ಬೆಂಗಳೂರು:
ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದ 233 ಕೆಜಿ ಗಾಂಜಾವನ್ನು ಕೇಂದ್ರ ಮಾದಕದ್ರವ್ಯ ನಿಯಂತ್ರಣ ದಳ ಅಧಿಕಾರಿಗಳು ಜಪ್ತಿ ಮಾಡಿ ಮೂವರನ್ನು ವಶಕ್ಕೆ ಪಡೆದಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳಾದ ಅನುಮೂಲ್ ಪ್ರಸಾದ್, ಎಸ್.ರಾಮಕೃಷ್ಣ ಹಾಗೂ ಕೆ.ರಾಜೇಶ್ ಎಂಬವರನ್ನು ಬಂಧಿಸಲಾಗಿದೆ. ಇವರಿಂದ 223.84 ಕೆ.ಜಿ. ಗಾಂಜಾ, ಸಾಗಾಟಕ್ಕೆ ಬಳಸಿದ ಆಂಧ್ರ ಪ್ರದೇಶ ನೋಂದಣಿಯ ಡಿಝೈರ್ ಕಾರು ಹಾಗೂ ಆರು ಮೊಬೈಲ್ ಫೋನ್‌ಗಳನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ತಂಡ ವಶಪಡಿಸಿಕೊಂಡಿದೆ.
ದೇವನಹಳ್ಳಿ ಟೋಲ್ ಬಳಿ ಕಾರು ಬರುತ್ತಿರುವ ಖಚಿತ ಮಾಹಿತಿಯ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ. ಆರೋಪಿಗಳು ಗಾಂಜಾವನ್ನು ಆಂಧ್ರ ಪ್ರದೇಶದ ವಿಶಾಖಪಟ್ಟಣಂನಿಂದ ಬೆಂಗಳೂರು ಮೂಲಕ ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದರೆನ್ನಲಾಗಿದೆ.
ಈ ಹಿಂದೆ ಇವರು ತೆಲಂಗಾಣದ ಮೂಲಕ ಮಹಾರಾಷ್ಟ್ರಕ್ಕೆ ಸಾಗಾಟ ಮಾಡುತ್ತಿದ್ದರು. ಆದರೆ ಚುನಾವಣೆಯ ಹಿನ್ನೆಲೆಯಲ್ಲಿ ತೆಲಂಗಾಣದೆಲ್ಲೆಡೆ ಬಿಗಿ ಭದ್ರತೆ ಕಲ್ಪಿಸಿರುವುದರಿಂದ ಆರೋಪಿಗಳು ಬೆಂಗಳೂರು ಮೂಲಕ ಮಹಾರಾಷ್ಟ್ರ ತಲುಪುವ ಯೋಜನೆ ರೂಪಿಸಿದ್ದರು. ಅದರಂತೆ ಆರೋಪಿಗಳು ಡಿಸೈರ್ ಕಾರಿನ ಢಿಕ್ಕಿಯಲ್ಲಿ 110 ಪ್ಯಾಕೇಟ್‌ಗಳಲ್ಲಿ 223.84 ಕೆ.ಜಿ. ಗಾಂಜಾವನ್ನಿಟ್ಟು ಸಾಗಾಟ ಮಾಡುವ ಯತ್ನದಲ್ಲಿ ಸಿಕ್ಕಿಬಿದ್ದಿದ್ದಾರೆ. ದೇವನಹಳ್ಳಿಯ ಟೋಲ್‌ಗೇಟ್ ಬಳಿ ತಪಾಸಣೆಗೊಳಪಡಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ನಾಕೋಟಿಕ್ಸ್ ಕಂಟ್ರೋಲ್ ಬ್ಯುರೋ ತಿಳಿಸಿದೆ.
ಬಂಧಿತರು ಆಂಧ್ರ ಪ್ರದೇಶ, ತೆಲಂಗಾಣ, ಕರ್ನಾಟಕ, ಮಹಾರಾಷ್ಟ್ರ ಹಾಗೂ ತಮಿಳುನಾಡುವರೆಗೆ ತಮ್ಮ ಜಾಲವನ್ನು ಹೊಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ