ಬೆಂಗಳೂರು
ಬ್ಯಾಂಕ್ ಬಡ್ಡಿಗಿಂತಲೂ ಹೆಚ್ಚಿನ ಬಡ್ಡಿ ನೀಡುವುದಾಗಿ ದೇಶಾದ್ಯಂತ ಕೋಟ್ಯಂತರ ರೂಪಾಯಿ ವಂಚಿಸಿ ಬಂಧನದಲ್ಲಿರುವ ಎಂಇಪಿ ಪಕ್ಷದ ಸ್ಥಾಪಕಿ ನೌಹಿರಾ ಶೇಖ್ ಅವರನ್ನು ಪಾರು ಮಾಡಲು ಜನರ್ದಾನ ರೆಡ್ಡಿ ಪ್ರಯತ್ನಿಸಿದ್ದರು ಎನ್ನುವ ಆರೋಪ ಕೇಳಿ ಬಂದಿದೆ. ಆಲ್‍ಇಂಡಿಯಾ ಮಹಿಳಾ ಎಂಪವರ್ಮೆಂಟ್ ಪಾರ್ಟಿ (ಎಂಇಪಿ) ಪಕ್ಷದ ಮುಖ್ಯಸ್ಥೆ ನೌಹೀರಾ ಶೇಖ್ ತೆಲಂಗಾಣದಲ್ಲಿ ಬಂಧನಕ್ಕೆ ಒಳಗಾಗಿದ್ದು, ಈ ಪ್ರಕರಣದಿಂದ ಅವರನ್ನು ರಕ್ಷಿಸಲು ರೆಡ್ಡಿ ಸಹಾಯ ಮಾಡುವುದಾಗಿ ಹಣ ಪಡೆದಿದ್ದರು ಎನ್ನಲಾಗಿದೆ.
ನೌಹಿರಾ ಶೇಖ್ ದೇಶದ ಪ್ರಮುಖ ನಗರಗಳಲ್ಲಿ ಬಂಡಾವಳ ಹೂಡಿಕೆ ಮಾಡುವ ಹೆಸರಿನಲ್ಲಿ ಜನರಿಂದ ಕೋಟಿ ಕೋಟಿ ರೂ. ಹಣ ಪಡೆದ ಆರೋಪ ಎದುರಿಸುತ್ತಾರೆ. ಈಗಾಗಲೇ ಮುಂಬೈ ಪೊಲೀಸರು ಬಾಡಿ ವಾರೆಂಟ್ ಪಡೆದು ನೌಹಿರಾ ಶೇಖ್ ವಿಚಾರಣೆಗೆ ಒಳಪಡಿಸಿದ್ದಾರೆ. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ತನ್ನನ್ನು ಪಾರು ಮಾಡುವಂತೆ ನೌಹಿರಾ ಶೇಖ್ ಗಾಲಿ ಜನಾರ್ದನ ರೆಡ್ಡಿ ಅವರ ಸಹಾಯಕೋರಿದ್ದರು.
ನೌಹಿರಾ ಶೇಖ್ ಅವರಿಗೆ ಸಹಾಯ ಮಾಡುವ ಭರವಸೆ ನೀಡಿದ್ದ ರೆಡ್ಡಿ ಕೋಟಿ ಕೋಟಿ ಹಣ ಪಡೆದಿದ್ದರು ಎನ್ನಲಾಗಿದೆ. ರೆಡ್ಡಿ ಅವರ ಆಪ್ತರ ಬ್ಯಾಂಕ್ ಖಾತೆಗೆ ಈ ಹಣ ಸಂದಾಯವಾಗಿದೆ ಎಂಬ ಮಾಹಿತಿಯೂ ಈಗ ಲಭ್ಯವಾಗಿದೆ. ಸದ್ಯ ರೆಡ್ಡಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತಳುಕು ಹಾಕಿಕೊಂಡಿರುವ ಆಂಬಿಡೆಂಟ್ ಕಂಪನಿ ಮಾಲೀಕ ಫರೀದ್ ಮೂಲಕ ಸಹಾಯ ಮಾಡಲು ಜನಾರ್ದನ ರೆಡ್ಡಿ ಮುಂದಾಗಿದ್ದರು ಎಂದು ಮೂಲಗಳು ತಿಳಿಸಿವೆ.