ಮೊಬೈಲ್‍ನಲ್ಲೆ ಮಕ್ಕಳ ಸ್ಕೂಲ್ : ನಾದ ನಿಲ್ಲಿಸಿದ ಶಾಲಾ ಬೆಲ್

       ಸುಮಾರು ಒಂದೂವರೆ ವರ್ಷಗಳು ಕಳೆದಿರಬಹುದು ಮಕ್ಕಳಿಗೆ ಶಾಲೆಯ ನೆನಪು ಉಳಿಯುವಂತೆ ಮಾಡುತ್ತಿರುವುದು ಸಂಚಾರಿ ದೂರವಾಣಿ ಶಿಕ್ಷಣ. ಪಾಪ ಬಡ ವಿದ್ಯಾರ್ಥಿಗಳು, ಕುರಿ ಕಾಯುವ ಕುರಿಗಾಹಿಗಳು, ಹಳ್ಳಿಗಾಡಿನ ರೈತಾಪಿ ಜನ, ಅಪ್ಪ ಅಮ್ಮಂದಿರಿಗೆ ದುಂಬಾಲು ಬಿದ್ದು ಸಾಲಸೋಲ ಮಾಡಿ ಇವರಿಗೊಂದು ಮನೆಯಲ್ಲೇ ಕೂತು ಶಿಕ್ಷಣವನ್ನು ಕಲಿಯುವಂತೆ ಮಾಡಲು ಪ್ರಪಂಚದ ಮೂಲೆ ಮೂಲೆಯನ್ನು ತಿಳಿಯಲು ಬೆರಳಾಡಿಸಿದರೆ ಬದುಕಲೂಬಹುದು, ಹಾಳಾಗಲೂಬಹುದಾದ ಮೊಬೈಲ್ ಎಂಬ ಮಾಯಾಪೆಟ್ಟಿಗೆಯನ್ನು ಕೊಡಿಸುತ್ತಾರೆ.

ಶೈಕ್ಷಣಿಕ ಸ್ಥಿತಿ ಡೋಲಾಯಮಾನ :

     ದೇಶದಲ್ಲಿ ಆಯ್ದ ರಾಜ್ಯಗಳಲ್ಲಿ ಅನ್‍ಲಾಕ್ ಪ್ರಕ್ರಿಯೆ ಜಾರಿಯಾಯಿತು. ಸಮಾಜದ ಎಲ್ಲ ವ್ಯಾಪಾರಗಳು ಶೇಕಡಾ ನೂರರಷ್ಟು ತೆರೆಯಲು ಸರ್ಕಾರವೇನೋ ಅನುಮತಿ ನೀಡಿತು. ಆದರೆ ಶೈಕ್ಷಣಿಕ ಕ್ಷೇತ್ರಕ್ಕೆ ಯಾವುದೇ ರೀತಿಯ ಅನುಮತಿ ನೀಡದೆ ಈ ವರ್ಷವೂ ಮಕ್ಕಳ ಶೈಕ್ಷಣಿಕ ಸ್ಥಿತಿ ಡೋಲಾಯಮಾನವಾಗುವ ಸಂದರ್ಭ ಎದುರಾಗಿದ್ದು, ಈಗಿರುವ ಸಂಕಷ್ಟ ಮುಂದುವರಿಯುತ್ತದೆಯೋ ಇಲ್ಲವೋ ಎಂಬ ಪ್ರಶ್ನೆ ಪೋಷಕರಲ್ಲಂತೂ ಮೂಡುತ್ತಿದೆ. ಭವಿಷ್ಯದ ಕನಸುಗಳನ್ನು ಹೊತ್ತ ನಮ್ಮ ಮಕ್ಕಳು ಈ ದೇಶದ ಭಾವಿ ಪ್ರಜೆಗಳು ಹೌದು. ಕೊರೋನಾ ಮಹಾಮಾರಿಯು ಮಕ್ಕಳ ಭವಿಷ್ಯವನ್ನು ಅತಂತ್ರ ಸ್ಥಿತಿಯಲ್ಲಿಟ್ಟಿದೆ.

ಮಕ್ಕಳನ್ನು ಶಾಲೆಗೆ ಬಿಡುವ ಸಂಭ್ರಮ ಮಾಯ :

      ಶಾಲಾಗಂಟೆ ದೂರದಲ್ಲೆಲ್ಲೊ ಬಾರಿಸಿದರೆ ಒಂದೆರಡು ನಿಮಿಷ ತಡವಾಗಿ ಮಗನನ್ನೊ, ಮಗಳನನ್ನೊ ಸ್ಕೂಟರ್‍ನಿಂದ ಇಳಿಸಿದ ತಂದೆ ತಾಯಿಗಳು ಬೇಗ ಬೇಗನೆ ಹೆಜ್ಜೆ ಹಾಕಿ ತರಗತಿಗಳ ಕಡೆಗೆ ಕರೆದೊಯ್ಯುತ್ತಿದ್ದರು. ಇವರುಗಳ ಮುಖದಲ್ಲಿ ಆತುರದ ನಿಟ್ಟುಸಿರು ಕಾಣುತ್ತಿತ್ತು. ಕೆಲವು ತಾಯಂದಿರು ತಮ್ಮ ಮಕ್ಕಳನ್ನು ದರದರ ಎಳೆದುಕೊಂಡು ಸ್ಕೂಲ್‍ವ್ಯಾನ್ ನಿಲ್ಲಿಸುವ ಸ್ಟಾಪ್‍ನತ್ತ ಹೆಜ್ಜೆ ಹಾಕುತ್ತಿದ್ದರು. ಆಗ ಕೆಲವು ಮಕ್ಕಳು ಅಳುತ್ತಿದ್ದರೆ, ಇನ್ನೂ ಕೆಲವು ಖುಷಿಖುಷಿಯಿಂದ ಹೋಗುತ್ತಿದ್ದ ಆ ಸಮಯವನ್ನು ಕೊರೋನಾ ಮರೆಸಿದೆ. ನಮ್ಮ ಪೆÇೀಷಕರು ಇದರಿಂದ ಹೊರತೇನಲ್ಲ. ಅಯ್ಯೋ ನಮ್ಮ ಮಕ್ಕಳಿಗೆ ಒಂದೂವರೆ ವರ್ಷ ಹಾಳಾಯಿತು ಎಂದು ಮಾತನಾಡಿಕೊಳ್ಳುತ್ತಾರೆ ವಿನಹ ಇದುವರೆವಿಗೂ ಯಾವ ಪೋಷಕರೂ ತಮ್ಮ ಅಭಿಪ್ರಾಯಗಳನ್ನು ಯಾವ ಮಾಧ್ಯಮಗಳ ಮುಂದೆಯೂ ವ್ಯಕ್ತಪಡಿಸಿದಂತೆ ಕಾಣುತ್ತಿಲ್ಲ.

ಶಾಲೆಯ ಗಂಟೆಗಳು ಸ್ತಬ್ಧ :

      ಸರ್ಕಾರ ಶಿಕ್ಷಕರಿಗೆನೋ ವಿದ್ಯಾಗಮ ಮಾಡಿ ಎಂದಿತು. ಆಗ ಅರಳಿ ಮರದ ಕೆಳಗೆ, ದೇವಸ್ಥಾನದ ಬಳಿ ಸಮುದಾಯ ಭವನಗಳ ಬಳಿ ಆಯ್ದ ಮಕ್ಕಳನ್ನು ಕೂರಿಸಿಕೊಂಡು ವಾರಕ್ಕೆ ಎರಡು ಮೂರು ಬಾರಿ ಪಾಠ ಪ್ರವಚನಗಳು ಶುರುವಾದವು. ಮಕ್ಕಳು ಕಲಿಯಲು ಬರಬೇಕಲ್ಲವೆ ಇದಕ್ಕೆ ಪೋಷಕರು ಧೈರ್ಯದಿಂದ ಮಕ್ಕಳನ್ನು ಎಲ್ಲಾ ನಿಯಮಗಳೊಂದಿಗೆ ಶಾಲೆಗೆ ಕಳುಹಿಸಿಕೊಡುವ ಮನಸ್ಸು ಮಾಡಬೇಕಿದೆ. ಶಾಲೆಯ ಗಂಟೆಗಳು ಸ್ತಬ್ಧವಾಗಿವೆ ಕೆಲವೇ ಕೆಲವು ಖಾಸಗಿ ಸಂಸ್ಥೆಗಳು ಆನ್‍ಲೈನ್ ಶಿಕ್ಷಣವನ್ನು ನೀಡುತ್ತಿವೆಯಾದರೂ ಮಕ್ಕಳು ಶಾಲೆಗೆ ಹೋಗಿ ಶಿಕ್ಷಕರ ಮುಂದೆ ಕುಳಿತು ಸ್ನೇಹಿತರ ಜತೆಯಲ್ಲಿ ತಮ್ಮ ಪಠ್ಯಪುಸ್ತಕದ ವಿಚಾರಗಳ ಬಗ್ಗೆ ನೇರ ಚರ್ಚೆ ನಡೆಸಿ ವಿಷಯವನ್ನು ಜೀರ್ಣಿಸಿಕೊಳ್ಳುವ ರೀತಿ ಆನ್‍ಲೈನ್ ಮೂಲಕ ಆಗದು. ನಮ್ಮ ಶಾಲೆಯಲ್ಲಿ ಗಂಟೆ ನೆನಪಿನ ರಾಯಭಾರಿಯಾಗಿ ಪ್ರತಿಯೊಬ್ಬ ಮಕ್ಕಳಿಗೂ ಪ್ರತಿಯೊಬ್ಬ ಶಿಕ್ಷಕರಿಗೂ ಜಾಗೃತಿ ಮೂಡಿಸುವ ಸಾಧನವಾಗಿತ್ತು. ಶಾಲೆಯ ಹೆಡ್‍ಮಾಸ್ಟರ್ ಕೋಣೆಯ ಎದುರು ತೂಗಿಹಾಕಿದ ಗಂಟೆಗೆ ಈ ಎಲ್ಲದರ ಅನ್ಯೋನ್ಯ ಅನುಬಂಧವಿದೆ. ಇದು ಧ್ವನಿ ಸಂಬಂಧಕ್ಕೆ ಈ ಕ್ಷಣ ಚುರುಕು ಮುಟ್ಟಿಸುವ ಒಂದು ಸ್ಪಂದನ. ನಮ್ಮ ಶಾಲಾ ದಿನಗಳನ್ನು ನೆನಪಿಸಿಕೊಂಡರೆ ಈ ಗಂಟೆ ಒಂದು ರೂಪಕವಾಗಿ ನಮ್ಮೊಳಗೆ ನಿಂತಿದೆ. ಹಳೆಯ ರೈಲ್ವೆ ಕಂಬಿಯ ತುಂಡನ್ನು ನಮ್ಮ ಶಾಲೆಯ ಗೋಡೆಗೆ ನೇತು ಹಾಕಿ ಸಣ್ಣ ಸುತ್ತಿಗೆಯಿಂದ ಬಾರಿಸುತ್ತಿದ್ದರೆ ಇದರ ನಾದದಲ್ಲೂ ಶಿಸ್ತಿನ ತೂಕವಿದೆ. ಈಗ ಬಿಡಿ ವಿದ್ಯುತ್ ಚಾಲಿತ ಗಂಟೆ ಎಲ್ಲೆಡೆ ತನ್ನ ಧ್ವನಿಯನ್ನು ಹಾರಾಡಿಸುತ್ತದೆ. ಇದರ ನಾದ ಕೇಳಿಸಿಕೊಂಡು ಮಕ್ಕಳು ವರ್ಷಗಳೇ ಕಳೆಯಿತು.

ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ :

      ಕೊರೋನಾ ಬಂದ ನಂತರ ನಮ್ಮೊಳಗಿನ ನಮ್ಮ ಬಂಧುಗಳೇ ಸಾವು ನೋವುಗಳನ್ನು ಅನುಭವಿಸಿ ಆಯಿತು. ಇನ್ನು ಮೂರನೇ ಅಲೆ ಮಕ್ಕಳಿಗೆ ಬರುತ್ತದೆಂದು ತಜ್ಞರು ಹೇಳುತ್ತಿದ್ದರೂ ಸರ್ಕಾರಗಳು ಇದಕ್ಕೆ ಪೂರ್ವಭಾವಿ ತಯಾರಿ ನಡೆಸಿದಂತೆ ಕಾಣುತ್ತಿಲ್ಲ. ಕಾರಣ ಶಾಲೆಗಳನ್ನು ತೆರೆಯಲು ಅನುಮತಿ ನೀಡುತ್ತಿಲ್ಲ. ನಮ್ಮ ಪೋಷಕರು ಆನ್‍ಲೈನ್ ಶಿಕ್ಷಣಕ್ಕೆ ಮಕ್ಕಳನ್ನು ಈಗಾಗಲೇ ಹೊಂದಿಸಿ ಬಿಟ್ಟಿದ್ದಾರೆ ಆನ್‍ಲೈನ್ ಶಿಕ್ಷಣ ವ್ಯವಸ್ಥೆಯಿಂದ ಮಕ್ಕಳಿಗೆ ಶಿಕ್ಷಣ ದೊರೆಯುತ್ತಿದೆಯಾದರೂ ಶಾಲೆಯಲ್ಲಿ ಕಲಿಯುವ, ಸ್ನೇಹಿತರ ಜೊತೆಯಲ್ಲಿ ಬೆರೆಯುವ, ತಮ್ಮ ನೋಟ್ಸ್ ಹಂಚಿಕೊಳ್ಳುವ, ಪ್ರಯೋಗಾಲಯಗಳಲ್ಲಿ ನಡೆಸುವ ಪ್ರಯೋಗಗಳು, ಹೀಗೆ ಹತ್ತು ಹಲವಾರು ಉಪಯೋಗಗಳಿಂದ ವಂಚಿತರಾಗುತ್ತಿದ್ದಾರೆ. ಇದರಿಂದ ಕೆಲವು ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಪರಿಣಾಮಗಳೂ ಆಗಿವೆ. ಕೆಲವು ಮಕ್ಕಳಿಗೆ ದೃಷ್ಟಿಯ ಮೇಲೆ ಪರಿಣಾಮ ಆಗಿದೆ. ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ನಮ್ಮ ಪೋಷಕರು ಚಿಂತೆ ಮಾಡದೆ ಚಿಂತನೆ ಮಾಡುವ ಕಾರ್ಯವಾಗಬೇಕಿದೆ

ಸರ್ಕಾರಿ ಶಾಲೆಗಳಿಗೆ ಮತ್ತೆ ಡಿಮ್ಯಾಂಡ್ :

     ಏನೇ ಆಗಲಿ ಇವೆಲ್ಲದರ ನಡುವೆ ನಮ್ಮ ಸರ್ಕಾರಿ ಶಾಲೆಗಳಿಗೆ ಈ ವರ್ಷ ಮಕ್ಕಳ ದಾಖಲಾತಿ ಅತಿ ಹೆಚ್ಚು ಆಗುತ್ತಿದ್ದು, ಈಗಾಗಲೇ ಗುಬ್ಬಿ ತಾಲ್ಲೂಕಿನಲ್ಲಿ ಸರ್ಕಾರಿ ಶಾಲೆಗಳಿಗೆ ಶೇ.78 ರಷ್ಟು ದಾಖಲಾತಿ ಆಗಿದೆ. ಖಾಸಗಿ ಶಾಲೆಗಳಿಗೆ ಶೇಕಡಾ 35 ರಿಂದ 38 ರವರೆಗೆ ದಾಖಲಾತಿಯಾಗಿದೆ. ಈ ವಿಷಯದ ಬಗ್ಗೆ ಕೂಲಂಕುಷವಾಗಿ ನೋಡಿದಾಗ ಅನಿಸಿದ್ದೆನೆಂದರೇ ಮಕ್ಕಳು ಶಾಲೆಗಳನ್ನು ನೋಡಿ ಹೀಗೆ ಸುಮಾರು ಒಂದು ಒಂದೂವರೆ ವರ್ಷಗಳೇ ಕಳೆದುಹೋದವು ಎನ್ನುವ ಅಭಿಪ್ರಾಯ ಪೋಷಕರದ್ದು. ಖಾಸಗಿ ಶಾಲೆಯವರು ಆನ್‍ಲೈನ್ ಶಿಕ್ಷಣದ ವ್ಯವಸ್ಥೆಗೆ ಶಾಲಾ ಶುಲ್ಕವನ್ನು ಇಂತಿಷ್ಟು ಎಂದು ನಿಗದಿಗೊಳಿಸಿದ್ದಾರೆ. ಆದರೆ ಮೊಬೈಲ್ ಮೂಲಕ ಮಕ್ಕಳು ಏನು ಕಲಿತಾವು? ಅಲ್ಲಿ ನಾವು ಮಕ್ಕಳ ಮೇಲೆ ನಿಗಾ ಇಟ್ಟಿರಬೇಕು.

      ಸರ್ಕಾರಿ ಶಾಲೆಗಳಲ್ಲಿ ವಿದ್ಯಾಗಮ ಎಂದು ವಾರಕ್ಕೆ 2-3 ದಿನಗಳ ಕಾಲ ಮಕ್ಕಳಿಗೆ ಪಾಠ ಪ್ರವಚನಗಳನ್ನು ಹೇಳಿಕೊಡುತ್ತಾರೆ. ಅಲ್ಲಿ ಉಚಿತವಾಗಿ ಸೈಕಲ್, ಬಿಸಿಯೂಟ, ಸಮವಸ್ತ್ರ, ಶೂ, ಹಾಲಿನ ಪುಡಿಯನ್ನು ಮನೆಗೆ ತಲುಪಿಸುತ್ತಾರೆ. ಶಾಲಾ ಶುಲ್ಕ ಇರುವುದಿಲ್ಲ. ಹೀಗೆ ಹತ್ತು ಹಲವಾರು ಸರ್ಕಾರಿ ಸೌಲಭ್ಯಗಳನ್ನು ಸರ್ಕಾರಿ ಶಾಲೆಗಳು ನೀಡುತ್ತವೆ. ಇದನ್ನು ಮನಗಂಡು ನಮ್ಮ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಈಗಾಗಲೇ ಗುಬ್ಬಿ ತಾಲ್ಲೂಕಿನಲ್ಲಿ ಮಕ್ಕಳ ಸಂಖ್ಯೆ ಇಲ್ಲವೆಂದು ಮುಚ್ಚಿದ್ದ 3 ಶಾಲೆಗಳು ಪುನರಾರಂಭಗೊಂಡಿವೆ. ಇದು ಹರ್ಷದಾಯಕವಾದ ವಿಚಾರ

      ಕಳೆದ ವರ್ಷವೂ ಆನ್‍ಲೈನ್ ಶಿಕ್ಷಣ ಈ ವರ್ಷವೂ ಆನ್‍ಲೈನ್ ಶಿಕ್ಷಣ. ನಮಗೆ ಓದಲಿಕ್ಕೆ, ವಿಷಯ ತಿಳಿದು ಕೊಳ್ಳಲಿಕ್ಕೆ ಸಮಂಜಸವಾಗಿದೆಯಾದರೂ ತಾಂತ್ರಿಕವಾಗಿ ಆಗಾಗ ಮೊಬೈಲ್ ನೆಟ್‍ವರ್ಕ್ ಸಮಸ್ಯೆಯಾಗಿ ಕೆಲವೊಂದು ವಿಷಯಗಳು ತಿಳಿದುಕೊಳ್ಳಲು ಅಸಾಧ್ಯವಾಗುತ್ತದೆ. ನಾನು ನನ್ನ ಸ್ನೇಹಿತರೊಡಗೂಡಿ ಶಾಲೆಯಲ್ಲಿ ನೇರವಾಗಿ ಕಲಿಯುತ್ತಿದ್ದ ಶಿಕ್ಷಣವೇ ಬೇರೆ, ನನ್ನ ಸ್ನೇಹಿತರೊಟ್ಟಿಗೆ ಎಲ್ಲ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದ ಮಜವೇ ಬೇರೆ ಈಗ ಒಬ್ಬಂಟಿಯಾಗಿದ್ದೇನೆ. ಶಿಕ್ಷಣವೇನೊ ಸಿಗುತ್ತಿದೆ ಆದರೆ ಒಬ್ಬಂಟಿತನ ಕಾಡುತ್ತಿದೆ.

-ವಿಶಿಷ್ಟ ಭಾರದ್ವಾಜ್, ಎಂಟನೇ ತರಗತಿ ವಿದ್ಯಾರ್ಥಿ, ಗ್ರೀನ್‍ವುಡ್ ಶಾಲೆ

      ಈಗಾಗಲೇ ನಾವು ಮಕ್ಕಳ ಮುಖ ನೋಡಿ 2 ವರ್ಷಗಳೇ ಆಗುತ್ತಾ ಬಂತು. ನಮ್ಮಲ್ಲಿ 1 ರಿಂದ 5 ನೇ ತರಗತಿಯವರೆಗೆ ಶಾಲೆ ಇದೆ. ಸರ್ಕಾರ ಆನ್‍ಲೈನ್ ಶಿಕ್ಷಣವನ್ನು ನೀಡುವ ಬಗ್ಗೆ ಹೇಳುತ್ತದೆಯಾದರೂ ನಮ್ಮ ಊರಿನಲ್ಲಿ ವಿದ್ಯುತ್ ವ್ಯವಸ್ಥೆ ನಿರಂತರವಾಗಿರುವುದಿಲ್ಲ. ನಾವು ಮಕ್ಕಳಿಗೆ ಚಂದನ ವಾಹಿನಿಯಲ್ಲಿ ಬರುವ ಪಾಠ ಪ್ರವಚನಗಳನ್ನು ಕಲಿಯಲು ತಿಳಿಸುತ್ತೇವೆ. ಆದರೆ ವಿದ್ಯುತ್ ಕೊರತೆಯಿಂದ ಇದನ್ನು ನೋಡಲು ಸಾಧ್ಯವಾಗುತ್ತಿಲ್ಲ. ಯೂಟ್ಯೂಬ್‍ನಲ್ಲಿ ಬರುವ ರೆಕಾರ್ಡೆಡ್ ಶಿಕ್ಷಣ ಕಲಿಯಲು ತಿಳಿಸುತ್ತೇವೆ ನಮ್ಮಲ್ಲಿ ಯಾವುದೇ ಮೊಬೈಲ್ ನೆಟ್‍ವರ್ಕ್ ಸಂಪರ್ಕ ಸರಿಯಾಗಿ ಸಿಗುವುದಿಲ್ಲ. ಮಕ್ಕಳು ನಮ್ಮ ಮುಂದೆ ಕುಳಿತು ಪಾಠಗಳನ್ನು ಕಲಿಯುವುದೆ ಅಥವಾ ನಾವು ಕಲಿಸುವುದೆ ಸಾಹಸದ ಕೆಲಸ. ಆದರೆ ಇಷ್ಟೆಲ್ಲ ತಾಂತ್ರಿಕತೆಯ ತೊಂದರೆಯ ನಡುವೆ ಮಕ್ಕಳು ತಮ್ಮಷ್ಟಕ್ಕೆ ತಾವು ಹೇಗೆ ಕಲಿತಾವು?

-ಚಂದ್ರಶೇಖರ್, ಶಿಕ್ಷಕ,

-ರಾಜೇಶ್ ಗುಬ್ಬಿ

 

Recent Articles

spot_img

Related Stories

Share via
Copy link
Powered by Social Snap