ರಾಮನಗರ :
ಅನಾಮಧೇಯ ಪೋನ್ ಕರೆಯಿಂದಾಗಿ ಮದುವೆ ಮುರಿದು ಬಿದ್ದಿರುವ ಘಟನೆ ರಾಮನಗರದ ಚನ್ನಪಟ್ಟಣದ ತಿಟ್ಟಮಾರನಹಳ್ಳಿಯಲ್ಲಿ ನಡೆದಿದೆ.
ಆರು ತಿಂಗಳ ಹಿಂದೆ ನಗರದ ಎಲೆಕೇರಿ ಬಡಾವಣೆಯ ಮಧುಶ್ರೀ (ಹೆಸರನ್ನು ಬದಲಾಯಿಸಲಾಗಿದೆ) ಮತ್ತು ಎಲೀಯೂರು ಗ್ರಾಮದ ಬಸವರಾಜುಗೆ ನಿಶ್ಚಿತಾರ್ಥ ನೆರವೇರಿತ್ತು. ಇಂದು (ಶುಕ್ರವಾರ) ನವ ವಧು-ವರರು ವೈವಾಹಿಕ ಬದುಕಿಗೆ ಕಾಲಿಡಬೇಕಿದ್ದು, ಅಂತಿಮ ಕ್ಷಣದಲ್ಲಿ ವಧುವಿಗೆ ಬಂದ ಅನಾಮಧೇಯ ಕರೆಯೊಂದು ಮದುವೆ ಮುರಿದು ಬೀಳಲು ಕಾರಣವಾಗಿದೆ.
ಇಂದು ಚನ್ನಪಟ್ಟಣದ ತಿಟ್ಟಮಾರನಹಳ್ಳಿಯ ಚೇತನ ಸಮುದಾಯ ಭವನದಲ್ಲಿ ಮದುವೆ ನಡೆಯಬೇಕಿತ್ತು.ಇದರ ಮಧ್ಯೆ ವಧುವಿಗೆ ಕರೆ ಮಾಡಿದ ಅನಾಮಧೇಯನೊಬ್ಬ ಬಸವರಾಜನಿಗೆ ಈಗಾಗಲೇ ಮದುವೆಯಾಗಿದ್ದು, ಮಕ್ಕಳು ಕೂಡಾ ಇದ್ದಾರೆ ಎಂದಿದ್ದಾನೆ. ಇದರಿಂದ ಅನುಮಾನಗೊಂಡ ವಧುವಿನ ಕುಟುಂಬಸ್ಥರು ಆರತಕ್ಷತೆಗೂ ಮುನ್ನವೇ ಮದುವೆಯನ್ನು ನಿಲ್ಲಿಸಿದ್ದಾರೆ. ಅಲ್ಲದೆ ಅದೇ ವಧುವಿಗೆ ಬೇರೆ ಹುಡುಗನ ಜೊತೆ ಮದುವೆ ಮಾಡಲು ತೀರ್ಮಾನಿಸಿದ್ದಾರೆ.
ಆದರೆ ಇದು ಸುಳ್ಳು ಸುದ್ದಿ ಎಂದ ಬಸವರಾಜ ಮದುವೆಯಾಗಿರುವುದನ್ನು ಸಾಬೀತುಪಡಿಸಿ ಎಂದು ಪಟ್ಟು ಹಿಡಿದಿದ್ದು, ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಬಳಿಕ ಬಸವರಾಜ ಜೊತೆಗಿನ ವಿವಾಹ ರದ್ದುಗೊಂಡಿದೆ.
ಮದುವೆ ಮುರಿದು ಬಿದ್ದ ಹಿನ್ನೆಲೆ, ಎಲೆಕೇರಿ ಗ್ರಾಮದ ಆನಂದ್ ವಧುಗೆ ಬಾಳು ಕೊಡಲು ಮುಂದೆ ಬಂದಿದ್ದು, ಇಬ್ಬರ ಮದುವೆಗೆ ಹಿರಿಯರು ಒಪ್ಪಿ ಆಶೀರ್ವದಿಸಿದ್ದು, ವಿವಾಹವಾಗಿದ್ದಾರೆ ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ