ಬೆಂಗಳೂರು:
ತೀವ್ರ ಅನಾರೋಗ್ಯದಿಂದ ನಿಧನರಾದ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಹೆಚ್.ಎನ್. ಅನಂತಕುಮಾರ್ ಅವರ (59ವರ್ಷ) ಅಂತಿಮ ದರ್ಶನಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸಂಜೆ ಬೆಂಗಳೂರಿಗೆ ಆಗಮಿಸಲಿದ್ದಾರೆ.
ಇಂದು ರಾತ್ರಿ 7.15 ರ ಸುಮಾರಿಗೆ ಬೆಂಗಳೂರಿಗೆ ಆಗಮಿಸಿ ಅಂತಿಮ ದರ್ಶನ ಪಡೆಯುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ನಂತರ ರಾತ್ರಿಯೇ 8:45 ರ ವೇಳೆಗೆ ದೆಹಲಿಗೆ ವಾಪಸಾಗಲಿದ್ದಾರಂತೆ. ನಾಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಕೂಡಾ ಬೆಂಗಳೂರಿಗೆ ಆಗಮಿಸಿ ಅನಂತ ಕುಮಾರ್ ಅಂತಿಮ ದರ್ಶನ ಪಡೆಯಲಿದ್ದಾರೆ.
ಅನಂತಕುಮಾರ್ ಅವರ ಪಾರ್ಥಿವ ಶರೀರವನ್ನು ಮಂಗಳವಾರ ಬೆಳಗ್ಗೆ ಮಲ್ಲೇಶ್ವರದಲ್ಲಿರುವ ಬಿಜೆಪಿ ಪ್ರಧಾನ ಕಚೇರಿಗೆ ತರಲಾಗುತ್ತಿದ್ದು, ಅಲ್ಲಿ ಬೆಳಗ್ಗೆ 8ರಿಂದ ಸಾರ್ವಜನಿಕ ದರ್ಶನಕ್ಕೆ ಇಡಲಾಗುತ್ತದೆ. ಬಳಿಕ ಬೆಳಗ್ಗೆ 10 ಗಂಟೆಗೆ ನ್ಯಾಷನಲ್ ಕಾಲೇಜು ಮೈದಾನಕ್ಕೆ ಒಯ್ದು ಅಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ಬಿಜೆಪಿ ಪ್ರಕಟಣೆ ತಿಳಿಸಿದೆ.
ನಾಳೆ ಚಾಮರಾಜಪೇಟೆಯ ಹಿಂದೂರುದ್ರಭೂಮಿಯಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಅನಂತಕುಮಾರ್ ಅವರ ಅಂತ್ಯ ಸಂಸ್ಕಾರ ನೆರವೇರಲಿದೆ ಎಂದು ವರದಿ ಹೇಳಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ