ಪ್ರಧಾನಿ ಮೋದಿ ಅವರ ಅಣುಕು ಶವಯಾತ್ರೆ

ಬೆಂಗಳೂರು

        ಕೇಂದ್ರ ಸರ್ಕಾರ ನೋಟು ಅಮಾನ್ಯೀಕರಣ ಮಾಡಿ ಎರಡು ವರ್ಷ ಕಳೆದ ಹಿನ್ನೆಲೆಯಲ್ಲಿ ಯಾವುದೇ ಆರ್ಥಿಕ ಮುನ್ನಡೆಯಾಗದ ಕಾರಣ ಯುವ ಕಾಂಗ್ರೆಸ್ ಕಾರ್ಯಕರ್ತರು ನೃಪತುಂಗ ರಸ್ತೆಯ ಆರ್‍ಬಿಐ ಕಚೇರಿ ಮುಂದೆ ಪ್ರಧಾನಿ ಮೋದಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

        ಪ್ರತಿಭಟನೆಕಾರರನ್ನುದ್ದೇಶಿಸಿ ಯುವ ಕಾಂಗ್ರೆಸ್ ಉಪಾಧ್ಯಕ್ಷ ವಿಶ್ವನಾಥ್ ಮಾತನಾಡಿ, ನೋಟು ಅಮಾನ್ಯೀಕರಣ ಮಾಡಿ ಎರಡು ವರ್ಷ ಕಳೆದ ಹಿನ್ನೆಲೆಯಲ್ಲಿ ಆರ್ಥಿಕ ಕ್ಷೇತ್ರದಲ್ಲಿ ಯಾವುದೇ ಅನುಕೂಲಕರ ಬದಲಾವಣೆಯಾಗಿಲ್ಲ. ಯುವ ಕಾಂಗ್ರೆಸ್ ನ.8 ದಿನವನ್ನು ಕರಾಳ ದಿನವನ್ನಾಗಿ ಆಚರಿಸುತ್ತಿದೆ ಎಂದರು.

       ನರೇಂದ್ರ ಮೋದಿ ಸರ್ಕಾರ ತಮ್ಮ ಸ್ವಂತ ಲಾಭಕ್ಕೆ ಹಾಗೂ ಪಕ್ಷದ ಮುಖಂಡರ ಬಳಿಯಿರುವ ಕಪ್ಪು ಹಣವನ್ನು ಸಕ್ರಮಗೊಳಿಸಿಕೊಳ್ಳುವ ಉದ್ದೇಶದಿಂದ ಈ ನೋಟು ಅಮಾನ್ಯೀಕರಣ ಮಾಡಿದೆ. ಇದರಿಂದ ದೇಶದ ಬಡವರಿಗೆ, ವ್ಯಾಪಾರಸ್ಥರಿಗೆ, ಉದ್ಯಮಿಗಳಿಗೆ ಅಪಾರ ಪ್ರಮಾಣದ ಹಾನಿಯಾಗಿದೆ ಎಂದರು.

       ಆರ್‍ಬಿಐಗೆ ಶೇ 99.3 ರಷ್ಟು ಹಳೆಯ ನೋಟುಗಳು ಸಲ್ಲಿಕೆಯಾಗಿದ್ದು, ಅಮಾನ್ಯೀಕರಣದಿಂದ ಅರ್ಥಿಕ ಪರಿಸ್ಥಿತಿ ಸುಧಾರಣೆಯಾಗಿಲ್ಲ ಎಂದು ಆರ್‍ಬಿಐ ವಾರ್ಷಿಕ ವರದಿ ನೀಡಿದ ಹಿನ್ನೆಲೆಯಲ್ಲಿ ಯುವ ಕಾಂಗ್ರೆಸ್, ಬಿಜೆಪಿ ಪಕ್ಷದ ಕೀಳು, ಮೋಸದ ರಾಜಕಾರಣವನ್ನು ಧಿಕ್ಕರಿಸುತ್ತದೆ ಎಂದರು.

       ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ಅವರ ಅಣುಕು ಶವಯಾತ್ರೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಕೆಪಿವೈಸಿಸಿ ಉಪಾಧ್ಯಕ್ಷ ಶಿವಕುಮಾರ್, ಕಾರ್ಯದರ್ಶಿ ತ್ರಿಭುವನ್ ಗೌಡ, ಆನಂದ್ ಮತ್ತಿತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ