ಸರ್ಕಾರವನ್ನು ಅಸ್ಥಿರಗೊಳಿಸಲು ನಾಟಕಗಳು ನಡೆಯುತ್ತಿವೆ: ಪರಮೇಶ್ವರ್

ಬೆಂಗಳೂರು:

      ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಸಾಮಾಜಿಕ, ಪೌರಾಣಿಕ ನಾಟಕಗಳು ನಡೆಯುತ್ತಿದ್ದು, ಈ ಬಗ್ಗೆ ಯಾರು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಉಪಮುಖ್ಯಮಂತ್ರಿ ಡಾ: ಜಿ. ಪರಮೇಶ್ವರ್ ಇಂದಿಲ್ಲಿ ಹೇಳಿದ್ದಾರೆ.

     ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ವಾರ್ಡ್ 104ರಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಸಮಾರಂಭ ನೆರವೇರಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಭದ್ರವಾಗಿದೆ. ಸರಕಾರ ಉರುಳಲಿದೆ ಎಂದು ಕೆಲವರಿಂದ ನಾಟಕ ನಡೆಯುತ್ತಿದೆ. ಈ ಬಗ್ಗೆ ಜನ ಸಾಮಾನ್ಯರು ವಿಚಲಿತರಾಗಬೇಕಿಲ್ಲ ಎಂದರು.

     ಯಾರು ಆಡಳಿತ ನಡೆಸುತ್ತಾರೆ ಎನ್ನುವುದಕ್ಕಿಂತ ಸಾರ್ವಜನಿಕ ಕೆಲಸಗಳು ಎಷ್ಟು ವೇಗವಾಗಿ ನಡೆಯುತ್ತದೆ ಎನ್ನುವುದು ಮುಖ್ಯವಾಗುತ್ತದೆ. ಹೀಗಾಗಿ ಸರ್ಕಾರದ ಅಸ್ಥಿತ್ವಕ್ಕೆ ಯಾವುದೇ ಬಾಧಕವಿಲ್ಲ ಎಂದು ಹೇಳಿದರು.

     ಸಿಲಿಕಾನ್ ನಗರಿ ಬೆಂಗಳೂರು ನಗರಾದ್ಯಂತ ಮುಂದಿನ ಆರು ತಿಂಗಳಲ್ಲಿ ಬೆಂಗಳೂರು ನಗರದ ಎಲ್ಲಾ ವಾರ್ಡ್‍ಗಳಿಗೆ ವೈಫೈ ಸೌಲಭ್ಯ ಕಲ್ಪಿಸಲಾಗುವುದು. ಗೋವಿಂದರಾಜನಗರದಲ್ಲಿ ಉಚಿತ ವೈಫೈ ವ್ಯವಸ್ಥೆ ಮಾಡಿದ್ದು, ಇಡೀ ನಗರಕ್ಕೆ ಇದನ್ನು ವಿಸ್ತರಿಸಲಾಗುವುದು ಎಂದರು.
ಕಳೆದ 1989 ರಲ್ಲಿ ನಮ್ಮ ಅಜ್ಜಿ ಮೃತಪಟ್ಟಾಗ ಕೊರಟಗೆರೆಯಿಂದ ಮಾಹಿತಿ ತಿಳಿಸಲು ತಿಣುಕಾಡಬೇಕಾಯಿತು. ಟ್ರಂಕಾಲ್ ಬುಕ್ ಮಾಡಿ ಸಾಕಷ್ಟು ಕಾಯುವ ಸಮಸ್ಯೆ ಇತ್ತು. ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಅದರ ದೂರದೃಷ್ಟಿಯಿಂದ ದೇಶದಲ್ಲಿಂದು ಸಂಪರ್ಕ ಕ್ರಾಂತಿಯಾಗಿದೆ.

        130 ಕೋಟಿ ಜನರಲ್ಲಿ 110 ಕೋಟಿ ಜನ ಮೊಬೈಲ್ ಬಳಸುತ್ತಾರೆ. ಸಾಮಾನ್ಯ ಪ್ರಜೆ ಪ್ರಪಂಚದ ಯಾವುದೇ ಮೂಲೆಯಲ್ಲಿರುವ ಮಾಹಿತಿ ಪಡೆಯುವ ಸಾಮಥ್ರ್ಯ ಹೊಂದಿದ್ದಾನೆ. ಆದ ಕಾರಣ ಮಾಹಿತಿ ತಂತ್ರಜ್ಞಾನ ರಾಜಧಾನಿ ಬೆಂಗಳೂರಿಗೆ ವೈಫೈ ಸೌಲಭ್ಯ ಅತ್ಯಗತ್ಯವಾಗಿದೆ ಎಂದರು.

       ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಹತ್ತು ಸಾವಿರ ಕೋಟಿ ರೂ ಮೊತ್ತದ ಬಜೆಟ್‍ಗೆ ಅನುಮೋದನೆ ದೊರೆತಿದೆ. ಇದಕ್ಕೆ ಹಣಕಾಸು ಸಂಪನ್ಮೂಲ ಒದಗಿಸುವುದು ಬಹುದೊಡ್ಡ ಸವಾಲಾಗಿದ್ದು, ಈ ಹಣಕಾಸು ವಷಾಂತ್ಯದ ವೇಳೆಗೆ ನಗರದಲ್ಲಿ 2.5 ಸಾವಿರ ಕೋಟಿ ತೆರಿಗೆ ಸಂಗ್ರಹ ಮಾಡಬೇಕು. ಸಂಪನ್ಮೂಲ ಕ್ರೋಢೀಕರಣದಲ್ಲಿ ವಿಫಲವಾಗುವ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

        ಬೆಂಗಳೂರು ನಗರದಲ್ಲಿ ಶೇ 90 ರಷ್ಟು ಭಾಗ ಅನಧಿಕೃತ ಆಪ್ಟಿಕಲ್ ಫೈಬರ್ ಕೇಬಲ್‍ಗಳನ್ನು ಎಳೆಯಲಾಗಿತ್ತು. ತಾವು ಅಧಿಕಾರ ಸ್ವೀಕರಿಸಿದ ಬಳಿಕ ಆದ್ಯತೆ ಮೇರೆಗೆ ಇದನ್ನು ತೆರವುಗೊಳಿಸುವ ಕೆಲಸ ಮಾಡಲಾಗುತ್ತಿದೆ. ನಗರದ ಸೌಂದರ್ಯಕ್ಕೆ ಕಪ್ಪು ಚುಕ್ಕೆಯಾಗಿದ್ದು, ನಗರ ಅಸಹ್ಯ ಮತ್ತು ವಿರೂಪವಾಗಿ ಕಾಣುತ್ತಿದೆ. ಮನಸೋ ಇಚ್ಚೆ ಅಳವಡಿಸಿರುವ ಆಪ್ಟಿಕಲ್ ಕೇಬಲ್‍ಗಳಿಂದ ಜೀವಹಾನಿಗೂ ಕಾರಣವಾಗಿದ್ದು, ಇದನ್ನು ನಿರ್ದಾಕ್ಷ್ಯಣ್ಯವಾಗಿ ತೆರವುಗೊಳಿಸಲಾಗುತ್ತಿದೆ ಎಂದರು.

      ನಗರದ ಅಂದ ಹಾಳು ಮಾಡುತ್ತಿದ್ದ ಫ್ಲೆಕ್ಸ್ ತೆರವು ಮಾಡಲಾಗಿದೆ. ನಗರದ ಸೌಂದರ್ಯ ಹಾಳು ಮಾಡಲು ಅವಕಾಶ ಕಲ್ಪಿಸುವುದಿಲ್ಲ. ರಸ್ತೆ ಗುಂಡಿ ಮುಚ್ಚಲು ಒತ್ತು ನೀಡಿದ್ದು, ಹಂತಹಂತವಾಗಿ ವೈಟ್‍ಟಾಪಿಂಗ್ ಮಾಡಲಾಗುತ್ತಿದೆ. ನಗರದಾದ್ಯಂತ ವೈಟ್ ಟ್ಯಾಪಿಂಗ್ ರಸ್ತೆ ನಿರ್ಮಾಣವಾದರೆ 20 ವರ್ಷಗಳ ಕಾಲ ರಸ್ತೆ ಗುಂಡಿ ಸಮಸ್ಯೆ ಇರುವುದಿಲ್ಲ ಎಂದರು.

     ನಾಡಪ್ರಭು ಕೆಂಪೇಗೌಡರ ದೂರದೃಷ್ಟಿಯಿಂದ ಬೆಂಗಳೂರು ವಿಶ್ವದಲ್ಲೇ ವಿನೂತನ ನಗರವಾಗಿದೆ. ನಗರ ಯೋಜನಾ ತಂತ್ರಜ್ಞರನ್ನು ಮೀರಿ ಕೆಂಪೇಗೌಡರು ಬೆಂಗಳೂರು ನಗರಕ್ಕೆ ಸೂಕ್ತ ವಿನ್ಯಾಸ ರೂಪಿಸಿದ್ದಾರೆ. ಹೀಗಾಗಿ ಇಂದು ಬೆಂಗಳೂರು ಅತಿವೇಗವಾಗಿ ಬೆಳೆಯುತ್ತಿದೆ. ಅಷ್ಟೇ ತ್ವರಿತಗತಿಯಲ್ಲಿ ಅಭಿವೃದ್ಧಿ ಕೆಲಸಗಳು ನೆರವೇರುತ್ತಿವೆ. ಬೆಂಗಳೂರು ಇಡೀ ವಿಶ್ವದಲ್ಲೇ ಡೈನಾಮಿಕ್ ನಗರ ಎಂದು ಗುರುತಿಸಲಾಗಿದೆ. ಎಲೆಕ್ಟ್ರಾನಿಕ್ ಸಿಟಿ, ಗಾರ್ಡನ್ ಸಿಟಿ, ಸಿಲಿಕಾನ್ ಸಿಟಿ ಎಂದು ಕರೆಯುತ್ತಾರೆ. ಇದಕ್ಕೆ ಮೂಲ ಕಾರಣ ನಾಡ ಪ್ರಭು ಕೆಂಪೇಗೌಡರು ಕಾರಣ. ಅವರ ದೂರದೃಷ್ಟಿಯಿಂದ ಇಷ್ಟೆಲ್ಲಾ ಸಾಧನೆ ಸಾಧ್ಯವಾಗಿದೆ ಎಂದರು.

      ಸೋಮಣ್ಣ ಅವರ ಯಶಸ್ಸಿಗೆ ಅವರ ಜತೆ ಇರುವ ಪಾಲಿಕೆ ಸದಸ್ಯರು ಕಾರಣ. ಪಕ್ಷಾತೀತವಾಗಿ ಎಲ್ಲಾ ಬಿಬಿಎಂಪಿ ಸದಸ್ಯರನ್ನು ಸೋಮಣ್ಣ ಒಟ್ಟಿಗೆ ಕರೆದೊಯ್ಯುವ ಕೆಲಸ ಮಾಡುತ್ತಿದ್ದಾರೆ. ಗೋವಿಂದರಾಜು ನಗರದಲ್ಲಿ 200 ಹಾಸಿಗೆ ಸಾಮಥ್ರ್ಯದ ಆಸ್ಪತ್ರೆ ನಿರ್ಮಾಣಕ್ಕೆ ಮಂಜೂರಾತಿ ನೀಡುವಂತೆ ಸೋಮಣ್ಣ ಅವರು ಮನವಿ ನೀಡಿದ್ದಾರೆ. ತಕ್ಷಣವೇ ಇದಕ್ಕೆ ಅನುಮತಿ ಕೊಡಲಾಗುವುದು ಎಂದು ಭರವಸೆ ನೀಡಿದರು.

      ಬಿಬಿಎಂಪಿ ಸದಸ್ಯ ಕೆ. ಉಮೇಶ್ ಶೆಟ್ಟಿ ಉತ್ತಮ ಪಾಲಿಕೆ ಸದಸ್ಯರಾಗಿದ್ದಾರೆ. ಅವರ ಉತ್ಸಾಹವೇ ಅವರ ಯಶಸ್ಸಿಗೆ ಕಾರಣವಾಗಿದೆ. ಕ್ರಿಯಾ ಶೀಲ ವ್ಯಕ್ತಿತ್ವದ ಉಮೇಶ್ ಶೆಟ್ಟಿ ಅವರಂತಹ ನಾಯಕರು ಶಾಸಕ ಸೋಮಣ್ಣ ಅವರಿಗೆ ಶಕ್ತಿಯಾಗಿದ್ದಾರೆ ಎಂದು ಶ್ಲಾಘಿಸಿದರು.

       ಆದಿಚುಂಚನಗಿರಿ ಮಠದ ಸೌಮ್ಯಾನಂದ ಮಾತನಾಡಿ, ಬೆಂಗಳೂರು ನಗರದಲ್ಲಿ ಉತ್ತಮ ಅಭಿವೃದ್ಧಿ ಕಾರ್ಯಕ್ರಮಗಳು ನಡೆಯುತ್ತಿವೆ. ಶಾಸಕ ಸೋಮಣ್ಣ, ಬಿಬಿಎಂಪಿ ಸದಸ್ಯ ಕೆ. ಉಮೇಶ್ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳು ನಡೆಯುವಂತಾಗಲಿ ಎಂದು ಹಾರೈಸಿದರು.

       ಇದೇ ಸಂದರ್ಭದಲ್ಲಿ ಡಾ: ಪರಮೇಶ್ವರ್ ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಅಶ್ವಾರೂಢ ಪ್ರತಿಮೆ ಅನಾವರಣಗೊಳಿಸಿದರು. ಮಾದರಿ ಪಾಲಿಕೆ ಸೌಧ, ನಾಲ್ಕು ಮಹಡಿಗಳನ್ನೊಳಗೊಂಡ ಅಟಲ್ ಜೀ ಕ್ರೀಡಾ ಸಂಕಿರ್ಣ [ ಶಕ್ತಿ ಸೌಧ ]. ಶಾಸಕರ ಕಚೇರಿ ಹಾಗೂ ಮಹಾನಗರ ಪಾಲಿಕೆ ಕಚೇರಿ, ಪ್ರಧಾನಮಂತ್ರಿ ಜನೌಷಧಿ ಕೇಂದ್ರ, ವಿನೂತನ ಮಾದರಿಯ ಪಾದಚಾರಿ ಮಾರ್ಗ ಮತ್ತು ಪಾದಚಾರಿ ಮಾರ್ಗದಲ್ಲಿ ಉಚಿತ ವೈ-ಫೈ ಸೌಲಭ್ಯ, ಬಸ್ ನಿಲ್ದಾಣ, ಶುದ್ಧ ಕುಡಿಯುವ ನೀರಿನ ಘಟಕವನ್ನು ಲೋಕಾರ್ಪಣೆ ಮಾಡಿದರು. ಬಿ.ಡಬ್ಲ್ಯೊ.ಎಸ್.ಎಸ್.ಜಿ. ಕಟ್ಟಡಕ್ಕೆ ಶಂಕು ಸ್ಥಾಪನೆ ಮಾಡಿದರು.

                   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap