ಅಂಬರೀಶ್ ನಿಧನ : ಸೇನಾ ಹೆಲಿಕಾಫ್ಟರ್‌ನಲ್ಲಿ ಮಂಡ್ಯಕ್ಕೆ ಪಾರ್ಥಿವ ಶರೀರ ರವಾನೆ

ಬೆಂಗಳೂರು:

    ನಟ, ರಾಜಕಾರಣಿ ಅಂಬರೀಶ್ ಅವರು ನಿನ್ನೆ ರಾತ್ರಿ ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ.

      ಅಂಬರೀಶ್ ಅವರ ಮೃತದೇಹವನ್ನು ಕಂಠೀರವ ಸ್ಟೇಡಿಯಂನಲ್ಲಿ ಅಂತಿಮದರ್ಶನಕ್ಕೆ ಇಡಲಾಗಿದೆ. ಬೆಳಿಗಿನಿಂದಲೇ ಅಂಬರೀಶ್ ಅವರ ಸಾವಿರಾರು ಅಭಿಮಾನಿಗಳು ಕಂಠೀರವ ಸ್ಟೇಡಿಯಂ ಬಳಿ ಧಾವಿಸಿ ಬರುತ್ತಿದ್ದಾರೆ.

      ಕನ್ನಡ ಚಲನಚಿತ್ರರಂಗದ ಮೇರು ನಟ ಹಾಗೂ ಮಾಜಿ ಸಚಿವ ಅಂಬರೀಶ್ ಅವರಿಗೂ ಮಂಡ್ಯ ಜಿಲ್ಲೆಗೂ ಅವಿನಾಭವ ಸಂಬಂಧವಿದೆ. ಅಲ್ಲಿನ ಜನರ ಭಾವನೆಗೆ ಸ್ಪಂದಿಸಿ ಅಂಬರೀಶ್ ಅವರ ಪಾರ್ಥೀವ ಶರೀರವನ್ನು ಹೆಲಿಕಾಪ್ಟರ್ ಮೂಲಕ ಮಂಡ್ಯ ಜಿಲ್ಲೆಗೆ ಕೊಂಡೊಯ್ಯುವ ಬಗ್ಗೆ ಚಿಂತನೆ ನಡೆಸಲಾಗಿದ್ದು, ಈ ಬಗ್ಗೆ ಕೇಂದ್ರ ರಕ್ಷಣಾ ಇಲಾಖೆಯೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

      ವರನಟ ಡಾ.ರಾಜ್‍ಕುಮಾರ್ ಅವರ ಸಮಾಧಿ ಕಂಠೀರವ ಸ್ಟುಡಿಯೋದ ಎಡಭಾಗದಲ್ಲಿದೆ. ಬಲಭಾಗದಲ್ಲಿ ಒಂದೂವರೆ ಎಕರೆ ಭೂಮಿ ಜಾಗವಿದ್ದು, ಈ ಸ್ಥಳದಲ್ಲಿ ರಾಜ್‍ಕುಮಾರ್ ಅವರ ಸ್ಮಾರಕಕ್ಕೆ ಯಾವುದೇ ಅಪಚಾರವಾಗದ ರೀತಿಯಲ್ಲಿ ಅಂಬರೀಶ್ ಅವರ ಸ್ಮಾರಕವನ್ನು ನಿರ್ಮಿಸಲಾಗುವುದು ಎಂದು ತಿಳಿಸಿದರು.

      ಅಂಬರೀಶ್ ಅವರ ಪಾರ್ಥೀವ ಶರೀರವನ್ನು ವಾಹನದಲ್ಲಿ ಮಂಡ್ಯಕ್ಕೆ ಕೊಂಡೊಯ್ದು ಮತ್ತೆ ಬೆಂಗಳೂರಿಗೆ ತರುವುದು ಸಮಂಜಸವಲ್ಲ. ಶಾಸ್ತ್ರೋಕ್ತವಾಗಿಯೂ ಇದು ಸರಿಯಲ್ಲ ಎಂದು ಹಿರಿಯರು ಸಲಹೆ ನೀಡಿರುವ ಹಿನ್ನೆಲೆಯಲ್ಲಿ ವಿಮಾನದ ಮೂಲಕ ಪಾರ್ಥೀವ ಶರೀರವನ್ನು ಮಂಡ್ಯಕ್ಕೆ ಕೊಂಡೊಯ್ಯುವ ಬಗ್ಗೆ ಚಿಂತನೆ ನಡೆಸಲಾಗಿದೆ. 

      ಈ ಸಂಬಂಧ ರಕ್ಷಣಾ ಸಚಿವರನ್ನು ಸಂಪರ್ಕಿಸಲು ಪ್ರಯತ್ನಿಸಲಾಗುತ್ತಿದ್ದು, ರಕ್ಷಣಾ ಇಲಾಖೆಯಿಂದ ವಿಶೇಷ ವಿಮಾನ ದೊರೆತರೆ ಪಾರ್ಥೀವ ಶರೀರವನ್ನು ಮಂಡ್ಯಕ್ಕೆ ಕೊಂಡೊಯ್ದು ಅಲ್ಲಿನ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಸಂಜೆ 4 ಗಂಟೆಯಿಂದ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಿಕೊಡುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ ಎಂದರು.   

ಮಂಡ್ಯದಲ್ಲಿ ಸಿದ್ಧತೆ:

      ಸಿಎಂ ಕುಮಾರಸ್ವಾಮಿ ಹೇಳಿಕೆ ಹಿನ್ನೆಲೆಯಲ್ಲಿ ಮಂಡ್ಯದ ಸ್ಟೇಡಿಯಂನಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲು ಜಿಲ್ಲಾಡಳಿತ ಮುಂದಾಗಿದೆ ಎನ್ನಲಾಗಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link