ತುಮಕೂರು :
ಜಿಲ್ಲೆಯ ವಿವಿಧೆಡೆ ಇನ್ನು 10 ಮಂದಿ ವಿದೇಶಿ ಹಾಗೂ ಹೊರ ರಾಜ್ಯಗಳ ತಬ್ಲಿಘಿಗಳು ತಂಗಿರುವ ಶಂಕೆ ವ್ಯಕ್ತವಾಗಿದ್ದು, ಅವರ ಕುರಿತಂತೆ ಮಾಹಿತಿ ನೀಡುವಂತೆ ಡಿಸಿ ಡಾ.ರಾಕೇಶ್ ಕುಮಾರ್ ಮನವಿ ಮಾಡಿದ್ದಾರೆ.
3 ಕೊರೋನಾ ಪಾಸಿಟಿವ್ ಪ್ರಕರಣ ಕಂಡು ಬಂದಿದ್ದ ತುಮಕೂರಿನಲ್ಲಿ ತಬ್ಲಿಘಿ ಸದಸ್ಯರು ಮತ್ತೆ ಆತಂಕ ಸೃಷ್ಟಿಸಿದ್ದು, ತುಮಕೂರಿನ ಮಸೀದಿಗಳಲ್ಲಿ ಜಮಾತ್ ಸದಸ್ಯರು ತಂಗಿದ್ದಾರೆ. ನಿಜಾಮುದ್ದೀನ್ ಗೆ ಹೋಗಿ ಬಂದಿದ್ದ 37 ಮಂದಿ ನಂತರ ವಿವಿಧೆಡೆಯಿಂದ ಬಂದಿರುವ ಜಮಾತ್ ಸದಸ್ಯರು ತುಮಕೂರಿನ ಮಸೀದಿಗಳಲ್ಲಿ ತಂಗಿದ್ದಾರೆ ಎನ್ನಲಾಗಿದೆ.
ಜಮಾತ್ ಸದಸ್ಯರು ಮಸೀದಿಗಳಲ್ಲಿ ತಂಗಿರುವ ಬಗ್ಗೆ ಮಾಹಿತಿ ನೀಡುವಂತೆ ತುಮಕೂರು ಜಿಲ್ಲಾಧಿಕಾರಿ ಡಾ. ರಾಕೇಶ್ ಕುಮಾರ್ ಮನವಿ ಮಾಡಿದ್ದು, ಕೋವಿಡ್ 19 ರೋಗ ಹರಡದಂತೆ ಸರ್ಕಾರದೊಂದಿಗೆ ಎಲ್ಲರೂ ಕೈಜೋಡಿಸಬೇಕು. ತಪ್ಪಿದಲ್ಲಿ ಮುಂದಿನ ಆಗು – ಹೋಗುಗಳಿಗೆ ಸಂಬಂಧಪಟ್ಟ ಮಸೀದಿಯ ಅಧ್ಯಕ್ಷರು ಮತ್ತು ಕಾರ್ಯದರ್ಶಿಯವರನ್ನು ನೇರ ಹೊಣೆಗಾರರನ್ನಾಗಿ ಪರಿಗಣಿಸಲಾಗುವುದು. ವಿಪತ್ತು ನಿರ್ವಹಣಾ ಕಾಯ್ದೆಯಡಿಯಲ್ಲಿ ವರದಿ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ತಿಳಿಸಿದ್ದಾರೆ.
ವಿದೇಶ, ಹೊರ ರಾಜ್ಯದಿಂದ ಬಂದವರ ಮಾಹಿತಿ ನೀಡುವಂತೆ ತಿಳಿಸಿದ್ದಾರೆ. ತುಮಕೂರಿನ ಜಿಲ್ಲೆಯ ಮಸೀದಿಗಳಲ್ಲಿ 10 ಮಂದಿ ಸದಸ್ಯರು ಇರುವ ಶಂಕೆ ವ್ಯಕ್ತವಾಗಿದ್ದು ಮಾಹಿತಿ ನೀಡುವಂತೆ ಜಿಲ್ಲಾ ವಕ್ಫ್ ಮಂಡಳಿ ಅಧ್ಯಕ್ಷರು ಕೂಡ ಮನವಿ ಮಾಡಿದ್ದಾರೆ. ಮಸೀದಿಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳಿಗೆ ಮನವಿ ಮಾಡಲಾಗಿದೆ.
ಈ ಹಿಂದೆ ದೆಹಲಿಯ ಜಮಾತ್ ಸಭೆಗೆ ಹೋಗಿ ವಾಪಾಸ್ ಬಂದಿದ್ದ ತುಮಕೂರು ಜಿಲ್ಲೆಯ ಶಿರಾ ಮೂಲದ ವೃದ್ಧನಲ್ಲಿ ಮೊದಲಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಆತ ಸೋಂಕಿನಿಂದ ಮೃತಪಟ್ಟಿದ್ದ. ಇದರ ಬೆನ್ನಲ್ಲೇ ಜಿಲ್ಲೆಯಾದ್ಯಂತ ತಬ್ಲಿಘಿ ಸದಸ್ಯರಿಂದ ಆತಂಕ ಎದುರಾಗಿತ್ತು. ಆದರೆ, ಕೆಲ ದಿನಗಳಲ್ಲೇ ಸೋಂಕು ಪೀಡಿತರ ಸಂಖ್ಯೆ ಜಿಲ್ಲೆಯಲ್ಲಿ ಕಡಿಮೆಯಾಗಿ, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಕೊರೊನಾ ಆತಂಕ ಕೊಂಚ ಇಳಿಮುಖವಾಗಿತ್ತು. ಆದರೆ, ಈಗ ಜಿಲ್ಲೆಯಲ್ಲಿ ಮತ್ತೆ ತಬ್ಲಿಘಿ ಸದಸ್ಯರ ಭೀತಿ ಎದುರಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
