ಬೆಂಗಳೂರು :
ಹೆಸರಾಂತ ಕನ್ನಡ ನಾಟಕಕಾರ ಮತ್ತು ನಟ. ತಮ್ಮ ಪರಿಣಾಮಕಾರಿ ಭಾಷಣ ಶೈಲಿಯಿಂದ ಜನಮನವನ್ನು ಗೆದ್ದು ರಾಜಕೀಯ ಮತ್ತು ಭ್ರಷ್ಟಾಚಾರಗಳನ್ನು ಟೀಕಿಸಿದ ನಟ ಮಾಸ್ಟರ್ ಹೀರಣ್ಣಯ್ಯ(84) ನಿಧನರಾಗಿದ್ದಾರೆ.
ಫೆಬ್ರವರಿ 15, 1934ರಂದು ಮೈಸೂರಿನಲ್ಲಿ ಮಾಸ್ಟರ್ ಹಿರಣಯ್ಯ ಜನಿಸಿದ್ದರು. ಹಿರಣ್ಣಯ್ಯರ ಬಾಲ್ಯದ ಹೆಸರು ನರಸಿಂಹ ಮೂರ್ತಿ. ಇವರು ಕೆ.ಹಿರಣ್ಣಯ್ಯ ಮತ್ತು ಶಾರದಮ್ಮ ದಂಪತಿಯ ಒಬ್ಬನೇ ಮಗ.
ಮಾಸ್ಟರ್ ಹಿರಣ್ಣಯ್ಯನವರು ಬಾಲ್ಯದಲ್ಲಿರುವಾಗ ಅವರ ತಂದೆ ಮದರಾಸಿನಲ್ಲಿ ಬದುಕನ್ನರಸಿ ತಮ್ಮ ಕುಟುಂಬ ಸಮೇತರಾಗಿ ವಾಸವಾಗಿದ್ದರು. ಹೀಗಾಗಿ ಅಲ್ಲಿ ಅವರಿಗೆ ತಮಿಳು, ತೆಲುಗು ಮತ್ತು ಇಂಗ್ಲಿಷ್ ಭಾಷೆಗಳ ಅಭ್ಯಾಸವಾಯಿತು. ಜೊತೆ ಜೊತೆಗೆ ಮನೆಯಲ್ಲಿ ಕನ್ನಡದ ಬಾಯಿಪಾಠ ಮತ್ತು ಸಂಸ್ಕೃತದ ಸ್ತೋತ್ರ ಪಾಠ ಕೂಡಾ ನಡೆಯಿತು. ನಂತರದಲ್ಲಿ ಮೈಸೂರಿಗೆ ಬಂದು ಸೇರಿದ್ದು ಬನುಮಯ್ಯ ಮಾಧ್ಯಮಿಕ ಶಾಲೆ. `ಸಾಧ್ವಿ’, `ಮೈಸೂರು ಪತ್ರಿಕೆ’ಯನ್ನು ಮನೆ ಮನೆಗೆ ಹಂಚಿ ಆ ಸಂಪಾದನೆಯಿಂದ ಶಾಲಾ ಪರೀಕ್ಷೆಗಳ ಶುಲ್ಕಕ್ಕೆ ದಾರಿ ಮಾಡಿಕೊಂಡಿದ್ದರು.
ತಂದೆ ಕೆ. ಹಿರಣ್ಣಯ್ಯನವರು ೧೯೪೦ರಲ್ಲಿ ರಚಿಸಿ, ನಿರ್ದೇಶಿಸಿದ ಚಲನಚಿತ್ರ ‘ವಾಣಿ’ಯಲ್ಲಿ ಹಿರಣ್ಣಯ್ಯನವರು ಪಾದಾರ್ಪಣೆ ಮಾಡಿದರು. 1948ರಲ್ಲಿ ರಂಗಭೂಮಿಯಲ್ಲಿ ಚಿಕ್ಕ ಪಾತ್ರಮಾಡಲು ಹೋಗಿ ಸೋತರೂ ಛಲದಿಂದ ಕಾಲೇಜಿನಲ್ಲಿ ಸಂಘ ಕಟ್ಟಿ ‘ಆಗ್ರಹ’ ಎಂಬ ನಾಟಕವನ್ನು ಪ್ರದರ್ಶಿಸಿದರು. ಅದ್ಭುತ ಅಭಿನಯದಿಂದ ನಾಟಕವೇನೋ ಗೆದ್ದಿತು.
ನಾಟಕಗಳಲ್ಲೊಂದಾದ ದೇವದಾಸಿ ಚಲನಚಿತ್ರವಾಗಿದ್ದು, ಅದರಲ್ಲಿ ಹಿರಣ್ಣಯ್ಯನವರು ಪಾತ್ರ ವಹಿಸಿದ್ದರು. ಸಂಪ್ರದಾಯ, ಆನಂದ ಸಾಗರ ಚಿತ್ರಗಳಲ್ಲಿ ನಟಿಸಿದ್ದಾರೆ. ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಪುಣ್ಯಕೋಟಿ, ಅಮೃತ ವಾಹಿನಿ ಧಾರಾವಾಹಿಗಳಲ್ಲಿಯೂ ಮಾಸ್ಟರ್ ಹಿರಣ್ಣಯ್ಯನವರು ಅಭಿನಯಿಸುತ್ತಿದ್ದರು.
1953 ರಲ್ಲಿ ತಂದೆಯವರು ನಿಧನರಾದಾಗ, ‘ಕೆ. ಹಿರಣ್ಣಯ್ಯ ಮಿತ್ರ ಮಂಡಲಿ’ಯನ್ನು ತಾವೇ ವಹಿಸಿಕೊಂಡು ನಿರಂತರವಾಗಿ ಮುನ್ನಡೆಸಿದರು. ತಂದೆಯ ಮರಣದ ನಂತರ ಅ.ನ.ಕೃ. ಮತ್ತು ಮಿತ್ರರ ಸಹಾಯದಿಂದ ನಾಟಕ ಕಂಪನಿ ಕಟ್ಟಿದರು. ಆದರೆ ಅನುಭವಿಸಿದ್ದು ನಷ್ಟ ಮಾತ್ರ.
ತಂದೆಯವರು ನಡೆಸುತ್ತಿದ್ದ ‘ಹಿರಣ್ಣಯ್ಯ ಮಿತ್ರ ಮಂಡಲಿ’ಯನ್ನು ಪುನಃ ಆರಂಭಿಸಿ ‘ಲಂಚಾವತಾರ’ ನಾಟಕವನ್ನು ರಚಿಸಿ ರಂಗ ಪ್ರಯೋಗ ಮಾಡಿದರು. ಜನಪ್ರಿಯತೆಯ ಜೊತೆಗೆ ಮಹಾರಾಜರಿಂದ ಸನ್ಮಾನ ಮತ್ತು ‘ನಟರತ್ನಾಕರ’ ಬಿರುದು ಬಂತು. ನಂತರ ‘ನಡುಬೀದಿ ನಾರಾಯಣ’ದಲ್ಲಿ ತೀರ್ಥರೂಪುವಾಗಿ, ‘ಭ್ರಷ್ಟಾಚಾರ’ದಲ್ಲಿ ಧಫೇದಾರ್ ಮುರಾರಿಯಾಗಿ, ‘ಸದಾರಮೆ’ಯಲ್ಲಿ ಕಳ್ಳನಾಗಿ, ಆದಿಮೂರ್ತಿಯಾಗಿ, ‘ಕಪಿಮುಷ್ಠಿ’ಯಲ್ಲಿ ಜಾರ್ಜ್ ಆಗಿ, ಕಸ್ತೂರಿಯಾಗಿ, ‘ಮಕ್ಮಲ್ ಟೋಪಿ’ಯಲ್ಲಿ ನಾಣಿಯಾಗಿ ಹಿರಣ್ಣಯ್ಯನವರು ಜನರನ್ನು ಅಪಾರವಾಗಿ ಆಕರ್ಷಿಸಿದರು. ಈ ನಾಟಕಗಳೇ ಅಲ್ಲದೆ ‘ದೇವದಾಸಿ’, ‘ಅನಾಚಾರ’, ‘ಅತ್ಯಾಚಾರ’, ‘ಕಲ್ಕ್ಯಾವತಾರ’, ‘ಅಮ್ಮಾವ್ರ ಅವಾಂತರ’, ‘ಪುರುಷಾಮೃಗ’ ಹೀಗೆ ಇಪ್ಪತ್ತೈದಕ್ಕೂ ಹೆಚ್ಚು ನಾಟಕಗಳನ್ನು ರಂಗಕ್ಕೆ ತಂದು ಅವರು ಗಳಿಸಿದ ಕೀರ್ತಿ ಅಪಾರವಾದುದು. ಅವರ ‘ಲಂಚಾವತಾರ’ ನಾಟಕವೊಂದೇ 10,000ಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡ ದಾಖಲೆಯನ್ನು ನಿರ್ಮಿಸಿದೆ.
ಮಾಸ್ಟರ್ ಹಿರಣ್ಣಯ್ಯನವರಿಗೆ ಹಲವಾರು ಬಿರುದುಗಳೂ, ಅತ್ಯುನ್ನತ ರಂಗ ಪ್ರಶಸ್ತಿಯಾದ ಡಾ. ಗುಬ್ಬೀ ವೀರಣ್ಣ ಪ್ರಶಸ್ತಿಯೂ ಸೇರಿದಂತೆ ಹಲವಾರು ಪ್ರಶಸ್ತಿಗಳು ಲಭ್ಯವಾಗಿವೆ. ಇವೆಲ್ಲಕ್ಕೂ ಮಿಗಿಲಾಗಿ ದೇಶ ವಿದೇಶಗಳಲ್ಲಿರುವ ಕನ್ನಡಿಗರು ಅವರ ನಾಟಕಗಳನ್ನೂ ಅವರನ್ನೂ ನಿರಂತರವಾಗಿ ಗೌರವಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ