ಜನವರಿ 1 ರಿಂದ ರಾಜ್ಯದಲ್ಲಿ ಶಾಲೆಗಳು ಪುನಾರಂಭ!!

ಬೆಂಗಳೂರು : 

       ಜನವರಿಯಿಂದ 1 ರಿಂದ ಶಾಲಾ ಆರಂಭ ಪ್ರಕ್ರಿಯೆ ಸುಲಲಿತವಾಗಿ ನಿರ್ವಹಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

      ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಶಿಕ್ಷಣ ಇಲಾಖೆ ಎಲ್ಲ ಪೂರ್ವ ಸಿದ್ಧತೆಗಳನ್ನು ಕೈಗೊಳ್ಳುತ್ತಿದೆ. ಲಭ್ಯವಾಗುವ ಸೀಮಿತ ಅವಧಿಯ ಹಿನ್ನೆಲೆ ಮಾರ್ಚ್ 2021ರಲ್ಲಿ ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿ ಪರೀಕ್ಷೆಗಳು ನಡೆಯುವುದಿಲ್ಲ ಎಂದು ಅವರು ಖಚಿತಪಡಿಸಿದ್ದಾರೆ.

      ಮಕ್ಕಳಿಗೆ ಹೊರೆಯಾಗದ ರೀತಿ ಪಠ್ಯಕ್ರಮವನ್ನು ಅಂತಿಮ ಗೊಳಿಸಲಾಗುತ್ತದೆ. ಕನಿಷ್ಠ ಕಲಿಕೆಗೆ ಒತ್ತು ನೀಡಲಾಗುತ್ತದೆಯಲ್ಲದೇ, ವಿಶೇಷವಾಗಿ ರಾಷ್ಟ್ರೀಯ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗುವ ಹಿರಿಯ ತರಗತಿಗಳ ವಿದ್ಯಾರ್ಥಿಗಳ ಕಲಿಕೆಯ ಅವಶ್ಯಕತೆಗಳನ್ನು ಸಹ ಗಮನದಲ್ಲಿಟ್ಟುಕೊಂಡು ಕೆಲವೇ ದಿನಗಳಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

      ವಿಶೇಷವಾಗಿ ಗ್ರಾಮೀಣ ಭಾಗಗಳ ಮಕ್ಕಳ ಹಿತದೃಷ್ಟಿಯಿಂದ ಆರಂಭಿಸಲಾದ ವಿದ್ಯಾಗಮ ಕಾರ್ಯಕ್ರಮವನ್ನು ಖಾಸಗಿ ಶಾಲೆಗಳು ಸಹ ಅಳವಡಿಸಿಕೊಳ್ಳಬೇಕೆಂದು ಸಲಹೆ ನೀಡಿರುವ ಸಚಿವರು, ಖಾಸಗಿ ಶಾಲೆಗಳ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ ಮುಕ್ತ ನಿಲುವನ್ನು ಹೊಂದಿದೆ ಎಂದಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ