ನವಿಲನ್ನು ಭಕ್ಷಿಸಲು ಬಂದ ನಾಯಿಗಳು : ಪ್ರಾಣಿಪ್ರಿಯರಿಂದ ತಪ್ಪಿದ ಅಪಾಯ!!

  ಚಳ್ಳಕೆರೆ:

      ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದ ದಲ್ಲಾಲಿ ಮಂಡಿ ಆವರಣಕ್ಕೆ ಸೋಮವಾರ ಬೆಳಗ್ಗೆ ಕಾಳುತಿನ್ನಲು ನವಿಲೊಂದು ಆಕಸ್ಮಿಕವಾಗಿ ಆಗಮಿಸಿದ್ದು, ಅಲ್ಲೇ ಇದ್ದ ಎರಡು ನಾಯಿಗಳು ನವಿಲನ್ನು ಕಚ್ಚಿ ಸಾಯಿಸಲು ರೆಕ್ಕೆಗೆ ಬಾಯಿಹಾಕಿದ ಸಂದರ್ಭದಲ್ಲಿ ವರ್ತಕ ಕೋಟ್ರೇಶ್ ಮತ್ತು ಸಂಗಡಿಗರು ನಾಯಿಯನ್ನು ಬೆದರಿಸಿ ನಾಯಿ ಬಾಯಿಯಿಂದ ಸಾಯುವ ಸ್ಥಿತಿಯಲ್ಲಿದ್ದ ನವಿಲನ್ನು ರಕ್ಷಿಸಿದ್ದಾರೆ.

      ನಾಯಿಗಳ ಹಠಾತ್ ದಾಳಿಯಿಂದ ಕಂಗೆಟ್ಟ ನವಿಲು ಜೀವ ಭಯದಿಂದ ನಡುತ್ತಿದ್ದು, ಹಾರಲು ಶಕ್ತಿ ಇಲ್ಲದಂತಾಗಿತ್ತು. ನವಿಲಿನ ಬಲಭಾಗದ ರೆಕ್ಕೆ ನಾಯಿ ದಾಳಿಯಿಂದ ರಕ್ತಸಿಕ್ತವಾಗಿದ್ದು, ನವಿಲನ್ನು ಜೋಪಾನವಾಗಿ ರೂಂನಲ್ಲಿ ಕೂಡಿಟ್ಟು ಸ್ವಲ್ಪ ಸಮಯದ ನಂತರ ಅದಕ್ಕೆ ಆಹಾರ ಮತ್ತು ನೀರನ್ನು ನೀಡಲಾಯಿತು. ಕೆಲವು ಗಂಟೆಗಳ ನಂತರ ಸುಧಾರಿಸಿಕೊಂಡ ನವಿಲು ಸುತ್ತಲು ನೋಡಿ ನನಗೆ ಪ್ರಾಣಾಪಾಯವಿಲ್ಲವೆಂದು ಖಾತರಿಯಾದ ಕೂಡಲೇ ಹಾರುವ ಪ್ರಯತ್ನ ಮಾಡಿತು. ಆದರೆ, ರೆಕ್ಕೆಯಲ್ಲಿ ಶಕ್ತಿ ಕಡಿಮೆಯಾಗಿದ್ದು, ನವಿಲು ಮೇಲಕ್ಕೆ ಹಾರಲು ನಿಶಕ್ತವಾಗಿತ್ತು. ಕೋಟ್ರೇಶ್ ಮತ್ತು ಸಂಗಡಿಗರು ನವಿಲನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದು ಅದನ್ನು ಮತ್ತಷ್ಟು ಸುರಕ್ಷಿತಾಗಿಡುವ ದೃಷ್ಠಿಯಿಂದ ವಾರ್ಡ್‍ನ ಸದಸ್ಯ ಹೊಯ್ಸಳ ಗೋವಿಂದರವರನ್ನು ಸಂಪರ್ಕಿಸಿದರು.

      ಕೂಡಲೇ ನಗರಸಭಾ ಸದಸ್ಯ ಹೊಯ್ಸಳ ಗೋವಿಂದ ಗಾಯಗೊಂಡ ನವಿಲನ್ನು ಇಲ್ಲಿನ ಅರಣ್ಯ ಇಲಾಖೆಗೆ ತೆಗೆದುಕೊಂಡು ಹೋಗಿ ಅಧಿಕಾರಿಗಳಿಗೆ ನವಿಲನ್ನು ಹಸ್ತಾಂತರಿಸಿ ವಾಸ್ತವ ಸ್ಥಿತಿಯನ್ನು ತಿಳಿಸಿದರು. ಕೂಡಲೇ ಕಾಯೋನ್ಮುಖರಾದ ಇಲಾಖೆ ಅಧಿಕಾರಿಗಳು ಇಲ್ಲಿನ ಪಶುವೈದ್ಯ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದರು . ವೈದ್ಯರು ನವಿಲಿನ ಆರೋಗ್ಯವನ್ನು ಪರಿಶೀಲಿಸಿ, ಹರಿದಿದ್ದ ರಕ್ಕೆಯನ್ನು ಕೂಡಿಸಿ ಹೊಲಿಗೆ ಹಾಕಿದರು. ನಂತರ ನವಿಲಿನ ನಿತ್ರಾಣವನ್ನು ಕಂಡು ಅದರ ಚೇತರಿಕೆಗೆ ಅವಶ್ಯವಿರುವ ಔಷಧವನ್ನು ನೀಡಿದ ನಂತರ ನವಿಲು ಸಂತೋಷದಿಂದ ಓಡಾಟ ತೊಡಗಿತು.

      ಈ ಬಗ್ಗೆ ಪ್ರತಿಕ್ರಿಯಿಸಿದ ವಲಯ ಅರಣ್ಯ ಅಧಿಕಾರಿ ಎಸ್.ಸುರೇಶ್, ನವಿಲಿನ ಜೀವವನ್ನು ರಕ್ಷಿಸಿ ಅದನ್ನು ನಮಗೆ ನೀಡಿದ ಎಲ್ಲಾ ನಾಗರೀಕರಿಗೆ ಅಭಿನಂದನೆಯನ್ನು ಸಲ್ಲಿಸಿ ಯಾರೇಯಾಗಲಿ ಇಂತಹ ಪ್ರಾಣಿಗಳು ಸಿಕ್ಕಲ್ಲಿ ನಮ್ಮ ಗಮನಕ್ಕೆ ತಂದಲ್ಲಿ ಅವುಗಳನ್ನು ರಕ್ಷಿಸಿ ಮತ್ತೆ ಅವನ್ನು ಕಾಡಿನೊಳಗೆ ಬಿಡಲಾಗುವುದು. ಯಾವುದೇ ಕಾರಣಕ್ಕೂ ನವಿಲು ಸೇರಿದಂತೆ ಯಾವುದೇ ಪ್ರಾಣಿಗಳು ಸಿಕ್ಕರೂ ಅವುಗಳನ್ನು ನೀಡಿದಲ್ಲಿ ಉತ್ತಮ ಚಿಕಿತ್ಸೆ ನೀಡಿ ಅವುಗಳ ಪ್ರಾಣ ರಕ್ಷಣೆಗೆ ಅರಣ್ಯ ಇಲಾಖೆ ಮುಂದಾಗಿದ್ದು, ನವಿಲನ್ನು ಇಲಾಖೆಯ ನೀಡಿ ಅದರ ಆರೋಗ್ಯ ಸುಧಾರಣೆಗೆ ಕಾರಣಕರ್ತರಾದ ನಗರಸಭಾ ಸದಸ್ಯ ಹೊಯ್ಸಳ ಗೋವಿಂದ, ವರ್ತಕ ಕೋಟ್ರೇಶ್, ಮಿತ್ರರಾದ ರಘು, ತಿರುಮಲೇಶ್, ಯೋಗೇಶ್ ಇವರನ್ನು ಅಭಿನಂದಿಸುವುದಾಗಿ ಅವರು ತಿಳಿಸಿದರು.

      ಒಟ್ಟಿನಲ್ಲಿ ಆಹಾರ ಅರಸಿ ಬಂದ ನವಿಲು ನಾಯಿ ದಾಳಿಗೆ ಸಿಕ್ಕಿ ಸಾವನಪ್ಪುವ ಸ್ಥಿತಿ ತಲುಪಿದ್ದು, ನವಿಲನ್ನು ಸಾಯಲು ಬಿಡದೆ ನವಿಲು ರಕ್ಷಣೆ ಮಾಡುವ ಮೂಲಕ ಪ್ರಾಣಿಗಳ ಮೇಲೆ ಸಹ ನಾವು ವಿಶೇಷ ಗಮನ ನೀಡಬೇಕೆಂಬ ಸದುದ್ದೇಶದಿಂದ ಕಾರ್ಯನಿರ್ವಹಿಸಿದ ಕೋಟ್ರೇಶ್ ಮತ್ತು ಸ್ನೇಹಿತರು ಅಭಿನಂದನಾರ್ಹರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap