ಬೆಂಗಳೂರು
ರಾಜ್ಯದ ಚಲನಚಿತ್ರ ರಂಗದ ಅನಭಿಷಕ್ತ ದೊರೆ, ಕೇಂದ್ರದ ಮಾಜಿ ಸಚಿವ ರೆಬಲ್ ಸ್ಟಾರ್ ಅಂಬರೀಷ್ ನಿಧನಕ್ಕೆ ಅಭಿಮಾನಿಗಳು, ಚಿತ್ರೋದ್ಯಮದ ಗಣ್ಯರು, ರಾಜಕಾರಣಿಗಳು ಸೇರಿದಂತೆ ಬಹುತೇಕ ಎಲ್ಲಾ ವಲಯದ ಜನ ಸಮೂಹ ಮಮ್ಮಲ ಮರುಗುತ್ತಿದೆ.
ಸೋಮವಾರ ನಗರದ ಕಂಠೀರವ ಸ್ಟುಡಿಯೋದ ರಾಜ್ ಕುಮಾರ್ ಸಮಾಧಿ ಬಳಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂಬರೀಷ್ ಅವರ ಅಂತ್ಯ ಸಂಸ್ಕಾರ ನೆರವೇರಲಿದೆ.
ಬೆಂಗಳೂರು ಕಂಠೀರವ ಸ್ಟೇಡಿಯಂ ಹಾಗೂ ಮಂಡ್ಯದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಅಪಾರ ಜನಸ್ತೋಮ ಅಂಬರೀಷ್ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು.
ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಅಂಬರೀಶ್ ಅವರ ಪಾರ್ಥಿವ ಶರೀರವನ್ನು ಅಭಿಮಾನಿಗಳು ಮತ್ತು ಸಾರ್ವಜನಿಕರ ದರ್ಶನಕ್ಕಾಗಿ ಕಂಠೀರವ ಕ್ರೀಡಾಂಗಣದಲ್ಲಿ ಇಡಲಾಗಿತ್ತು. ಸಂಜೆ ಪಾರ್ಥಿವ ಶರೀರವನ್ನು ವಿಶೇಷ ಹೆಲಿಕಾಪ್ಟರ್ ಮೂಲಕ ಮಂಡ್ಯಕ್ಕೆ ತೆಗೆದುಕೊಂಡು ಹೋಗಿ, ಅಲ್ಲಿನ ಸರ್.ಎಂ. ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿಡಲಾಗಿದೆ. ಮಂಡ್ಯದಲ್ಲೂ ಅಪಾರ ಜನಸಾಗರ ನೆರೆದಿತ್ತು.
ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಇದಕ್ಕಾಗಿ ಪ್ರತ್ಯೇಕ ಹೆಲಿಕಾಪ್ಟರ್ ವ್ಯವಸ್ಥೆ ಮಾಡಿದ್ದರು. ಸ್ವತಃ ಸ್ಥಳದಲ್ಲಿದ್ದು ಎಲ್ಲಾ ರೀತಿಯ ಮೇಲುಸ್ತುವಾರಿ ನೋಡಿಕೊಂಡರು.
ಅಗಲಿದ ನಾಯಕನ ಗೌರವಾರ್ಥ ರಾಜ್ಯ ಸರ್ಕಾರ ಮೂರು ದಿನಗಳ ಶೋಕಾಚರಣೆ ಪ್ರಕಟಿಸಿದೆ. ಇಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಕನ್ನಡ, ತೆಲುಗು, ತಮಿಳು, ಮಳಯಾಳಂ ಸೇರಿದಂತೆ ಹಲವು ಮಠಾಧಿಪತಿಗಳು ತಮ್ಮ ಸಂತಾಪ ಸೂಚಿಸಿದ್ದಾರೆ ಅದರಲ್ಲಿ ಸಿದ್ದಗಂಗಾ ಮಠದ ಸ್ವಾಮಿಗಳು ಮತ್ತು ಇನ್ನೂ ಮುಂತಾದ ಮಠದ ಸ್ವಾಮಿಗಳು ವಿವಿಧ ಭಾಷೆಗಳ ಅನೇಕ ಚಿತ್ರನಟರು ಅಗಲಿದ ನಟನಿಗೆ ಅಂತಿಮ ಶ್ರದ್ಧಾಂಜಲಿ ಸಲ್ಲಿಸಿದರು.
ಅಂಬರೀಶ್ ಅವರ ನಿಧನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ, ಉಪರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು, ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ, ಲೋಕಸಭೆಯಲ್ಲಿನ ಕಾಂಗ್ರೆಸ್ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವೆ ಜಯಮಾಲಾ, ಸಚಿವ ಕೆ.ಜೆ. ಜಾರ್ಜ್ ಮೊದಲಾದವರು ಕಂಬನಿ ಮಿಡಿದಿದ್ದಾರೆ.
ಮಂಡ್ಯ ಜಿಲ್ಲೆಯಲ್ಲಿ ಅವರ ಅಸಂಖ್ಯಾತ ಅಭಿಮಾನಿಗಳು ಸಾರ್ವಜನಿಕ ಸ್ಥಳಗಳಲ್ಲಿ ಅಂಬರೀಶ್ ಅವರ ಭಾವಚಿತ್ರವನ್ನು ಇಟ್ಟು ಅಂತಿಮ ಶ್ರದ್ಧಾಂಜಲಿ ಸಲ್ಲಿಸುತ್ತಿರುವ ದೃಶ್ಯ ಎಲ್ಲಾ ಕಡೆ ಸಾಮಾನ್ಯವಾಗಿತ್ತು.
ಅಂಬರೀಶ್ ಅವರ ಹುಟ್ಟೂರು ಮಂಡ್ಯ ಜಿಲ್ಲೆಯ ದೊಡ್ಡರಸನಕೆರೆ ಗ್ರಾಮದಲ್ಲಿ ಮೌನ ಮಡುಗಟ್ಟಿದೆ. ಅವರೊಂದಿಗೆ ಕಳೆದ ಒಡನಾಟವನ್ನು ಗ್ರಾಮದ ಹಿರಿಯರು ನೆನಪಿಸಿಕೊಳ್ಳುತ್ತಿದ್ದಾರೆ. ಪ್ರತಿ ಬಾರಿ ಚುನಾವಣೆ ನಡೆದ ಸಮಯದಲ್ಲಿ ಅಂಬರೀಶ್ ಅವರು ಹುಟ್ಟೂರಿಗೆ ಆಗಮಿಸಿ, ಮತ ಚಲಾವಣೆ ಮಾಡುತ್ತಿದ್ದನ್ನು ಗ್ರಾಮಸ್ಥರು ಸ್ಮರಿಸಿಕೊಳ್ಳುತ್ತಿದ್ದಾರೆ. ನಾಳೆ ಕಂಠೀರವ ಕ್ರೀಡಾಂಗಣದಿಂದ ಮೆರವಣಿಗೆಯ ಮೂಲಕ ಕಂಠೀರವ ಸ್ಟುಡಿಯೋಗೆ ಪಾರ್ಥಿವ ಶರೀರವನ್ನು ತಂದು ಅಲ್ಲಿ ಅಂತ್ಯಕ್ರಿಯೆ ನೆರವೇರಿಸಲು ವ್ಯವಸ್ಥೆ ಮಾಡಲಾಗಿದೆ.
ಅಂಬರೀಶ್ ಅವರ ನಿಧನದ ಹಿನ್ನೆಲೆಯಲ್ಲಿ ಬೆಂಗಳೂರು ನಗರದಲ್ಲಿ ಭದ್ರತೆಗಾಗಿ 5ಸಾವಿರ ಪೆÇಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅಂಬರೀಶ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿರುವ ಕಂಠೀರವ ಕ್ರೀಡಾಂಗಣಕ್ಕೆ ಒಂದು ಸಾವಿರಕ್ಕೂ ಅಧಿಕ ಪೆÇಲೀಸರನ್ನು ನಿಯೋಜಿಸಲಾಗಿದೆ ಎಂದು ಸಂಚಾರ ವಿಭಾಗದ ಹೆಚ್ಚುವರಿ ಪೆÇಲೀಸ್ ಆಯುಕ್ತ ಹರಿಶೇಖರನ್ ತಿಳಿಸಿದರು.
ಎಲ್ಲಾ ಕಾರ್ಯಗಳು ಸುಗಮವಾಗಿ ನಡೆಯಲು ಬೇಕಾದ ವ್ಯವಸ್ಥೆಯನ್ನು ಮಾಡಲಾಗಿದೆ. ಗಣ್ಯ ವ್ಯಕ್ತಿಗಳು ಹಾಗೂ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಇವುಗಳೆಲ್ಲದರ ಉಸ್ತುವಾರಿಯನ್ನೂ ಸ್ವತಃ ತಾವೇ ವಹಿಸಿಕೊಂಡಿರುವುದಾಗಿ ಅವರು ಹೇಳಿದರು.
ನಾಳೆ ಪಾರ್ಥಿವ ಶರೀರದ ಮೆರವಣಿಗೆ ಹೋಗುವ ಪ್ರತಿ ಜಂಕ್ಷನ್ನಲ್ಲೂ ತಲಾ ಒಬ್ಬ ಇನ್ಸ್ಪೆಕ್ಟರ್ಗಳನ್ನು ನಿಯೋಜಿಸಲಾಗುತ್ತಿದೆ. ಸಾರ್ವಜನಿಕರಿಗೆ ಅಂಬರೀಶ್ ಅವರ ಪಾರ್ಥಿವ ಶರೀರಿದ ದರ್ಶನಕ್ಕೆ ಬೇಕಾದ ಅಗತ್ಯ ವ್ಯವಸ್ಥೆ ಮಾಡಲಾಗಿದೆ. ಕ್ರೀಡಾಂಗಣದಿಂದ ಕಾವೇರಿ ಜಂಕ್ಷನ್, ಯಶವಂತಪುರ ವೃತ್ತ, ಕಂಠೀರವ ಸ್ಟುಡಿಯೋವರೆಗೂ ಭದ್ರತೆ ಒದಗಿಸಲಾಗಿದೆ. ಭದ್ರತೆಗೆ ಆರೆಎಫ್ ಪಡೆಯನ್ನು ಕೂಡ ಬಳಸಲಾಗುತ್ತಿದೆ ಎಂದು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
