ಬೆಂಗಳೂರು :
ರಾಜ್ಯದಲ್ಲಿ ಸಂಭವಿಸಿದ ಅತಿವೃಷ್ಟಿಯಿಂದಾಗಿ ಕೃಷಿ ಉತ್ಪಾದನೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದು ಕಳೆದ ವರ್ಷಕ್ಕಿಂತ 10 ಲಕ್ಷ ಟನ್ ಆಹಾರ ಧಾನ್ಯ ಕಡಿತವಾಗಲಿದೆ ಎಂದು ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಆತಂಕ ವ್ಯಕ್ತಪಡಿಸಿದ್ದಾರೆ.
ವಿಧಾನಸಭೆಯಲ್ಲಿಂದು ನಿಯಮ 69 ರಡಿ ಚರ್ಚೆ ಮುಂದುವರಿಸಿದ ಅವರು, ಇದು ರಾಜ್ಯದ ಆರ್ಥಿಕ ವ್ಯವಸ್ಥೆಗೆ ಹೊಡೆತ ನೀಡಲಿದೆ ಎಂದರು. ಈ ಮಧ್ಯೆ ರೈತ ಬೆಳೆದ ಬತ್ತಕ್ಕೆ ಸೂಕ್ತ ಬೆಂಬಲ ಬೆಲೆ ನೀಡಿ ಖರೀದಿಸುವ ಕೆಲಸ ಸರ್ಕಾರದಿಂದಾಗದೆ ರೈತರು ಆತಂಕ ಎದುರಿಸುತ್ತಿದ್ದಾರೆ. ಕೇಂದ್ರ ಸರ್ಕಾರ ನೋಡಿದರೆ ರಾಜ್ಯದ ರೈತರಿಂದ 1.10 ಲಕ್ಷ ಟನ್ ಬತ್ತವನ್ನು ಬೆಂಬಲ ಬೆಲೆ ನೀಡಿ ಖರೀದಿಸಿ ಎನ್ನುತ್ತದೆ. ನೀವು ಇನ್ನೂ ಒಂದು ಲಕ್ಷ ಟನ್ ನಷ್ಟು ಹೆಚ್ಚಿಗೆ ಖರೀದಿಸುತ್ತೇವೆ ಎಂದಿದ್ದೀರಿ. ಆದರೆ ಇದು ಸಾಲದು. ಬದಲಿಗೆ ರೈತ ಬೆಳೆದವೆಲ್ಲ ಬತ್ತವನ್ನು ಬೆಂಬಲ ಬೆಲೆ ನೀಡಿ ಖರೀದಿಸಬೇಕು. ಇವತ್ತು ರೈತರು 29 ಲಕ್ಷ ಟನ್ ಬತ್ತ ಬೆಳೆದಿದ್ದಾರೆ.ಅಷ್ಟನ್ನು ನೀವು ಬೆಂಬಲ ಬೆಲೆ ನೀಡಿ ಖರೀದಿಸಬೇಕು.ಇಲ್ಲದಿದ್ದರೆ ರೈತರ ಕಷ್ಟಕ್ಕೆ ಸ್ಪಂದಿಸಿದಂತಾಗುವುದಿಲ್ಲ ಎಂದರು.
ಇದೇ ರೀತಿ ತೊಗರಿ,ಕೊಬ್ಬರಿ ಸೇರಿದಂತೆ ಮತ್ತಿತರ ಬೆಳೆ ಬೆಳೆದವರು ಸಂಕಷ್ಟದಲ್ಲಿದ್ದಾರೆ.ಅವರ ನೆರವಿಗೆ ನಿಲ್ಲಿ ಎಂದು ಪತ್ರ ಬರೆದರೆ ಅದಕ್ಕೆ ಉತ್ತರ ನೀಡುವ ಸೌಜನ್ಯ ಸರ್ಕಾರಕ್ಕಿಲ್ಲ. ಇದರರ್ಥ ರಾಜ್ಯ ಸರ್ಕಾರಕ್ಕೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ ಎಂದವರು ಆಕ್ರೋಶ ವ್ಯಕ್ತಪಡಿಸಿದರು.
ಇವತ್ತು ಸರ್ಕಾರಕ್ಕೆ ಕಾಳಜಿ ಇದ್ದರೆ ರೈತರು ಬೆಳೆದ ಹದಿನೇಳು ಬೆಳೆಗಳಿಗೆ ಬೆಂಬಲ ಬೆಲೆ ನೀಡಿ ಖರೀದಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ