ತುಮಕೂರು:
”ಶ್ರೀಗಳಿಗೆ ಸ್ವಂತ ಉಸಿರಾಟ ಶಕ್ತಿ ಕಡಿಮೆ ಇರುವುದರಿಂದ ಕೃತಕ ಉಸಿರಾಟ ಮುಂದುವರಿಸುವ ಅವಶ್ಯಕತೆ ಇದೆ ಎಂದು ಬೆಂಗಳೂರಿನ ಜಯದೇವ ಆಸ್ಪತ್ರೆಯ ಮುಖ್ಯಸ್ಥ ಡಾ.ಮಂಜುನಾಥ್ ತಿಳಿಸಿದ್ದಾರೆ.
ಇಂದು ಜಯದೇವ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ. ಮಂಜುನಾಥ್ ನೇತೃತ್ವದ ನುರಿತ ವೈದ್ಯರ ತಂಡ ಸಿದ್ದಗಂಗಾ ಶ್ರೀಗಳ ಆರೋಗ್ಯ ತಪಾಸಣೆ ನಡೆಸಿದೆ.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಮಂಜುನಾಥ್ ರವರು, ಶ್ರೀಗಳ ರಕ್ತದೊತ್ತಡ, ಹೃದಯ ಬಡಿತ ಎಲ್ಲವೂ ಸಹಜ ಸ್ಥಿತಿಗೆ ಬಂದಿದ್ದು, ಶ್ವಾಸಕೋಶದ ಸೋಂಕು ಕೂಡಾ ಕಡಿಮೆಯಾಗಿದೆ. ಆದರೆ ಶ್ರೀಗಳಿಗೆ ನಿಶ್ಯಕ್ತಿ ಇದ್ದು, ಬೆನ್ನು ಬಾಗಿರುವುದರಿಂದ ಶ್ವಾಸ ಕೋಶದ ಮೇಲೆ ಪರಿಣಾಮ ಬೀರುತ್ತಿದೆ. ಪರಿಣಾಮ ಉಸಿರಾಟಕ್ಕೆ ತೊಂದರೆಯಾಗುತ್ತಿರುವ ಕಾರಣ ಕೃತಕ ಉಸಿರಾಟ ವ್ಯವಸ್ಥೆ ಮಾಡಲಾಗಿದೆ. ಸಿದ್ಧಗಂಗಾ ಶ್ರೀಗಳು ಆದಷ್ಟು ಬೇಗ ಗುಣಮುಖರಾಗುವ ಆಶಾಭಾವನೆ ಇದೆ ಎಂದು ತಿಳಿಸಿದರು.
ರಾಜೀವಗಾಂಧಿ ಇನ್ ಸ್ಟಿಟ್ಯೂಟ್ ಆಫ್ ಚೆಸ್ಟ್ ಡಿಸಿಸಸ್ನ ನಿರ್ದೇಶಕ ಡಾ.ನಾಗರಾಜ್, ಜಯದೇವ ಆಸ್ಪತ್ರೆ ಅನಸ್ತೇಷಿಯಾ ವಿಭಾಗದ ಮುಖ್ಯಸ್ಥರಾದ ಎನ್. ಮಂಜುನಾಥ್, ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ ವೈದ್ಯರಾದ ಡಾ. ರವಿ ಅರ್ಜುನ್ ಅವರ ತಂಡ ಸೇರಿದಂತೆ, ಒಟ್ಟು ಐದು ಜನ ತಜ್ಞರ ತಂಡ ಸುಮಾರು 1 ಗಂಟೆಗಳ ಕಾಲ ಶ್ರೀಗಳ ತಪಾಸಣೆ ನಡೆಸಿ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ ಎಂದು ತಿಳಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ