ಬೆಂಗಳೂರು
ರಾಜ್ಯ ಸಚಿವ ಸಂಪುಟ ವಿಸ್ತರಣೆ ಮತ್ತೊಮ್ಮೆ ಮುಂದಕ್ಕೆ ಹೋಗುವ ಸಾಧ್ಯತೆಯಿದೆ. ಇದರಿಂದಾಗಿ ನಿಗಮ ಮತ್ತು ಮಂಡಳಿಗಳ ನೇಮಕಾತಿಯೂ ನೆನೆಗುದಿಗೆ ಬೀಳುವಂತಾಗಿದೆ.
ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಆಕಾಂಕ್ಷಿಗಳಲ್ಲಿ ತೀವ್ರ ನಿರಾಸೆ ಮೂಡಿಸಿದ್ದು, ಇದು ಬೆಳಗಾವಿಯಲ್ಲಿ ನಡೆಯಲಿರುವ ವಿಧಾನಮಂಡಲ ಅಧಿವೇಶನ ಸಂದರ್ಭದಲ್ಲಿ ಸ್ಫೋಟಗೊಳ್ಳುವ ಸಾಧ್ಯತೆಯಿದೆ.
ಸಂಪುಟ ವಿಸ್ತರಣೆಯಲ್ಲಿ ಅವಕಾಶ ಸಿಗಬಹುದು ಎನ್ನುವ ನಿರೀಕ್ಷೆಯಿಟ್ಟುಕೊಂಡಿದ್ದ ಹಲವು ಮಂದಿ ಇದೀಗ ತಮ್ಮ ಪಕ್ಷಗಳ ಮುಖಂಡರ ವಿರುದ್ಧ ಆಕ್ರೋಶಗೊಂಡಿದ್ದಾರೆ.
ಈ ಉಪಚುನಾವಣೆ ನಡೆದ ಬಳಿಕ ಸಂಪುಟ ವಿಸ್ತರಣೆ ಮಾಡುವುದಾಗಿ ಕಾಂಗ್ರೆಸ್ ಹೈಕಮಾಂಡ್ ಹೇಳಿತ್ತು. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಕೂಡ ಇನ್ನು ಹೆಚ್ಚಿನ ಸಮಯ ಕಾಯುವುದು ಬೇಡ, ಉಪಚುನಾವಣೆ ನಂತರ ವಿಸ್ತರಣೆ ಮಾಡಿ ಎಂದು ಸೂಚನೆಯನ್ನೂ ನೀಡಿದ್ದರು. ಚುನಾವಣೆ ಬಳಿಕ ಮಂತ್ರಿಗಳಾಗುವ ಕನಸು ಕಾಣುತ್ತಿದ್ದವರ ಆಸೆ ಕರಗುವಂತಾಗಿದೆ.
ಈ ನಡುವೆಯೇ ಎದುರಾಗಿರುವ ಪಂಚರಾಜ್ಯಗಳ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ವರಿಷ್ಠರನ್ನು ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ. ಸಂಪುಟ ವಿಸ್ತರಣೆಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಸಿರು ನಿಶಾನೆ ತೋರಬೇಕು. ಆದರೆ ಸಧ್ಯಕ್ಕೆ ಇದು ಅಸಾಧ್ಯ.
ಹೀಗಾಗಿ ಸಚಿವ ಆಕಾಂಕ್ಷಿಗಳಿಗೆ ಮತ್ತೆ ನಿರಾಸೆಯಾಗಿದ್ದು, ಇದೀಗ ಪಂಚರಾಜ್ಯಗಳ ಚುನಾವಣೆ ಮುಗಿಯುವ ತನಕ ಕಾಯಲೇಬೇಕಾದ ಅನಿರ್ವಾಯತೆ ಎದುರಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
