ಹೈದರಾಬಾದ್ :
ದೇಶವನ್ನೇ ಬೆಚ್ಚಿ ಬೀಳಿಸಿದ ಪ್ರಣಯ್ ಮರ್ಯಾದಾ ಹತ್ಯೆ ಮಾಡಿಸಿದ್ದ ಆರೋಪ ಹೊತ್ತಿದ್ದ ತೆಲಂಗಾಣದ ರಿಯಲ್ ಎಸ್ಟೇಟ್ ಉದ್ಯಮಿ ಮಾರುತಿ ರಾವ್, ತಮ್ಮ ತಪ್ಪಿಗೆ ಕ್ಷಮೆಯಾಚಿಸಿ ಇಲ್ಲಿನ ಲಾಡ್ಜ್ ವೊಂದರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮಾರುತಿ ರಾವ್ ಮಿರಿಯಾಲಗುಡದಲ್ಲಿ ಪ್ರಮುಖ ರಿಯಲ್ ಎಸ್ಟೇಟ್ ಉದ್ಯಮಿ ಹಾಗೂ ರಾಜಕಾರಣಿಯಾಗಿದ್ದರು. ಮನೆಯವರ ಪ್ರಬಲ ವಿರೋಧವಿದ್ದರೂ 2018ರಲ್ಲಿ ತನ್ನ ಮಗಳನ್ನು ವಿವಾಹವಾಗಿದ್ದ ದಲಿತ ಯುವಕ ಪೆರುಮಳ್ಳ ಪ್ರಣಯ್ ಮೇಲೆ ಆಕ್ರೋಶ ಹೊಂದಿದ್ದ ತಿರುನಾಗರಿ ಮಾರುತಿ ರಾವ್ 24 ವರ್ಷದ ತನ್ನ ಅಳಿಯನನ್ನು ಬಾಡಿಗೆ ಹಂತಕರಿಗೆ ರೂ.1 ಕೋಟಿ ಸುಪಾರಿ ಕೊಟ್ಟು ಹತ್ಯೆ ಮಾಡಿಸಿದ್ದರು.
ಆದರೆ, ಈ ಪ್ರಕರಣದಲ್ಲಿ ಮಗಳೇ ತಂದೆ ವಿರುದ್ಧ ದೂರು ನೀಡಿದ್ದಳು. ಈ ಸಂಬಂಧ ಬಂಧಿತನಾಗಿ 2019ರ ಎಪ್ರಿಲ್ ತಿಂಗಳಿನಲ್ಲಿ ಜಾಮೀನಿನ ಮೇಲೆ ರಾವ್ ಹೊರಬಂದಿದ್ದರು.
ಶನಿವಾರ ರಾತ್ರಿ ರಾವ್ ಅವರು ಈ ಅತಿಥಿ ಗೃಹದಲ್ಲಿ ತಂಗಿದ್ದರು ಮತ್ತು ಅವರ ಕಾರು ಚಾಲಕ ಇದೇ ಅತಿಥಿ ಗೃಹದ ಆವರಣದಲ್ಲಿ ಕಾರಿನಲ್ಲೇ ಮಲಗಿದ್ದರು. ಇಂದು ಬೆಳಿಗ್ಗೆ ರಾವ್ ಅವರ ಪತ್ನಿ ತನ್ನ ಪತಿಗೆ ಕರೆ ಮಾಡಿದ್ದ ಸಂದರ್ಭದಲ್ಲಿ ಅವರು ಕರೆ ಸ್ವೀಕರಿಸಿರಲಿಲ್ಲ. ಇದರಿಂದ ಅನುಮಾನಗೊಂಡ ರಾವ್ ಅವರ ಪತ್ನಿ ಕಾರು ಚಾಲಕನಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ. ಕಾರು ಚಾಲಕ ರಾವ್ ಅವರು ತಂಗಿದ್ದ ಕೊಠಡಿಗೆ ಬಂದು ನೋಡಿದಾಗ ಅವರು ಮೃತಪಟ್ಟಿರುವ ವಿಚಾರ ಬೆಳಕಿಗೆ ಬಂದಿದೆ.
ಪ್ರಕರಣದಲ್ಲಿ ತಾನು ದೋಷಿ ಆಗುತ್ತೇನೆಂದು ತಿಳಿದ ರಾವ್, ಮಗಳು ಹಾಗೂ ಪತ್ನಿಗೆ ಕ್ಷಮಾಪಣೆ ಪತ್ರ ಬರೆದು ಇದೀಗ ಆತ್ಮಹತ್ಯೆಗೆ ಶರಣಾಗಿದ್ದಾರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ