ಬೆಂಗಳೂರು:
ಕಳೆದ 5 ತಿಂಗಳುಗಳಿಂದ ಬಂದ್ ಆಗಿದ್ದ ಕ್ಲಬ್ ಮತ್ತು ಬಾರ್ ಆಂಡ್ ರೆಸ್ಟೋರೆಂಟ್ ನಲ್ಲಿ ಸೆ.1ರಿಂದ ಗ್ರಾಹಕರಿಗೆ ಆಹಾರದೊಂದಿಗೆ ಮದ್ಯ ಪೂರೈಕೆಯಾಗಲಿದೆ.
ಕೇಂದ್ರದ ಮಾರ್ಗಸೂಚಿಗಳನ್ನು ಪಾಲಿಸುವಂತೆ ಷರತ್ತುಗಳನ್ನು ವಿಧಿಸಿ ಮದ್ಯ ಸೇವನೆಗೆ ಅವಕಾಶ ನೀಡಿ ಅಬಕಾರಿ ಆಯುಕ್ತರು ಸೋಮವಾರ ಆದೇಶ ಹೊರಡಿಸಿದ್ದಾರೆ.
ಕೇಂದ್ರ ಸರ್ಕಾರದ ಅನ್’ಲಾಕ್-4ರ ಅನ್ವಯ ರಾಜ್ಯ ಸರ್ಕಾರ ಸೋಮವಾರ ಹೊರಡಿಸಿರುವ ಮಾರ್ಗಸೂಚಿಯಲ್ಲಿ ಕ್ಲಬ್, ಬಾರ್ ಆಯಂಡ್ ರೆಸ್ಟೋರೆಂಟ್ ಗಳ ಸಾಮರ್ಥ್ಯದ ಆಧಾರದಲ್ಲಿ ಶೇ.50ರಷ್ಟು ಜನ ಪ್ರವೇಶಕ್ಕೆ ಅವಕಾಶ ಕಲ್ಪಿಸಬೇಕು. ಗ್ರಾಹಕರ ನಡುವೆ ಕನಿಷ್ಟ 6 ಅಡಿ ಅಂತರ ಕಾಯ್ದುಕೊಳ್ಳಬೇಕು ಎಂಬುದು ಸೇರಿದಂತೆ ಹಲವು ಸೂಚನೆಗಳನ್ನು ನೀಡಲಾಗಿದೆ.
ಕೊರೋನಾ ಹಿನ್ನೆಲೆಯಲ್ಲಿ ಕ್ಲಬ್, ಬಾರ್ ಆಯಂಡ್ ರೆಸ್ಟೋರಂಟ್ ಮತ್ತು ಹೋಟೆಲ್ ಗಳಲ್ಲಿ ಮದ್ಯ ಮಾರಾಟಕ್ಕೆ ನಿರ್ಬಂಧ ವಿಧಿಸಿ, ಕೇವಲ ಪಾರ್ಸೆಲ್’ಗೆ ಅವಕಾಶವಿತ್ತು. ಇದೀಗ ಊಟದೊಂದಿಗೆ ಮದ್ಯ ಸರಬರಾಜಿಗೂ ಅವಕಾಶ ಮಾಡಿಕೊಡಲಾಗಿದೆ.
- 65 ವರ್ಷಕ್ಕಿಂತ ಮೇಲ್ಪಟ್ಟವರು, ಮಕ್ಕಳು ಮತ್ತು ಗರ್ಭಿಣಿಯರಿಗೆ ಪ್ರವೇಶಕ್ಕೆ ಅವಕಾಶ ನೀಡಬಾರದು,
- ಪ್ರವೇಶ ದ್ವಾರಗಳಲ್ಲಿ ಸ್ಯಾನಿಟೈಜರ್ ಬಳಕೆ ಮತ್ತು ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯಗೊಳಿಸಬೇಕು.
- ಮಾಸ್ಕ್ ಧರಿಸಿದವರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ಕಲ್ಪಿಸಬೇಕು.
- ಎಲ್ಲಾ ಸಿಬ್ಬಂದಿಗಳು ಕಡ್ಡಾಯವಾಗಿ ಕೈಗವಸುಗಳನ್ನು ಬಳಸಬೇಕು. ಪಾರ್ಕಿಂಗ್ ಸೇರಿದಂತೆ ಸುತ್ತಮುತ್ತಲ ಭಾಗಗಳಲ್ಲಿ ಜನದಟ್ಟಣೆಯಾಗದಂತೆ ತಡೆಯಬೇಕು.
- ಹೊರಭಾಗಗಳಿಂದ ಬರುವ ಗ್ರಾಹಕರ ಪ್ರಯಾಣದ ಇತಿಹಾಸ, ಗುರುತಿನ ಚೀಟಿ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಮಾಹಿತಿಯನ್ನು ಕಡ್ಡಾಯವಾಗಿ ಪಡೆಯಬೇಕು.
- ಗ್ರಾಹಕರೊಂದಿಗೆ ಸಂಪರ್ಕ ರಹಿತ ವ್ಯವಹಾರಕ್ಕೆ ಉತ್ತೇಜನ ನೀಡುವುದು ಸೇರಿದಂತೆ ಅನೇಕ ಮಾರ್ಗಸೂಚಿಗಳನ್ನು ಅನುಸರಿಸಬೇಕು.
ಎಂಬ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ ಎಂದು ತಿಳಿದುಬಂದಿದೆ.
ಬಾರ್, ಕ್ಲಬ್ ಹಾಗೂ ಪಬ್‌ಗಳನ್ನು ತೆರೆಯಲು ಅನುಮತಿ ನೀಡಿರುವುದರಿಂದ ರಾಜ್ಯದ ಬೊಕ್ಕಸಕ್ಕೆ ಗಣನೀಯ ಪ್ರಮಾಣದಲ್ಲಿ ಆದಾಯವೂ ಹರಿದು ಬರುವ ನಿರೀಕ್ಷೆ ಇದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
