ಹೊಸದಿಲ್ಲಿ:
ರಫೇಲ್ ಯುದ್ದ ವಿಮಾನ ಖರೀದಿ ಒಪ್ಪಂದಕ್ಕೆ ಸಂಬಂಧಿಸಿ ಬೆಲೆ ವಿವರಗಳ ಪಟ್ಟಿಯನ್ನು ಕೇಂದ್ರ ಸರಕಾರ ಸೋಮವಾರ ಮುಚ್ಚಿದ ಲಕೋಟೆಯಲ್ಲಿ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದೆ. ಈ ಮೂಲಕ ಸರಕಾರ ಅರ್ಜಿದಾರರಲ್ಲಿ ಒಪ್ಪಂದದ ನಿರ್ಧಾರಕ್ಕೆ ಸಂಬಂಧಿಸಿದ ಪ್ರಕ್ರಿಯೆಯ ವಿವರಗಳನ್ನು ಹಂಚಿಕೊಂಡಿದೆ.
“ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯ ವಿವರಗಳು” ಎನ್ನುವ ಶೀರ್ಷಿಕೆ ಹೊಂದಿರುವ ದಾಖಲೆಯನ್ನು ಸರ್ಕಾರ ಕೋರ್ಟ್ ಗೆ ನೀಡಿದ್ದು ದಾಖಲೆಯು ರಕ್ಷಣಾ ಖರೀದಿ ಪ್ರಕ್ರಿಯೆ -2013ರ ಮುಂದುವರಿದ ಭಾಗವಾಗಿ ಬಂದಿದೆ ಎಂದು ವಿವರಿಸಿದೆ.
ಒಪ್ಪಂದಕ್ಕೆ ಸಹಿ ಹಾಕುವ ಮುನ್ನ ಭಾರತೀಯ ತಂಡವು ಫ್ರೆಂಚ್ ಸರ್ಕಾರದೊಡನೆ ಸುಮಾರು ಒಂದು ವರ್ಷ ಕಾಲ ಮಾತುಕತೆ ನಡೆಸಿದ್ದು, ಸಂಪುಟ ಸಮಿತಿಯ ಅನುಮೋದನೆ ಹಾಗೂ ಹಣಕಾಸು ಪ್ರಾಧಿಕಾರದ ಅನುಮೋದನೆಯನ್ನು ಪಡೆದಿದೆ ಎಂದು ದಾಖಲೆಗಳು ತಿಳಿಸಿವೆ.
ಫ್ರಾನ್ಸ್‌ನ ಡಸ್ಸಾಲ್ಟ್ ಕಂಪೆನಿಯಿಂದ 59,000 ಕೋ.ರೂ. ವೆಚ್ಚದಲ್ಲಿ 36 ಜೆಟ್ ವಿಮಾನಗಳನ್ನು ಖರೀದಿಸಿರುವ ಒಪ್ಪಂದಕ್ಕೆ ಸಂಬಂಧಿಸಿ ತನಿಖೆ ನಡೆಸಬೇಕೆಂದು ಆಗ್ರಹಿಸಿ ಅರ್ಜಿದಾರರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಇದೀಗ ಸುಪ್ರೀಂಕೋರ್ಟ್‌ನ ಸೂಚನೆಯ ಮೇರೆಗೆ ಕೇಂದ್ರ ಸರಕಾರ ದರ ಪಟ್ಟಿಯನ್ನು ಸಲ್ಲಿಸಿದೆ.
ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆಯನ್ನು ಬುಧವಾರ(ನವೆಂಬರ್ 14) ಮುಂದುವರಿಸುವುದಾಗಿ ಸುಪ್ರೀಂಕೋರ್ಟ್ ತಿಳಿಸಿದೆ.
ರಫೇಲ್ ಒಪ್ಪಂದ : ಖರೀದಿ ಮೊತ್ತ ಮತ್ತು ತಾಂತ್ರಿಕ ವಿವರ ಕೇಳಿದ ಸುಪ್ರೀಂ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
