ಹುಬ್ಬಳ್ಳಿ :
ಮದ್ಯ ಸಿಗದೆ ಸ್ಯಾನಿಟೈಸರ್ ಕುಡಿದು ಒಂದೇ ದಿನ ಅಕ್ಕ – ತಮ್ಮ ಮೃತಪಟ್ಟ ಘಟನೆ ಕಲಘಟಗಿ ತಾಲೂಕಿನ ಗಂಬ್ಯಾಪುರ ಗ್ರಾಮದಲ್ಲಿ ನಡೆದಿದೆ.
ಗಂಬ್ಯಾಪುರ ಗ್ರಾಮದ ನಿವಾಸಿ ಬಸವರಾಜ್ ಕುರುವಿನಕೊಪ್ಪ (45) ಈತನ ಸಹೋದರಿ ಜಂಬಕ್ಕ ಕಟ್ಟಿಮನಿ (47) ಸ್ಯಾನಿಟೈಸರ್ ಕುಡಿದು ಸಾವನ್ನಪ್ಪಿದ ಮೃತ ದುರ್ದೈವಿಗಳು.
ಲಾಕ್ ಡೌನ್ ವಿಧಿಸಿದಾಗಿನಿಂದ ಇವರಿಗೆ ಮದ್ಯ ಸಿಕ್ಕಿರಲಿಲ್ಲ. ಮದ್ಯ ವ್ಯಸನಿಗಳಾಗಿದ್ದ ಈ ಇಬ್ಬರೂ ತಿಂಗಳಿನಿಂದ ಮದ್ಯ ಸಿಗದೇ ಪರದಾಡಿದ್ದಾರೆ. ಕೊನೆಗೆ ಬೇರೆ ದಾರಿ ಹಿಡಿದು ಮೂರು ದಿನಗಳಿಂದ ಸ್ಯಾನಿಟೈಸರ್ ಸೇವಿಸಲು ಆರಂಭಿಸಿದ್ದರು. ಸ್ಯಾನಿಟೈಸರ್ ಕುಡಿದ ಪರಿಣಾಮ ಮೂರು ದಿನಗಳ ಹಿಂದೆ ಅಸ್ವಸ್ಥಗೊಂಡಿದ್ದರು. ತೀವ್ರವಾಗಿ ಅಸ್ವಸ್ಥಗೊಂಡಿದ್ದ ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಕಲಘಟಗಿ ಠಾಣೆ ಪೊಲೀಸರು ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ದೇಶಾದ್ಯಂತ ಲಾಕ್ ಡೌನ್ ಜಾರಿಯಲ್ಲಿರುವುದರಿಂದ ಮದ್ಯ ಮಾರಾಟ ಬಂದ್ ಆಗಿದೆ. ಮದ್ಯ ಮಾರಾಟಕ್ಕೂ ನಿಷೇಧ ಹೇರಲಾಗಿದೆ. ಈ ನಡುವೆ ಹುಬ್ಬಳ್ಳಿಯಲ್ಲಿ ಲಾಕ್ ಡೌನ್ ಸಮಯದಲ್ಲಿ ಕೆಲವರು ಸ್ಯಾನಿಟೈಸರ್ ಗಳನ್ನು ಸೇವಿಸುತ್ತಿರುವ ಸಂಗತಿಗಳೂ ನಡೆಯುತ್ತಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
