ಬೆಳಗಾವಿ:
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿಚಾರಕ್ಕೆ ಸಂಬಂಸಿದಂತೆ ಕಿಡಿಗೇಡಿ ಮರಾಠಿಗರು ಕನ್ನಡ ಹೋರಾಟಗಾರರ ಮೇಲೆ ಚಪ್ಪಲಿ ತೂರಿದಂತ ಘಟನೆ ನಡೆದಿದೆ.
ಪೀರನವಾಡಿಯಲ್ಲಿ ರಾಯಣ್ಣನ ಪ್ರತಿಮೆ ಮರುಸ್ಥಾಪನೆ ವಿಚಾರ ದಿನೇ ದಿನೇ ಕಾವೇರುತ್ತಿದೆ. ಇಂದು ಪೀರನವಾಡಿಯಲ್ಲಿ ರಾಯಣ್ಣನ ಪ್ರತಿಮೆ ಪುನರ್ ನಿರ್ಮಾಣ ಸಂಬಂಧ ಕನ್ನಡಿಗರು ನಡೆಸುತ್ತಿದ್ದಂತ ಪ್ರತಿಭಟನೆಯ ವೇಳೆ ಮರಾಠಿಗರು ಕನ್ನಡಿಗರ ಮೇಲೆ ಚಪ್ಪಲಿ ಎಸಿದಿದ್ದಾರೆ.
ಈ ಹಿನ್ನೆಲೆಯಲ್ಲಿ ಬೆಳಗಾವಿ ತಾಲೂಕಿನ ಪೀರನವಾಡಿಯಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಗೊಂಡಿದ್ದು, ಗುಂಪು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ.
ಪೀರನವಾಡಿ ವೃತ್ತದಲ್ಲಿ ತೆರವಾಗಿದ್ದ ಸ್ಥಳದಲ್ಲಿಯೇ ಕನ್ನಡಪರ ಸಂಘಟನೆಯವರು ರಾಯಣ್ಣನ ನಿಂತ ಭಂಗಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಿದರು. ಈ ವಿಷಯ ತಿಳಿಯುತ್ತಿದ್ದಂತೆ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ ಪ್ರತಿಷ್ಠಾಪಿಸಲು ಕೆಲ ಮರಾಠಿ ಯುವಕರು ಯತ್ನಿಸಿದರು.
ನಮಗೂ ಶಿವಾಜಿ ಮೂರ್ತಿ ಸ್ಥಾಪಿಸಲು ಅವಕಾಶ ಮಾಡಿ ಕೊಡಿ ಎಂದು ಕ್ಯಾತೆ ತೆಗೆಯುತ್ತ ಸ್ಥಳದಲ್ಲಿ ನೂರಾರು ಮರಾಠಿ ಯುವಕರು ಜಮಾಯಿಸಿದ್ದರು. ರಾಯಣ್ಣರ ಪ್ರತಿಮೆ ನಿರ್ಮಿಸಿದ್ದಕ್ಕೆ ಸ್ಥಳೀಯ ಮರಾಠಿಗರೂ ವಿರೋಸುತ್ತ ಘೋಷಣೆ ಕೂಗುತ್ತಿದ್ದರು.
ರಾಯಣ್ಣ ಪ್ರತಿಮೆ ಬಳಿ ಕನ್ನಡ ಹೋರಾಟಗಾರರೂ ಸೇರಿದ್ದರು. ಈ ವೇಳೆ ಎರಡೂ ಗುಂಪಿನ ನಡುವೆ ವಾಗ್ದಾದ ನಡೆಯಿತು. ಇದೇ ವೇಳೆ ಮರಾಠಿ ಯುವಕರು ಗುಂಪು ಕಟ್ಟಿಕೊಂಡು ಕನ್ನಡಿಗರ ಮೇಲೆ ಚಪ್ಪಲಿ ಎಸೆದು; ದಾಂಧಲೆ ನಡೆಸಿದರು. ಮರಾಠಿ ಪುಂಡರ ಅಟ್ಟಹಾಸ ಮಿತಿ ಮೀರುತ್ತಿದ್ದಂತೆ ಪರಿಸ್ಥಿತಿ ನಿಯಂತ್ರಿಸಲು ಲಾಠಿ ಬೀಸಿದ ಪೊಲೀಸರು ಗುಂಪುಗಳನ್ನು ಚದುರಿಸಿದರು.
ಪೀರನವಾಡಿಯಲ್ಲಿ ಬಿಗುವಿನ ವಾತಾವರಣವಿದ್ದು, ಇದೀಗ ಮುಂಜಾಗ್ರತಾ ಕ್ರಮವಾಗಿ ಪೀರನವಾಡಿಗೆ ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ