ಶಾಲಾರಂಭ : ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ನಿರ್ಧಾರ – ಸುರೇಶ್ ಕುಮಾರ್

ಬೆಂಗಳೂರು : 

      ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಸುರಕ್ಷತಾ ಕ್ರಮಗಳೊಂದಿಗೆ  ಶಾಲಾರಂಭ ಹಾಗೂ ಮಕ್ಕಳ ಕಲಿಕಾ ಪ್ರಕ್ರಿಯೆ ಆರಂಭಿಸುವ ಕುರಿತು ಶೀಘ್ರದಲ್ಲೇ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ ಕರೆದು ನಿರ್ಧಾರಕ್ಕೆ ಬರಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ.

      ಬುಧವಾರ ವಿಧಾನಸೌಧದಲ್ಲಿ ಖಾಸಗಿ ಅನುದಾನ ರಹಿತ ಪದವಿ ಪೂರ್ವ ಕಾಲೇಜು ಆಡಳಿತ ಮಂಡಳಿಗಳ ಒಕ್ಕೂಟದ ಪ್ರತಿನಿಧಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಎಸ್‍ಎಸ್‍ಎಲ್‍ಸಿ ಮತ್ತು ದ್ವಿತೀಯ ಪಿಯುಸಿ ತರಗತಿಗಳನ್ನು ಆರಂಭಿಸುವ ಕುರಿತು ಆರೋಗ್ಯ ಇಲಾಖೆಯ ತಜ್ಞ ಸಮಿತಿಯೊಂದಿಗೂ ಚರ್ಚಿಸಿ ಸೂಕ್ತ ನಿರ್ಧಾರ ಮಾಡಲಾಗುವುದು ಎಂದರು.

       ಹಲವು ರೀತಿಯಲ್ಲಿ ಮಕ್ಕಳನ್ನು ಕಲಿಕಾ ಪ್ರಕ್ರಿಯೆಯಲ್ಲಿ ತೊಡಗಿಸಲಾಗಿದೆಯಾದರೂ  ಅದು ತರಗತಿ ಪಾಠಗಳಷ್ಟು ಪರಿಣಾಮಕಾರಿಯಾಗಿರುವುದಿಲ್ಲ. ಆದರೆ ಬಹು ದಿನಗಳ ಕಾಲ ಮಕ್ಕಳು ಶಾಲೆಯಿಂದ ಹೊರಗುಳಿಯುವುದರಿಂದ ಆಗುತ್ತಿರುವ ಸಾಮಾಜಿಕ ಸಮಸ್ಯೆಗಳ ಹಿನ್ನೆಲೆಯಲ್ಲಿ ಸುರಕ್ಷತಾ ಕ್ರಮಗಳೊಂದಿಗೆ ಶಾಲೆಗಳನ್ನು ಆರಂಭಿಸುವುದು ಉಚಿತವೆಂದು ಇತ್ತೀಚಿಗೆ ವಿಧಾನಪರಿಷತ್ತಿನ ಪದವೀಧರ ಮತ್ತು ಶಿಕ್ಷಕ ಕ್ಷೇತ್ರದ ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ. ಮಕ್ಕಳು ಬಹುಕಾಲ ಶಾಲೆಯಿಂದ ಹೊರಗುಳಿಯುವುದರಿಂದ ಸಮಾಜದ ಮೇಲೆ ಆಗಿರುವ ಪರಿಣಾಮಗಳು ಸರ್ಕಾರದ ಗಮನಕ್ಕೂ ಬಂದಿದೆ. ಮಕ್ಕಳ ಭವಿಷ್ಯವೂ ಇದರಲ್ಲಿ ಅಡಗಿರುವುದರಿಂದ ಬಹುಕಾಲ ಮಕ್ಕಳನ್ನು ಶಾಲೆಯಿಂದ ಹೊರಗಿಡುವುದು ಸರಿಯಲ್ಲವಾದ್ದರಿಂದ ಮೇಲಿನ ತರಗತಿಗಳ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಸುರಕ್ಷತಾ ಕ್ರಮಗಳೊಂದಿಗೆ ತರಗತಿಗಳನ್ನು ಆರಂಭಿಸಲು ಸರ್ಕಾರ ಸೂಕ್ತ ಚರ್ಚೆಯ ನಂತರ   ನಿರ್ಣಯಕ್ಕೆ ಬರಲಿದೆ ಎಂದು ಸಚಿವರು ಹೇಳಿದರು.

      ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಭವಿಷ್ಯದ ಕುರಿತು ಸರ್ಕಾರ ಯಾವುದೇ ರೀತಿಯಲ್ಲೂ, ಯಾವುದೇ ಸಂದರ್ಭದಲ್ಲೂ ರಾಜಿಗೆ ಮುಂದಾಗದು. ಕೊರೋನಾ ಸೃಷ್ಟಿಸಿದ ವಿಷಮ ಪರಿಸ್ಥಿತಿಯಿಂದಾಗಿ ಸರ್ಕಾರದ ಇದುವರೆಗೂ ಖಚಿತ ತೀರ್ಮಾನ ತೆಗೆದುಕೊಳ್ಳಲಾಗಿಲ್ಲ ಎಂದು ಅವರು ಹೇಳಿದರು.

      ಶಾಲಾ-ಕಾಲೇಜುಗಳು ಆರಂಭವಾಗದೇ ಇರುವುದರಿಂದ ಪೋಷಕರ ಕಳವಳ, ಮುಂದಿನ ವ್ಯಾಸಂಗಕ್ಕಾಗಿ ರಾಷ್ಟ್ರಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಬೇಕಾದ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳ  ಭವಿಷ್ಯ ಕುರಿತ ವಿಚಾರಗಳು ಸರ್ಕಾರದ ಗಮನದಲ್ಲಿವೆ. ಈ ಎಲ್ಲ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ನಿರ್ಣಯ ಕೈಗೊಳ್ಳಲಾಗುವುದು ಎಂದು ಸುರೇಶ್ ಕುಮಾರ್ ಹೇಳಿದರು.

      ಉನ್ನತ ಶಿಕ್ಷಣ ಸಚಿವರೂ ಆದ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥ್ ನಾರಾಯಣ್ ಮಾತನಾಡಿ, ಕೋವಿಡ್ ಹಿನ್ನೆಲೆಯಲ್ಲಿ ಯಾವುದೇ ರಾಜ್ಯದಲ್ಲೂ ಶಾಲೆಗಳು ಪೂರ್ಣ ಪ್ರಮಾಣದಲ್ಲಿ ಆರಂಭಗೊಂಡಿಲ್ಲ. ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಉನ್ನತ ಶಿಕ್ಷಣ ಹಾಗೂ ವಿಶ್ವವಿದ್ಯಾನಿಲಯಗಳ ತರಗತಿಗಳನ್ನು ಆರಂಭಿಸಲಾಗಿದೆ. ಶಾಲಾ ಶಿಕ್ಷಣ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸುರಕ್ಷತಾ ಕ್ರಮಗಳೊಂದಿಗೆ ಶಾಲೆಗಳನ್ನು ಆರಂಭಿಸಲು ಶೀಘ್ರದಲ್ಲೇ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಒಂದು ನಿರ್ಧಾರಕ್ಕೆ ಬರಲಾಗುವುದು ಎಂದರು.

      ವಿಧಾನಪರಿಷತ್ ಸದಸ್ಯ ಅರುಣ್ ಶಹಾಪುರ ಶಾಲೆಗಳು ಸಕಾಲದಲ್ಲಿ ಆರಂಭವಾಗದೇ ಇರುವುದರಿಂದ ಮಕ್ಕಳಿಗೆ ಆಗಿರುವ ತೊಂದರೆಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಇದರಿಂದಾಗಿರುವ ಸಮಸ್ಯೆಗಳನ್ನು ಯನ್ನು ಸಭೆಯ ಗಮನಕ್ಕೆ  ತಂದರು.

     ಖಾಸಗಿ ಅನುದಾನ ರಹಿತ ಪದವಿ ಪೂರ್ವ ಕಾಲೇಜು ಆಡಳಿತ ಮಂಡಳಿಗಳ ಒಕ್ಕೂಟದ ಅಧ್ಯಕ್ಷ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, ಮಂಗಳೂರಿನ ಶಾರದಾ ವಿದ್ಯಾಸಂಸ್ಥೆ ಅಧ್ಯಕ್ಷ ಪ್ರೊ. ಎಂ. ಬಿ. ಪುರಾಣಿಕ್, ಎಕ್ಸ್‍ಪರ್ಟ್ ವಿದ್ಯಾಸಂಸ್ಥೆ ಅಧ್ಯಕ್ಷ ಪ್ರೊ. ನರೇಂದ್ರ ನಾಯಕ್, ಶಕ್ತಿ ಶಿಕ್ಷಣ ಸಂಸ್ಥೆ ಆಡಳಿತಾಧಿಕಾರಿ ಕೆ.ಸಿ. ನಾಯಕ್, ದಾವಣಗೆರೆ ವಿಶ್ವೇಶ್ವರಯ್ಯ ಶಿಕ್ಷಣ  ಸಂಸ್ಥೆ ಅಧ್ಯಕ್ಷ ಶ್ರೀಧರ, ಕಲ್ಲಡ್ಕ ಶ್ರೀರಾಮ ವಿದ್ಯಾಮಂದಿರದ ಸಂಚಾಲಕ ವಸಂತ ಮಾಧವ, ಹೆಬ್ರಿ ಎಸ್.ಆರ್. ಪಿಯು  ಕಾಲೇಜು ಸಂಸ್ಥೆಯ ಅಧ್ಯಕ್ಷ ನಾಗರಾಜಶೆಟ್ಟಿ ಸೇರಿದಂತೆ ರಾಜ್ಯದ ವಿವಿಧ ಭಾಗಗಳ 20ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿ, ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ವಿಶೇಷವಾಗಿ ಪದವಿ ಪೂರ್ವ ತರಗತಿಗಳನ್ನು ಆರಂಭಿಸಬೇಕಾದ ಅನಿವಾರ್ಯತೆಯನ್ನು ಮತ್ತು ಶಾಲೆಗಳ ಬಂದ್‍ನಿಂದಾಗಿ ಉದ್ಭವಿಸಿರುವ  ಗ್ರಾಮೀಣ ಪ್ರದೇಶದ ಪರಿಸ್ಥಿತಿ  ಹಾಗೂ ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಗಳನ್ನು ಸಭೆಯ ಮುಂದೆ ಎಳೆಎಳೆಯಾಗಿ ವಿವರಿಸಿದರು.

     ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಸ್ನೇಹಲ್ ಸೇರಿದಂತೆ ಶಿಕ್ಷಣ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap