ಮುಂಬೈ:
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೀಡಿದ್ದ ಹೇಳಿಕೆಗೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ವಿರುದ್ಧ ಸಲ್ಲಿಸಲಾಗಿದ್ದ ಮಾನನಷ್ಟ ಮೊಕದ್ದಮೆಗೆ ಬಿಗ್ ರಿಲೀಫ್ ಸಿಕ್ಕಿದೆ.
ಪತ್ರಕರ್ತೆ ಗೌರಿ ಲಂಕೇಶ್ 2017ರ ಸೆಪ್ಟೆಂಬರ್ ತಿಂಗಳಲ್ಲಿ ಬೆಂಗಳೂರಿನ ತಮ್ಮ ನಿವಾಸದ ಹೊರಗೆ ರಾತ್ರಿ ವೇಳೆ ಗುಂಡೇಟಿಗೆ ಹತ್ಯೆಯಾಗಿದ್ದರು. ಅವರು ಹತ್ಯೆಯಾದ 24 ಗಂಟೆಗಳೊಳಗೆ ರಾಹುಲ್ ಗಾಂಧಿಯವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಬಿಜೆಪಿ, ಆರ್ ಎಸ್‌ಎಸ್ ನ ತತ್ವ, ಸಿದ್ದಾಂತಗಳಿಗೆ ವಿರುದ್ಧವಾಗಿ ಮಾತನಾಡುವವರ ಮೇಲೆ ಒತ್ತಡ ಹಾಕಿ, ಬೆದರಿಕೆ ಹಾಕಿ ಹೊಡೆದು, ದಾಳಿ ಮಾಡಿ ಕೊಲ್ಲಲಾಗುತ್ತದೆ ಎಂದು ಹೇಳಿದ್ದರು. ಈ ಹತ್ಯೆ ಹಿಂದೆ ಆರ್.ಎಸ್.ಎಸ್. ವ್ಯಕ್ತಿಗಳ ಕೈವಾಡವಿದೆ ಎಂದು ಆರೋಪಿಸಿದ್ದರು.
ಈ ಹಿನ್ನಲೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತ ಮತ್ತು ವಕೀಲ ದ್ರುತಿಮನ್ ಜೋಷಿ ರವರು ರಾಹುಲ್ ಗಾಂಧಿ ವಿರುದ್ದ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.
ಈ ಪ್ರಕರಣದ ವಿಚಾರಣೆಗೆ ರಾಹುಲ್ ಗಾಂಧಿ ಇಂದು ಮುಂಬೈನ ನ್ಯಾಯಾಲಯದ ಮುಂದೆ ಹಾಜರಾಗಿದ್ದು, ರಾಹುಲ್ ಗಾಂಧಿ ವಿರುದ್ದದ ಮಾನನಷ್ಟ ಮೊಕದ್ದಮೆಯಲ್ಲಿ ಜಾಮೀನು ನೀಡಲಾಗಿದೆ.
ಚುನಾವಣೆ ಸಂದರ್ಭದಲ್ಲಿ ಆಡಳಿತ ಪಕ್ಷದ ನಾಯಕರನ್ನು ಟೀಕಿಸುವಾಗ ರಾಹುಲ್ ಗಾಂಧಿಯವರು ಹೀಗೆ ಹೇಳಿದ್ದು, ಯಾವುದೇ ನಿರ್ದಿಷ್ಟ ವ್ಯಕ್ತಿಗಳನ್ನು ಗುರಿಯಾಗಿಸಿ ಈ ಹೇಳಿಕೆ ನೀಡಿರಲಿಲ್ಲವೆಂದು ಅವರ ಪರ ವಕೀಲರು ಮಾಡಿರುವ ವಾದವನ್ನು ಎತ್ತಿ ಹಿಡಿದಿರುವ ನ್ಯಾಯಾಲಯ, ಆರ್.ಎಸ್.ಎಸ್. ಕಾರ್ಯಕರ್ತ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಜಾಮೀನು ನೀಡಿದೆ. ಈ ಮೂಲಕ ರಾಹುಲ್ ಗಾಂಧಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
