ಬೆಂಗಳೂರು:
ಕೆಪಿಎಸ್ಸಿ ಪರೀಕ್ಷಾ ವಿಧಾನದಲ್ಲಿ ಬದಲಾವಣೆ ತರಲು ಚಿಂತನೆ ನಡೆಸಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಪ್ರಶ್ನೋತ್ತರ ಕಲಾಪದಲ್ಲಿ ಪ್ರದೀಪ್ ಶೆಟ್ಟರ್ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವರು, ಇತ್ತೀಚೆಗೆ ಕೆಪಿಎಸ್ಸಿ ಬಹಳಷ್ಟು ಚರ್ಚೆಯಲ್ಲಿದೆ. ಯಾವುದೇ ಪರೀಕ್ಷೆ ನಡೆದರೂ ಅವ್ಯವಹಾರದ ಆರೋಪ ಬರುತ್ತಿದೆ. ನಿಜವಾಗಿಯೂ ಅರ್ಹತೆ ಇರುವ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಈ ಬಾರಿ ಪ್ರಶ್ನೆ ಪತ್ರಿಕೆ ಸೋರಿಕೆ ಕೆಪಿಎಸ್ಸಿ ಸಿಬ್ಬಂದಿಯಿಂದಲೇ ಆಗಿದೆ. ಸುರಕ್ಷತೆಯಿಂದ ಇರಿಸಿಕೊಳ್ಳಬೇಕಾದವರೇ ಲೀಕ್ ಮಾಡಿದ್ದಾರೆ. ಈ ಕುರಿತು ಸದ್ಯಕ್ಕೆ ತನಿಖೆ ನಡೆಯುತ್ತಿದೆ. ನಂತರ ಸತ್ಯ ಹೊರಬರಲಿದೆ ಎಂದರು.
ಪರೀಕ್ಷಾ ವಿಧಾನದಲ್ಲಿ ಬದಲಾವಣೆ ತರುವ ಚಿಂತನೆ ಅಗತ್ಯವಿದೆ. ಆನ್ಲೈನ್ ನಲ್ಲಿ ಸಣ್ಣ ಪರೀಕ್ಷೆ ಮಾಡಿ ನಂತರ ಮುಖ್ಯ ಪರೀಕ್ಷೆ ಮಾಡಬೇಕು ಎನ್ನುವುದು ಒಂದು, ಮತ್ತೊಂದು ಅಂಕಗಳ ಆಧಾರದಲ್ಲಿ ನೇಮಕ ಮಾಡುವುದು. ಈ ಎರಡೂ ವಿಚಾರದಲ್ಲಿ ಚಿಂತನೆ ನಡೆದಿದೆ. ಓರಲ್ ಮಾರ್ಕ್ಸ್ ಕಡಿಮೆ ಇರಬೇಕು ಎನ್ನುವ ಬೇಡಿಕೆ ಸಹ ಇದೆ. ಪರೀಕ್ಷಾ ವಿಧಾನದಲ್ಲಿ ಬದಲಾವಣೆ ತರಲು ಚಿಂತನೆ ಮಾಡಲಾಗುತ್ತಿದೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
