ಬೆಂಗಳೂರು:

ಬೆಳಗಾವಿಯ ಕಬ್ಬು ಹೋರಾಟಗಾರರ ಪ್ರತಿಭಟನೆಗೆ ಕೊನೆಗೂ ಮಣಿದ ಸಿಎಂ ಕುಮಾರಸ್ವಾಮಿ ಕಬ್ಬು ಬೆಳೆಗಾರರ ಜೊತೆ ಚರ್ಚಿಸಲು ತೀರ್ಮಾನಿಸಿದ್ದಾರೆ.
ಹೋರಾಟದ ಫಲವಾಗಿ ಸಿಎಂ ಕುಮಾರಸ್ವಾಮಿ ಸಕ್ಕರೆ ಕಾರ್ಖಾನೆ ಮಾಲೀಕರು ಹಾಗೂ ರೈತ ಮುಖಂಡರ ಸಭೆ ಕರೆದಿದ್ದಾರೆ. ನಾಳೆ ವಿಧಾನಸೌಧದಲ್ಲಿ ಮಧ್ಯಾಹ್ನ 3 ಗಂಟೆಗೆ ಸಭೆ ನಡೆಯಲಿದೆ. ರೈತರು ನಾಳೆ ಸಿಎಂ ಕುಮಾರಸ್ವಾಮಿ ಕರೆದಿರುವ ಸಭೆಯಲ್ಲಿ ಭಾಗಿಯಾಗಲು ಸಮ್ಮತಿಸಿದ್ದಾರೆ. ಈ ಸಭೆಯಲ್ಲಿ ರೈತರ ಹಿತದೃಷ್ಟಿಯಿಂದ ಒಮ್ಮತದ ನಿರ್ಣಯ ಹೊರಹೊಮ್ಮುವ ವಿಶ್ವಾಸ ಹೊಂದಿದ್ದೇನೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಪ್ರತಿಭಟನೆಯ ಹಿನ್ನೆಲೆಯಲ್ಲಿ ಹೇಳಿಕೆ ನೀಡಿರುವ ಮುಖ್ಯಮಂತ್ರಿ, ಕಬ್ಬು ಬೆಳೆಗಾರರ ಪ್ರತಿಭಟನೆ ಕುರಿತು ನಾನು ಪ್ರಾರಂಭದಿಂದಲೇ ಜಿಲ್ಲಾಡಳಿತಗಳ ಜೊತೆ ಸಂಪರ್ಕದಲ್ಲಿದ್ದು, ಜಿಲ್ಲಾಧಿಕಾರಿಗಳಿಗೆ ಸಲಹೆ ಸೂಚನೆಗಳನ್ನು ನೀಡುತ್ತಿದ್ದೇನೆ. ಆದರೆ ರೈತರು ಸುವರ್ಣ ವಿಧಾನಸೌಧಕ್ಕೆ ನುಗ್ಗಿ ಪ್ರತಿಭಟನೆ ನಡೆಸಿರುವುದು ದುರದೃಷ್ಟಕರ ಎಂದವರು ಬೇಸರ ವ್ಯಕ್ತಪಡಿಸಿದ್ದಾರೆ.
ರೈತರ ತೀವ್ರ ಹೋರಾಟದ ನಡುವೆಯೇ ಇಂದು ಮಹತ್ವದ ಸಚಿವ ಸಂಪುಟ ಸಭೆ ನಡೆಯಲಿದೆ. ವಿಧಾನಸೌಧದಲ್ಲಿ ಮಧ್ಯಾಹ್ನ 12.30ಕ್ಕೆ ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ಬೆಳಗಾವಿ ರೈತ ಹೋರಾಟವೇ ಪ್ರಮುಖವಾಗಿ ಚರ್ಚೆಯಾಗುವ ಸಾಧ್ಯತೆ ಇದೆ. ರೈತರಿಗೆ ಕಬ್ಬು ಬಾಕಿ ಕೊಡಿಸುವ ಕುರಿತು ಸಭೆಯಲ್ಲಿ ಮಹತ್ವ ನಿರ್ಧಾರವನ್ನ ಸರ್ಕಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








