಡಿಯಲ್ಲಿರುವ ಪಾರ್ಕಿಂಗ್ ಸ್ಥಳದಲ್ಲಿ ಸಾಕಷ್ಟು ಹಳೆ ವಾಹನಗಳಿವೆ. ಮಾಲೀಕರಿಲ್ಲದ ವಾಹನಗಳನ್ನು ಕೂಡಲೇ ವಶಪಡಿಸಿಕೊಂಡು ಹರಾಜು ಹಾಕುವಂತೆಯೂ ಪೊಲೀಸ್ ಆಯುಕ್ತರಿಗೆ ಡಿಸಿಎಂ ಸೂಚಿಸಿದರು.

      ನಂತರ ಮೀನು ಮಾರುಕಟ್ಟೆಗೆ ತೆರಳಿದ ಪರಮೇಶ್ವರ್ ಅವರು ಇಲ್ಲಿನ ಅವ್ಯವಸ್ಥೆ ಮತ್ತು ದುರ್ವಾಸನೆ ಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಈ ಕೂಡಲೇ ಇಲ್ಲಿರುವ ಕಸವನ್ನು ತೆರವುಗೊಳಿಸಿ ಶುಚಿತ್ವ ಕಾಪಾಡಿಕೊಳ್ಳುವಂತೆ ಸಲಹೆ ನೀಡಿದರು.

ಮತ್ತೆ 2 ಹೊಸ ಮಾರ್ಕೆಟ್ :

      ಜನ ಕೆ.ಆರ್‌.ಮಾರುಕಟ್ಟೆಯನ್ನೇ ನೆಚ್ಚಿಕೊಳ್ಳಬೇಕಾದ ಸ್ಥಿತಿ ಇದೆ. ಇಲ್ಲಿ ಒತ್ತಡ ಕಡಿಮೆ ಮಾಡಲು ಕೆಆರ್ ಮಾರುಕಟ್ಟೆ ಮಾದರಿಯಲ್ಲೇ ಇನ್ನೂ ಎರಡು ಕಡೆ ದೊಡ್ಡ ಮಾರುಕಟ್ಟೆಯನ್ನು ತೆರೆಯಲು ಬಿಬಿಎಂಪಿ ಚಿಂತನೆ ನಡೆಸಿದೆ ಎಂದು ತಿಳಿಸಿದರು. 

      ಮೇಯರ್ ಗಂಗಾಂಬಿಕೆ, ಉಪಾಯುಕ್ತರಾದ ರಮೀಳಾ ಉಮಾಶಂಕರ್‌, ಪಾಲಿಕೆ ಆಡಳಿತ ಪಕ್ಷದ ನಾಐಕ ಎಂ.ಶಿವರಾಜ್‌, ನಗರದ ಪೊಲೀಸ್ ಕಮಿಷನರ್‌ ಟಿ.ಸುನೀಲ್ ಕುಮಾರ್ ಜೊತೆಯಲ್ಲಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link