ಎಕ್ಸಿಟ್ ಪೋಲ್ ಎಫೆಕ್ಟ್ : ಸೆನ್ಸೆಕ್ಸ್ ಭರ್ಜರಿ ಜಿಗಿತ!!!

ಮುಂಬೈ:

     6 ವಾರಗಳ ಸುದೀರ್ಘ ಲೋಕಸಭಾ ಚುನಾವಣೆ ಭಾನುವಾರ ಅಂತ್ಯವಾಗಿದ್ದು, ಈಗಾಗಲೇ ಚುನಾವಣೋತ್ತರ ಸಮೀಕ್ಷೆಗಳು  ಕೇಂದ್ರದಲ್ಲಿ ಮತ್ತೊಮ್ಮೆ ಎನ್​ಡಿಎ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂದು ತಿಳಿಸಿರುವ ಹಿನ್ನೆಲೆಯಲ್ಲಿ ಸೋಮವಾರ ಷೇರುಮಾರುಕಟ್ಟೆಯಲ್ಲಿ ಹೂಡಿಕೆದಾರರು ಹೆಚ್ಚಿನ ಉತ್ಸಾಹ ತೋರಿದ್ದು, ಸೆನ್ಸೆಕ್ಸ್​ 942 ಅಂಕ ಏರಿಕೆ ಕಂಡಿದೆ.

     ಇದೇ ವೇಳೆ ರೂಪಾಯಿ ಸಹ ಡಾಲರ್ ಎದುರು ಕೊಂಚ ಚೇತರಿಕೆ ಕಂಡಿದೆ. ಸೋಮವಾರ ಬೆಳಗ್ಗೆ ರೂಪಾಯಿ ಮೌಲ್ಯ 79 ಪೈಸೆ ಏರಿಕೆ ಕಂಡು ಬಂದಿದ್ದು, ಡಾಲರ್​ ಎದುರು ರೂಪಾಯಿ ಮೌಲ್ಯ 69.44 ಗೆ ತಲುಪಿದೆ. 

      ಶನಿವಾರ ಬೆಳಗ್ಗೆ ಷೇರು ವಹಿವಾಟು ಆರಂಭವಾಗುತ್ತಿದ್ದಂತೆ ಸೆನ್ಸೆಕ್ಸ್​ನಲ್ಲಿ ಏರಿಕೆ ಕಂಡು ಬಂದಿದ್ದು, ಬೆಳಗ್ಗೆ 10 ಗಂಟೆ ವೇಳೆಗೆ 845.33 ಅಂಕ ಏರಿಕೆಯಾಗಿದ್ದು, ಇಂದು ಬೆಳಗ್ಗೆ 11 ಗಂಟೆಯ ಸುಮಾರಿಗೆ ಸೆನ್ಸೆಕ್ಸ್‌ 929.33 ಅಂಕಗಳ ಏರಿಕೆಯೊಂದಿಗೆ 38,860.10 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 273.50 ಅಂಕಗಳ ಏರಿಕೆಯೊಂದಿಗೆ 11,680.70 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತಾಗಿದ್ದವು.

     ಗುರುವಾರ ಹೊರಬೀಳಲಿರುವ ಲೋಕಸಭಾ ಫಲಿತಾಂಶ ಮತ್ತು ಎಕ್ಸಿಟ್‌ ಪೋಲ್‌ ಸೆನ್ಸೆಕ್ಸ್ ಏರಿಳಿತಕ್ಕೆ ಕಾರಣವಾಗಲಿದ್ದು, ಜೊತೆಗೆ ವಿದೇಶಿ ಷೇರುಪೇಟೆ ಪ್ರಭಾವ ಕೂಡ ಇರಲಿದೆ. ಬಹುತೇಕ ಎಲ್ಲಾ ಸಮೀಕ್ಷೆಗಳು ಅತಂತ್ರ ಸರಕಾರದ ಸಾಧ್ಯತೆ ಇಲ್ಲವೆಂದು ಹೇಳಿರುವುದು ಷೇರು ಮಾರುಕಟ್ಟೆ ಮೇಲೆ ಧನಾತ್ಮಕ ಪರಿಣಾಮ ಬೀರಿದೆ.

       ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ