ಬೆಂಗಳೂರು:

ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿ, ತಪ್ಪಿಸಿಕೊಳ್ಳಲು ಯತ್ನಿಸಿದ ರೌಡಿಶೀಟರ್ ಒಬ್ಬ ಪೊಲೀಸರು ನಡೆಸಿದ ಶೂಟೌಟ್ಗೆ ಬಲಿಯಾಗಿದ್ದಾನೆ.
ಕೊಲೆ, ದರೋಡೆ, ಅಪಹರಣ, ಹಫ್ತಾ ವಸೂಲಿ ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ರೌಡಿಶೀಟರ್ ಸ್ಲಂ ಭರತ್ ಉತ್ತರ ಪ್ರದೇಶದಲ್ಲಿ ಬಂಧಿತನಾಗಿದ್ದ.
ಈತನನ್ನು ಬಂಧಿಸಿ ಬೆಂಗಳೂರಿಗೆ ಕರೆತರುವ ಸಂದರ್ಭದಲ್ಲಿ ಆತನ ಗ್ಯಾಂಗ್ ನಿಂದ ಪೊಲೀಸರ ಮೇಲೆ ಹಲ್ಲೆ ನಡೆಸಲಾಗಿತ್ತು. ಸ್ಲಂ ಭರತ್ ಕರೆತರುತ್ತಿದ್ದ ಕಾರ್ ಮೇಲೆ ಆತನ ಗ್ಯಾಂಗ್ ದಾಳಿ ಮಾಡಿದ್ದು ಈ ವೇಳೆ ಭರತ್ ಪರಾರಿಯಾಗಿದ್ದ.
ಕೂಡಲೇ ಕಾರ್ಯಪ್ರವೃತ್ತರಾದ ಬೆಂಗಳೂರು ಪೊಲೀಸರು ಆತನ ಬಂಧನಕ್ಕೆ ಎಲ್ಲೆಡೆ ಅಲರ್ಟ್ ಮಾಡಿದ್ದು, ಹೆಸರುಘಟ್ಟ ಬಳಿ ಭರತ್ ಪರಾರಿಯಾಗುತ್ತಿದ್ದ ಮಾಹಿತಿ ತಿಳಿದ ಪೊಲೀಸರು ಆತನ ಮೇಲೆ ಫೈರಿಂಗ್ ಮಾಡಿದ್ದರು. ಈ ವೇಳೆ ಭರತ್ ಲಾಂಗ್ ನಿಂದ ಹಲ್ಲೆ ಮಾಡಿ, ಪೊಲೀಸರ ಮೇಲೆ ಮೂರು ಸುತ್ತಿನ ಗುಂಡು ಹಾರಿಸಿದ್ದನು. ಪೊಲೀಸರು ಬುಲೆಟ್ ಪ್ರೂಫ್ ಜಾಕೆಟ್ ಹಾಕಿಕೊಂಡಿದ್ದರಿಂದ ಯಾವುದೇ ಅಪಾಯ ಸಂಭವಿಸಿಲ್ಲ. ನಂತರ ಪೊಲೀಸರು ತಮ್ಮ ಆತ್ಮರಕ್ಷಣೆಗಾಗಿ ಆತನ ಮೇಲೆ ಗುಂಡು ಹಾರಿಸಿದ್ದಾರೆ. ಗುಂಡಿನ ದಾಳಿಗೆ ಭರತ್ ನೆಲಕ್ಕೆ ಉರುಳಿದ್ದಾನೆ.
ತೀವ್ರವಾಗಿ ಗಾಯಗೊಂಡಿದ್ದ ಭರತ್ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








