ರೆಡ್ಡಿ ಜಾಮೀನು ಅರ್ಜಿ ಆದೇಶ ಬುಧವಾರ ನಿರ್ಧಾರ ಸಾಧ್ಯತೆ…!!!

ಬೆಂಗಳೂರು

       ಆಂಬಿಡೆಂಟ್ ಕಂಪನಿಯ ಡೀಲ್ ಪ್ರಕರಣಕ್ಕೆ ಸಂಬಂಧ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನಗರದ 1ನೇ ಎಸಿಎಂಎಂ ನ್ಯಾಯಾಲಯ ಜಾಮೀನು ಅರ್ಜಿ ಅದೇಶವನ್ನು ಬುಧವಾರಕ್ಕೆ ಕಾಯ್ದಿರಿಸಿದೆ.

        ಪ್ರಕರಣಕ್ಕೆ ಸಂಬಂಧ ವಿಚಾರಣೆ ಪೂರ್ಣ ಗೊಳಿಸಿದ 1ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಮೂರ್ತಿ ಜಗದೀಶ್ ಅವರು ಜಾಮೀನು ಅರ್ಜಿ ಅದೇಶವನ್ನು ಬುಧವಾರಕ್ಕೆ ಕಾಯ್ದಿರಿಸಿದ್ದು ಇನ್ನೂ ಒಂದು ರೆಡ್ಡಿ ಜೈಲಿನಲ್ಲಿ ಕಳೆಯಬೇಕಾಗಿದೆ.

       ರೆಡ್ಡಿ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿ ಹೆಚ್ ಹನುಮಂತರಾಯ ಅವರು ರೆಡ್ಡಿಗೂ ಚಿನ್ನಕ್ಕೂ ಸಂಬಂಧ ಇಲ್ಲ ರಿಮೈಂಡ್ ಅಪ್ಲಿಕೇಶನ್ ನಲ್ಲಿ ರೆಡ್ಡಿ ಹೆಸರು ಬಳಸಿಲ್ಲ. ವಿಚಾರಣೆಗೆ ಕರೆಯಿಸಿ ಬರೊಬ್ಬರಿ 12 ಗಂಟೆ ವಿಚಾರಣೆ ಮಾಡಿ ಅದಾದ ಮೇಲೆ ಅಲ್ಲಿ ಏಕೆ ಉಳಿಸಿಕೊಂಡರು. ಅಲಿಖಾನ್ ರಿಮೈಂಡ್ ಅಪ್ಲಿಕೇಶನ್‍ನಲ್ಲಿ ಅವನ ಹೆಸರಿತ್ತುರೆಡ್ಡಿ ಹೆಸರು ಇರಲಿಲ್ಲ.ಆದರೂ ನನ್ನ ಕಕ್ಷಿದಾರ ಜನಾರ್ದನ ರೆಡ್ಡಿಯನ್ನ ಸುಮ್ಮನೆ ಕರೆಸಿದ್ದಾರೆ.

        5ನೇ ಆರೋಪಿ ಅಲಿಖಾನ್ ನಾಲ್ಕನೆ ಆರೋಪಿ ರಮೇಶ್‍ನಿಂದ ಚಿನ್ನ ಪಡೆದಿದ್ದಾನೆ ಎನ್ನಲಾಗಿದೆ. ಆದ್ದರಿಂದ ಅಲಿಖಾನ್ ಚಿನ್ನ ಕೊಡಬೇಕು ಆರನೇ ಆರೋಪಿ ಜನಾರ್ದನ ರೆಡ್ಡಿ ಅಲ್ಲ. ಜನಾರ್ದನ ರೆಡ್ಡಿ ಗೂ ಚಿನ್ನಕ್ಕೂ ಸಂಬಂಧ ಇಲ್ಲ. ಆದರೆ ಪ್ರಕರಣದ 1ನೇ ಆರೋಪಿ ಪರೀಧ್‍ಗೆ ಜಾಮೀನು ದೊರೆತಿದೆ ಉಳಿದ ಆರೋಪಿಗಳಿಗೆ ಮಧ್ಯಂತರ ಜಾಮೀನು ನೀಡಲಾಗಿದೆ. ಆದರೆ ದೂರಿಗೇ ಸಂಬಂಧವೇ ಇಲ್ಲದ 6 ನೇ ಆರೋಪಿ ರೆಡ್ಡಿ ಅವರನ್ನ ಬಂಧಿಸಲಾಗಿದೆ ಎಂದು ನ್ಯಾಯಾಧೀಶರ ಮುಂದೆ ರೆಡ್ಡಿ ಬಂಧನಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.

       ಇದಕ್ಕೆ ಪ್ರತಿಯಾಗಿ ಸಿಸಿಬಿ ಪರ ವಾದ ಮಂಡಿಸಿದ ವಕೀಲ ವೆಂಕಟಗಿರಿ, ಪ್ರಕರಣದಲ್ಲಿ 600ರಿಂದ 700 ಕೋಟಿ ವಂಚನೆಯಾಗಿದೆ. ಪ್ರಕರಣದಲ್ಲಿ ರೆಡ್ಡಿ 20 ಕೋಟಿ ಪಡೆದಿದ್ದಾರೆ. ಅಕ್ರಮವಾಗಿ ಡೀಲ್ ಮಾಡಿದ್ದಾರೆ. ಜನವರಿಯಿಂದ ನಾವು ತನಿಖೆ ನಡೆಸಿದ್ದೇವೆ ಎಂದರು.

       ಈ ವೇಳೆ ನ್ಯಾಯಾಧೀಶ ಜಗದೀಶ್, ಜನಾರ್ದನ ರೆಡ್ಡಿಗೆ ಮತ್ತು ಕಂಪನಿಗೆ ನೇರ ನಂಟು ಇದೆಯಾ ಹಣವನ್ನು ಜನಾರ್ದನ ರೆಡ್ಡಿಗೆ ಯಾರಾದ್ರೂ ಕೊಟ್ಟಿದ್ದಾರಾ? ನೇರವಾಗಿ ಯಾವುದಾದರೂ ಲಿಂಕ್ ಇದೆಯಾ ಸುಮ್ಮನೆ ಆರೋಪ ಮಾಡ್ಬೇಕು ಎಂದು ಮಾಡಬೇಡಿ ನೇರವಾದ ಸಂಬಂಧ ಇರುವುದರ ಬಗ್ಗೆ ಮಾಹಿತಿ ನೀಡಿ ಸರಿಯಾದ ಮಾಹಿತಿಯೇ ಇಲ್ಲದೆ ಬಂಧನ ಮಾಡಿದ್ದೀರಿ ಹಣ ಕಳೆದುಕೊಂಡವರು ಯಾರು ರೆಡ್ಡಿಗೆ ಕೊಟ್ಟಿದ್ದೀನಿ ಅಂದಿದ್ದಾರಾ.? ದೂರು ಇರುವುದೇ ಒಂದು, ನೀವು ಮಾಡುತ್ತಿರುವ ತನಿಖೆಯೆ ಮತ್ತೊಂದು ಎಂದು ಸಿಸಿಬಿ ಅಧಿಕಾರಿಗಳ ತನಿಖಾ ವೈಖರಿಗೆ ಅಸಮಾಧಾನ ವ್ಯಕ್ತಪಡಿಸಿ ವಿಚಾರಣೆ ಮುಕ್ತಾಯಗೊಳಿಸಿದ ನ್ಯಾಯಾಲಯ ಜಾಮೀನು ಅರ್ಜಿಯ ತೀರ್ಪನ್ನು ನಾಳೆಗೆ ಕಾಯ್ದಿರಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ